October 10, 2026
Saturday, October 10, 2026
spot_img

ಮಂಗಳೂರು ದುರಂತ: ಕ್ಷಣದಲ್ಲಿ ಭೂ ಸಮಾಧಿಯಾಯಿತು ಬದುಕು ಕಟ್ಟಿಕೊಳ್ಳಲು ಬಂದವರ ಕನಸು…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮರುದಿನ ಕೆಲಸಕ್ಕೆ ಹೋಗ್ಬೇಕು, ಮಕ್ಕಳನ್ನು ಶಾಲೆಗೆ ಕಳಿಸ್ಬೇಕು ಎನ್ನುವ ಆಲೋಚನೆಗಳೊಂದಿಗೆ ನಿದ್ದೆಗೆ ಜಾರಿದ ಕುಟುಂಬಕ್ಕೆ ಬೆಳಗಿನ ಜಾವಕ್ಕೆ ತಮ್ಮ ಬದುಕೇ ನಾಶವಾಗಿ ಹೋಗುತ್ತದೆ ಅನ್ನೋದು ಗೊತ್ತೇ ಇರಲಿಲ್ಲ! ಇಪ್ಪತ್ತು ವರ್ಷಗಳ ಹಿಂದೆ ಬಿಹಾರವನ್ನು ಬಿಟ್ಟು ಮಂಗಳೂರಿನ ಕಂಕನಾಡಿಗೆ ಬಂದು ಜೀವನ ಕಟ್ಟಿಕೊಂಡು, ಜೀವಗಳಿಗೆ ಜನ್ಮ ನೀಡಿ ಬೆಳೆಸುತ್ತಿದ್ದ ಕುಟುಂಬಕ್ಕೆ ಮಳೆಯೇ ಯಮನಂತೆ ಬಂದು ಎರಗಿತ್ತು. ಈ ಭೂಮಿಯಲ್ಲಿ ಬದುಕು ಕಟ್ಟಿಕೊಳ್ಳಲು ಬಂದವರ ಕನಸು ಒಂದೇ ಕ್ಷಣದಲ್ಲಿ ನುಚ್ಚುನೂರಾಗಿತ್ತು.

ಹೌದು, ಮನೆಯ ಛಾವಣಿ, ಗೋಡೆಗಳು ಕುಸಿದು ಕುಟುಂಬದ ಮೂವರು ಸದಸ್ಯರನ್ನು ಕಳೆದುಕೊಂಡ ಕರುಣಾಜನಕ ಸಂದರ್ಭವಿದು. ಮಂಗಳೂರು ನಗರದಲ್ಲಿ ಭಾರೀ ಮಳೆ ಸುರಿಯುತ್ತಿದೆ.ಇದರಿಂದಾಗಿ ಕಂಕನಾಡಿ ಪೊಲೀಸ್‌ ಠಾಣೆ ವ್ಯಾಪ್ತಿಯ ನಾಗುರಿ ಪ್ರದೇಶದಲ್ಲಿ ಮನೆ ಮೇಲೆ ತಡೆಗೋಡೆ ಕುಸಿದು ಬಿದ್ದು ಹೆಂಚಿನ ಛಾವಣಿಯ ಮನೆ ಕುಸಿದ ಪರಿಣಾಮ ಮಹಿಳೆಯೊಬ್ಬರು ಹಾಗೂ ಇಬ್ಬರು ಬಾಲಕಿಯರು ಮೃತಪಟ್ಟಿದ್ದಾರೆ.

ಘಟನೆ ಸಂಭವಿಸಿದ ವೇಳೆ ಮನೆಯಲ್ಲಿ ಮನೆಯಲ್ಲಿ ಒಟ್ಟು ಆರು ಮಂದಿ ಇದ್ದರು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿ ಪೂರ್ಣಗೊಳಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಅವಶೇಷಗಳಡಿ ಸಿಲುಕಿಕೊಂಡಿದ್ದ ಅಲ್ಕಾ (14), ಅನುಷಾ (11) ಹಾಗೂ ಬಾಲಕೃಷ್ಣ (48) ಅವರನ್ನು ಸುರಕ್ಷಿತವಾಗಿ ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವಶೇಷಗಳಡಿ ಸಿಲುಕಿದ್ದ ಶಾಂತ (46), ಅನಾಮಿಕ ಚೌರಾಸಿಯಾ (8) ಹಾಗೂ ಪರಿ (4) ಅವರನ್ನು ಹೊರತೆಗೆದಾಗ ಅವರು ಮೃತಪಟ್ಟಿರುವುದು ದೃಢಪಟ್ಟಿದೆ. ಮೂಲತಃ ಬಿಹಾರ ರಾಜ್ಯದವರಾದ ಬಾಲಕೃಷ್ಣ ಅವರ ಕುಟುಂಬ ಕಳೆದ 20 ವರ್ಷಗಳಿಂದ ಕಂಕನಾಡಿ ಗ್ರಾಮದ ಕಂಕನಾಡಿ ಪೊಲೀಸ್‌ ಠಾಣೆಯ ಹಿಂಭಾಗದ ಪ್ರದೇಶದಲ್ಲಿ ವಾಸಿಸುತ್ತಿತ್ತು ಎಂದು ತಿಳಿದುಬಂದಿದೆ. ಅಪ್ಪ ಹಾಗೂ ಇಬ್ಬರು ಮಕ್ಕಳು ಮಾತ್ರ ಉಳಿದಿದ್ದು, ಅಮ್ಮ ಹಾಗೂ ಇಬ್ಬರು ಮಕ್ಕಳು ಇಹಲೋಕ ತ್ಯಜಿಸಿದ್ದಾರೆ. ಇಡೀ ಗ್ರಾಮವೇ ಇವರ ಸ್ಥಿತಿ ನೋಡಿ ಕಣ್ಣೀರಿಡುತ್ತಿದೆ.

Must Read