ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗೆಲ್ಲಾ ರೀಲ್ಸ್ ನೋಡದೇ, ಮಾಡದೇ ಇರೋರ ಸಂಖ್ಯೆ ತುಂಬಾನೇ ಕಡಿಮೆ, ಇಡೀ ದಿನದ ರೊಟೀನ್‌ನಿಂದ ಹಿಡಿದು ಯಾವ ಬಟ್ಟೆಗೆ ಯಾವ ಚಪ್ಪಲಿ ಹಾಕಬೇಕು ಅನ್ನೋ ರೀಲ್ಸ್ ಕೂಡ ಸಿಗುತ್ತವೆ.
ಅಡುಗೆ, ಮೇಕಪ್, ಹಬ್ಬ, ಧರ್ಮ, ಆಚರಣೆ, ಟ್ರೆಂಡ್ ಎಲ್ಲವುಗಳ ಬಗ್ಗೆ ರೀಲ್ಸ್ ಇವೆ. ತ್ರಿವಳಿ ತಲಾಖ್ ಬಗ್ಗೆ ರೀಲ್ಸ್ ಮಾಡಿದ ಪತ್ನಿಗೆ ಪತಿಯೊಬ್ಬ ನಿಜವಾಗಿಯೂ ತಲಾಖ್ ನೀಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಕುರ್ಲಾ ನಿವಾಸಿ ರುಕ್ಸಾರ್ ತನ್ನ ಪತಿ ಮುತಕೀಮ್ ಸಿದ್ದಿಕಿ ವಿರುದ್ಧ ದೂರು ದಾಖಲಿಸಿದ್ದು, ರೀಲ್ಸ್ ಮಾಡಿದ್ದಕ್ಕೆ ತಲಾಖ್ ನೀಡಿದ್ದಾರೆ, ವಿಡಿಯೋ ಡಿಲೀಟ್ ಮಾಡದೇ ಹೋದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.
ಇಷ್ಟೇ ಅಲ್ಲದೆ ಪತಿ ಹಾಗೂ ಅತ್ತೆ ಕಿರುಕುಳ ನೀಡುತ್ತಿದ್ದು, ವರದಕ್ಷಿಣೆಗೆ ಪೀಡಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮದುವೆಯಾದಾಗಿನಿಂದಲೂ ತವರು ಮನೆಯಿಂದ ಐದು ಲಕ್ಷ ತೆಗೆದುಕೊಂಡು ಬಾ ಎಂದು ಪೀಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಅನಾರೋಗ್ಯದ ಕಾರಣ ಕೆಲ ದಿನ ತಾಯಿ ಮನೆಯಲ್ಲಿರಲು ರುಕ್ಸಾರ್ ನಿರ್ಧರಿಸಿದ್ದರು. ಪತಿ ಜೊತೆಗಿರುವ ರೀಲ್ಸ್ ಒಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಪತಿ ತಕ್ಷಣವೇ ಡಿಲೀಟ್ ಮಾಡುವಂತೆ ಹೇಳಿದ್ದರು. ಆದರೆ ಆಕೆ ಡಿಲೀಟ್ ಮಾಡಲು ಒಪ್ಪಲಿಲ್ಲ. ಆಗ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.