September 10, 2026
Thursday, September 10, 2026
spot_img

ಕಿಂಡಿ ಅಣೆಕಟ್ಟುಗಳ ನಿರ್ವಹಣೆಗೆ ವರ್ಷಕ್ಕೆ 20 ಕೋ.ರೂ. ಖರ್ಚು: ಸಚಿವ ಎನ್.ಎಸ್. ಬೋಸರಾಜು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸೇತುವೆ ಸಹಿತ ಕಿಂಡಿ ಅಣೆಕಟ್ಟು, ಉಪ್ಪು ನೀರಿನ ತಡೆಗಾಗಿ ನಿರ್ಮಿಸಿರುವ ಕಿಂಡಿ ಅಣೆಕಟ್ಟುಗಳ ನಿರ್ವಹಣೆಗಾಗಿ ವರ್ಷಕ್ಕೆ ಸರಕಾರದಿಂದ 20 ಕೋ.ರೂ. ಖರ್ಚು ಮಾಡುತ್ತಿದ್ದೇವೆ. 5 ವರ್ಷಕ್ಕೆ ನಿರ್ವಹಣೆಗಾಗಿ ಟೆಂಡರ್ ಸಹ ಕರೆದು ಕೊಡಲಾಗುತ್ತಿದೆ. ಆದರೆ ಯಾರ್ಯಾರು ಏನೇನು ಕಾಮಗಾರಿ ಮಾಡಿದ್ದಾರೆ. ಅದರ ಸಂಪೂರ್ಣ ಮಾಹಿತಿ ತರಿಸಿಕೊಂಡು, ಪರಿಶೀಲನೆ ಮಾಡುವ ಮೂಲಕ ಇಲಾಖೆಯಿಂದಲೇ ನಿಗಾವಹಿಸಲಾಗುತ್ತಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಹೇಳಿದರು.

ಅವರು ಬುಧವಾರ ಕುಂದಾಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ನಮ್ಮ ಇಲಾಖೆಗೆ ವರ್ಷಕ್ಕೆ 50 ಕೋ.ರೂ. ಅಂದರೆ ತಿಂಗಳಿಗೆ 4.16 ಕೋ.ರೂ. ಬಿಡುಗಡೆಯಾಗುತ್ತದೆ. ತಡೆಗೋಡೆ ನಿರ್ಮಾಣಕ್ಕೆ ಗರಿಷ್ಠ ಅರ್ಜಿ ಬರುತ್ತಿದೆ. ಎಲ್ಲಿ ಹೆಚ್ಚಿನ ಅವಶ್ಯಕತೆ ಇದೆಯೋ ಅಲ್ಲಿಗೆ ಖಂಡಿತ ಆದ್ಯತೆ ನೆಲೆಯಲ್ಲಿ ಕೊಡುತ್ತೇವೆ. ಕರಾವಳಿ ಭಾಗದ ನದಿ ಕೊರತೆ ತಡೆಗೋಡೆ ನಿರ್ಮಾಣಕ್ಕೂ ಸಾಧ್ಯವಾದಷ್ಟು ಅನುದಾನ ನೀಡಲು ಪ್ರಯತ್ನಿಸಲಾಗುವುದು ಎಂದವರು ತಿಳಿಸಿದರು.

ನದಿಗಳ ಜೋಡಣೆ ಯೋಜನೆ ಬಗ್ಗೆ ಏನೇ ಇದ್ದರೂ ಕೇಂದ್ರ ಸರಕಾರವೇ ಕ್ರಮ ಕೈಗೊಳ್ಳಬೇಕು. ಈಗಾಗಲೇ ಇಲಾಖೆಯಿಂದ ಅನೇಕ ಬಾರಿ ಕೇಂದ್ರ ಜಲಶಕ್ತಿ ಇಲಾಖೆಗೆ ಮನವಿ ಸಲ್ಲಿಸಿದ್ದೇವೆ. ಡಿಸಿಎಂ ಡಿಕೆಶಿ ಜತೆಗೂಡಿ ಸ್ವತಃ ನಾನು ಕೇಂದ್ರ ಸಚಿವರನ್ನು ಭೇಟಿಯಾಗಿ 3,200 ಕೋ.ರೂ. ಮೊತ್ತದ ಯೋಜನೆಗಳ ಪ್ರಸ್ತಾವನೆ ಸಲ್ಲಿಸಿದ್ದೇನೆ. ಆದರೆ ಈವರೆಗೆ ಯಾವುದೇ ಅನುದಾನ ಬಂದಿಲ್ಲ ಎಂದವರು ಸ್ಪಷ್ಟಪಡಿಸಿದರು.

ನೀಟ್ – ಯುಜಿ ಪ್ರಶ್ನೆ ಪತ್ರಿಕೆ ಸೋರಿಗೆ ಬಗ್ಗೆ ಪೂರ್ತಿ ಮಾಹಿತಿಯಿಲ್ಲ. ಎಲ್ಲೂ ಯಾವ ಪ್ರಶ್ನೆ ಪತ್ರಿಕೆಗಳೂ ಸೋರಿಕೆಯಾಗಬಾರದು ಅನ್ನುವ ಕಟ್ಟುನಿಟ್ಟಿನ ಆದೇಶವಿದೆ. ಈ ಬಗ್ಗೆ ಅನೇಕ ಬಾರಿ ಚರ್ಚೆಯಾಗಿದೆ. ಕಳೆದ ಎಸ್ಸೆಸೆಲ್ಸಿ ಪರೀಕ್ಷೆಯ ವೇಳೆ ಸೋರಿಕೆಯಾಗದ ಹಾಗೇ ಕ್ರಮ ಕೈಗೊಂಡಿದ್ದೇವೆ. ಈ ರೀತಿಯ ಸೋರಿಕೆ ಆಗಬಾರದು. ಅಂತವರ ಮೇಲೆ ಮೊದಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ರಾಜ್ಯದಲ್ಲಿ ಮೊದಲಿದ್ದ ಹಾಗೇ ಸಿಇಟಿ ಜಾರಿಗೆ ರಾಜ್ಯ ಸಚಿವ ಸಂಪುಟವೇ ತೀರ್ಮಾನ ಕೈಗೊಳ್ಳಲಿದೆ. ಈ ವಿಚಾರ ಚರ್ಚೆಯಲ್ಲಿದೆ. ನಾನು ಹೇಳಲು ಬರುವುದಿಲ್ಲ. ಸರಕಾರದ ನಿರ್ಧಾರವೇ ಅಂತಿಮ ಎಂದವರು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !