ದೇಶದಲ್ಲಿ ಬೃಹತ್‌ ಧಾನ್ಯ ಸಂಗ್ರಹಣೆ ಸಾಮರ್ಥ್ಯ ವೃದ್ಧಿಗೆ 1 ಲಕ್ಷ ಕೋಟಿ ರೂ: ಕೇಂದ್ರ ಸರಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೇಂದ್ರ ಸರ್ಕಾರವು ದೇಶದಲ್ಲಿ ಧಾನ್ಯಗಳ ಸಂಗ್ರಹಣೆ ಸಾಮರ್ಥ್ಯ ಹೆಚ್ಚಿಸುವ ದಿಸೆಯಲ್ಲಿ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದೆ.ಅದ್ರಂತೆ ಸಹಕಾರಿ ವಲಯದಲ್ಲಿ ವಿಶ್ವದಲ್ಲೇ ಬೃಹತ್ ಧಾನ್ಯ ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸುವ ಯೋಜನೆಗೆ 1 ಲಕ್ಷ ಕೋಟಿ ರೂಪಾಯಿ ವ್ಯಯಿಸುವ ಯೋಜನೆಗೆ ಕೇಂದ್ರ ಸಚಿವ ಸಂಪುಟ (Union Cabinet) ಸಭೆಯು ಬುಧವಾರ ಅನುಮೋದನೆ ನೀಡಿದೆ.

ಮುಂದಿನ ಐದು ವರ್ಷದಲ್ಲಿ ದೇಶಾದ್ಯಂತ 700 ಲಕ್ಷ ಕೋಟಿ ಟನ್‌ ಧಾನ್ಯ ಸಂಗ್ರಹಣೆ ಸಾಮರ್ಥ್ಯದ ಗೋದಾಮುಗಳನ್ನು ನಿರ್ಮಿಸುವ ಗುರಿ ಕೇಂದ್ರ ಸರ್ಕಾರ ಹೊಂದಿದೆ.

ಈ ಕುರಿತು ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್‌ ಠಾಕೂರ್‌, ‘ವಿಶ್ವದಲ್ಲೇ ಸಹಕಾರಿ ವಲಯದಲ್ಲಿ ಬೃಹತ್‌ ಧಾನ್ಯ ಸಂಗ್ರಹಣಾ ಸಾಮರ್ಥ್ಯ ನಮ್ಮದಾಗಿಸಲು ಕೇಂದ್ರ ಸರ್ಕಾರ 1 ಲಕ್ಷ ಕೋಟಿ ರೂಪಾಯಿ ವ್ಯಯಿಸುವ ಯೋಜನೆ ರೂಪಿಸಿದೆ’ ಎಂದು ತಿಳಿಸಿದರು.

ಯೋಜನೆಯ ಪ್ರಾರಂಭಿಕ ಹಂತದಲ್ಲಿ ದೇಶದ ಆಯ್ದ 10 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 2 ಸಾವಿರ ಟನ್‌ ಧಾನ್ಯ ಸಂಗ್ರಹಿಸುವ ಸಾಮರ್ಥ್ಯದ ಗೋದಾಮುಗಳನ್ನು ನಿರ್ಮಿಸಲಿದೆ. ಇದಾದ ಬಳಿಕ ಗೋದಾಮುಗಳ ಸಂಖ್ಯೆಯನ್ನು ಹೆಚ್ಚಿಸಿ, ಧಾನ್ಯ ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸುವ ಯೋಜನೆಯನ್ನು ಸರ್ಕಾರ ರೂಪಿಸಿದೆ.

ಇದರಿಂದ ದೇಶದಲ್ಲಿ ಸದ್ಯ 3,100 ಲಕ್ಷ ಟನ್‌ ಧಾನ್ಯ ಉತ್ಪಾದನೆ ಮಾಡಲಾಗುತ್ತದೆ. ಆದರೆ, ಉತ್ಪಾದನೆಯಾದ ಶೇ.47ರಷ್ಟು ಧಾನ್ಯಗಳನ್ನು ಮಾತ್ರ ಗೋದಾಮುಗಳಲ್ಲಿ ಸಂಗ್ರಹಿಸಬಹುದಾಗಿದೆ. ಇದರ ಪ್ರಮಾಣವನ್ನು ಹೆಚ್ಚಿಸಲು ಸರ್ಕಾರ ಯೋಜನೆ ಜಾರಿಗೆ ತರುತ್ತದೆ. ಯೋಜನೆ ಜಾರಿಯಿಂದ ರೈತರು ಬೆಳೆದ ಧಾನ್ಯಗಳನ್ನು ಸಂಗ್ರಹಿಸಲು ಅನುಕೂಲವಾಗುತ್ತದೆ. ಹಾಗೆಯೇ, ಉತ್ತಮ ಬೆಂಬಲ ಬೆಲೆ, ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದ್ದಾಗ ಮಾತ್ರ ಧಾನ್ಯಗಳ ಮಾರಾಟಕ್ಕೆ ಅನುಕೂಲ, ಧಾನ್ಯವನ್ನು ದೂರದ ದಾಸ್ತಾನು ಕೇಂದ್ರಗಳಿಗೆ ಸಾಗಿಸುವ ವೆಚ್ಚ ತಗ್ಗಿಸುವಿಕೆ, ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ ಸೇರಿ ಹಲವು ರೀತಿಯಲ್ಲಿ ಅನುಕೂಲವಾಗಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಬೇರೆ ಅನುಮೋದನೆ:
ಸಚಿವ ಸಂಪುಟ ಸಭೆಯು ನಗರಗಳ ಏಳಿಗೆಗೆ ಸಿಟಿ ಇನ್ವೆಸ್ಟ್‌ಮೆಂಟ್ಸ್‌ ಟು ಇನೋವೇಟ್‌, ಇಂಟಿಗ್ರೇಟ್‌ ಆಯಂಡ್‌ ಸಸ್ಟೇನ್‌ (CITIIS 2.0) ಯೋಜನೆಗೆ 1,700 ಕೋಟಿ ರೂಪಾಯಿ ವಿನಿಯೋಗಿಸಲು ಅನುಮೋದನೆ ನೀಡಿದೆ. ಇದರಿಂದ ಆಯ್ದ 18 ನಗರಗಳ ಅಭಿವೃದ್ಧಿಯಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ದೇಶದ 18 ನಗರಗಳಲ್ಲಿ ಸಮಗ್ರ ತ್ಯಾಜ್ಯ ನಿರ್ವಹಣೆ, ರಾಜ್ಯ ಮಟ್ಟದಲ್ಲಿ ಹವಾಮಾನ ಆಧಾರಿತ ಸುಧಾರಣಾ ಕ್ರಮಗಳು ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಂಸ್ಥಿಕ ಬಲವರ್ಧನೆ ಹಾಗೂ ಜ್ಞಾನದ ಪ್ರಸರಣ ಕೇಂದ್ರೀಕರಿಸುವ ಮೂಲಕ ಸುಸ್ಥಿರ ಅಥವಾ ಪರಿಸರಸ್ನೇಹಿ ಆರ್ಥಿಕತೆಯನ್ನು ಉತ್ತೇಜಿಸುವ ಸ್ಪರ್ಧಾತ್ಮಕವಾಗಿ ಆಯ್ಕೆ ಮಾಡಿದ ಯೋಜನೆಗಳಿಗೆ ನೆರವು ಸಿಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!