ಶ್ರೀ ಕಾಲಭೈರವೇಶ್ವರ ದೇವಾಲಯಕ್ಕೆ ರೋಹಿಣಿ ಸಿಂಧೂರಿ ಭೇಟಿ: ಬಸಪ್ಪನ ಆಶೀರ್ವಾದ 

ಹೊಸದಿಗಂತ ವರದಿ,ಮಂಡ್ಯ :

ಮದ್ದೂರು ತಾಲೂಕು ಚಿಕ್ಕರಸಿನಕೆರೆ ಗ್ರಾಮದ ಶ್ರೀ ಕಾಲಭೈರವೇಶ್ವರ ದೇವಾಲಯಕ್ಕೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಭೇಟಿ ನೀಡಿ ಪೂಜೆ ಸಲ್ಲಿಸಿದರಲ್ಲದೆ, ಇಷ್ಟಾರ್ಥ ನೆರವೇರಲು ಬಸಪ್ಪನ ಪಾದ ಕೇಳಿ ಆಶೀರ್ವಾದ ಪಡೆದಿದ್ದಾರೆ.

ಇತಿಹಾಸ ಪ್ರಸಿದ್ಧ ಚಿಕ್ಕರಸಿನಕೆರೆ ಬಸಪ್ಪ ಇಷ್ಟಾರ್ಥ ಸಿದ್ಧಿಗೆ ಪಾದ ಕೊಟ್ಟರೆ ಅಂದುಕೊಂಡ ಕೆಲಸ ನೆರವೇರಲಿದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ರೋಹಿಣಿ ಸಿಂಧೂರಿ ಅವರು ಶುಕ್ರವಾರ ದೇವಾಲಯಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಇಷ್ಟಾರ್ಥ ನೆರವೇರಲು ಪಾದ ಕೇಳಲು ಬಸಪ್ಪನ ಮುಂದೆ ಕುಳಿತರು.

ಈ ವೇಳೆ ಸುಮಾರು 10 ನಿಮಿಷಗಳ ಕಾಲ ಬಸಪ್ಪನ ಮುಂದೆ ಕುಳಿತರೂ ಬಸಪ್ಪ ಪಾದ ನೀಡಲಿಲ್ಲ. ಇದರಿಂದ ವಿಚಲಿತರಾದ ರೋಹಿಣಿ ಅವರಿಗೆ ಮನಸ್ಸಿನಲ್ಲಿ ಇಷ್ಟಾರ್ಥ ಸಿದ್ಧಿಸುವಂತೆ ಬೇಡಿಕೊಂಡು ಪಾದ ಕೇಳುವಂತೆ ಸಲಹೆ ನೀಡಿದರು. ಅವರ ಸಲಹೆಯಂತೆ ರೋಹಿಣಿ ಅವರು ಇಷ್ಟಾರ್ಥ ನೆರವೇರುವಂತೆ ಪ್ರಾರ್ಥಿಸಿ ಪಾದ ಕೇಳಿದ ಬಳಿಕ ಬಸಪ್ಪ ಆಶೀರ್ವಾದ ಮಾಡಿ ಪಾದ ನೀಡಿತು.
ಇದರಿಂದ ಖುಷಿಯಾದ ರೋಹಿಣಿ ಸಿಂಧೂರಿ ಮಾತನಾಡಿ, ಇಷ್ಟಾರ್ಥ ಸಿದ್ಧಿಗಾಗಿ ದೇವಾಲಯಕ್ಕೆ ಆಗಮಿಸಿ ಬಸವನಲ್ಲಿ ಪ್ರಾರ್ಥಿಸಿದ್ದೇನೆ. ಮುಂಬರುವ ದಿನಗಳಲ್ಲಿ ದೇವಾಲಯಕ್ಕೆ ಆಗಮಿಸಿ ಕೈಲಾದ ಸೇವೆ ಮಾಡುವುದಾಗಿ ತಿಳಿಸಿದರು.

ಕಳೆದ ಕೆಲ ದಿನಗಳ ಹಿಂದೆ ಐಎಸ್‌ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ರೂಪಾ ಮುದ್ಗಲ್ ನಡುವೆ ಬಹಿರಂಗ ಆರೋಪ-ಪ್ರತ್ಯಾರೋಪ ನಡೆದಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಇಬ್ಬರನ್ನೂ ಸ್ಥಳ ತೋರಿಸದೆ ವರ್ಗಾವಣೆ ಮಾಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!