ಆರೆಸ್ಸೆಸ್ ಎಬಿಪಿಎಸ್ 2022: ಸ್ವಾವಲಂಬಿ ಭಾರತಕ್ಕೆ ತಕ್ಕ ಉದ್ಯೋಗ ನಿರ್ಮಾಣಕ್ಕೆ ಪ್ರೋತ್ಸಾಹಿಸುವ ನಿರ್ಣಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಗುಜರಾತಿನ ಕರ್ಣಾವತಿಯಲ್ಲಿ ಮೂರು ದಿನಗಳ ಕಾಲ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭಾ ಭಾನುವಾರ ಮುಕ್ತಾಯಗೊಂಡಿದೆ. ರಾ.ಸ್ವ. ಸಂಘದ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ಅವರು ಭಾನುವಾರ ಮಧ್ಯಾಹ್ನದ ಪತ್ರಿಕಾಗೋಷ್ಟಿಯಲ್ಲಿ ಅಭಾಪ್ರಸದ ನಿರ್ಣಯಗಳ ಬಗ್ಗೆ ವಿವರಿಸಿದರು.
ಈ ಪೈಕಿ, ಸ್ವಾವಲಂಬಿ ಭಾರತಕ್ಕೆ ಅನುವಾಗುವ ಉದ್ಯೋಗ ನಿರ್ಮಾಣದ ಪರ್ವವೊಂದನ್ನು ಆಗ್ರಹಿಸುವ, ಅದನ್ನು ಎಲ್ಲ ಆಯಾಮಗಳಲ್ಲಿ ಬೆಂಬಲಿಸುವ ನಿರ್ಣಯವನ್ನು ಪ್ರಮುಖವಾಗಿ ಮಾಡಲಾಗಿದೆ.
ಮಾನವ ಕೇಂದ್ರಿತವಾದ, ಕಾರ್ಮಿಕರಿಗೆ ಉದ್ಯೋಗ ನೀಡುವ, ಪರಿಸರಕ್ಕೆ ಸುಸ್ಥಿರವೆನಿಸುವ ಭಾರತೀಯ ಮಾದರಿಗೆ ಒತ್ತು ನೀಡಬೇಕು ಎಂದು ಸಭೆ ಆಗ್ರಹಿಸಿದೆ.
“ಹಳ್ಳಿಯ ಅರ್ಥವ್ಯವಸ್ಥೆ, ಸೂಕ್ಷ್ಮ ಮತ್ತು ಸಣ್ಣಮಟ್ಟದ ಕೃಷಿ ಆಧರಿತ ಉದ್ದಿಮೆಗಳು ಪ್ರಾಶಸ್ತ್ಯ ಪಡೆಯಬೇಕು. ಇಲ್ಲೆಲ್ಲ ಸ್ಥಳೀಯವಾಗಿ ಲಭ್ಯವಿರುವ ವೈಶಿಷ್ಟ್ಯ ಮತ್ತು ಪ್ರತಿಭೆಗಳಿಗೆ ಮನ್ನಣೆ ಸಿಗಬೇಕು. ಕರಕುಶಲ, ಆಹಾರ ಸಂಸ್ಕರಣೆ, ಗೃಹ ಕೈಗಾರಿಕೆ ಮತ್ತು ಕುಟುಂಬ ಆಧರಿತ ಕೈಗಾರಿಕೆಗಳು ದೇಶದೆಲ್ಲೆಡೆ ಬಲಗೊಳ್ಳಬೇಕಾದ ಅಗತ್ಯವಿದೆ.” ಎಂದಿರುವ ಅಭಾಪ್ರಸ, ಈ ನಿಟ್ಟಿನಲ್ಲಿ ಕೊಡುಗೆ ನೀಡುತ್ತಿರುವ ಶೈಕ್ಷಣಿಕ ಹಾಗೂ ಔದ್ಯೋಗಿಕ ಸಂಸ್ಥೆಗಳು ಪ್ರಶಂಸಾರ್ಹ ಎಂದಿದೆಯಲ್ಲದೇ, ಸ್ವದೇಶಿ ಮತ್ತು ಸ್ವಾವಲಂಬನೆ ನಮ್ಮ ಮಂತ್ರವಾಗಬೇಕು ಎಂದು ಆಶಿಸಿದೆ.
“ಭಾರತದ ಆಮದು ಕಡಿಮೆ ಮಾಡುವ ನಿಟ್ಟಿನಲ್ಲಿ ಉದ್ಯಮ-ಕೈಗಾರಿಕೆಗಳು ಬೆಳೆಯಬೇಕು. ಈ ನಿಟ್ಟಿನಲ್ಲಿ ಯುವಕರನ್ನು ಕೇವಲ ಉದ್ಯೋಗಾಕಾಂಕ್ಷಿಗಳನ್ನಾಗಿ ಮಾಡದೇ ಉದ್ಯಮಶೀಲ ಮನಸ್ಥಿತಿ ಹೊಂದಿದವರಾಗಿ ರೂಪುಗೊಳಿಸುವುದೂ ಮುಖ್ಯ. ಸಮಾಜದ ಸ್ತರದಲ್ಲಿ ಇದಕ್ಕೆ ಅಗತ್ಯ ತರಬೇತು, ಕೌಶಲವೃದ್ಧಿ ಅವಕಾಶಗಳನ್ನು ತೆರೆದಿಡಬೇಕು. ಅತಿವೇಗದಲ್ಲಿ ಬದಲಾಗುತ್ತಿರುವ ಜಾಗತಿಕ ಸ್ಥಿತಿಗತಿ ಹಾಗೂ ತಂತ್ರಜ್ಞಾನ ಅವಶ್ಯಗಳಿಗೆ ಪೂರಕವಾಗಿ ಯುವಜನತೆಗೆ ತರಬೇತು ದೊರೆಯುವಂತಾಗಬೇಕು” ಎಂದಪ ಆಶಿಸಿರುವ ಸಭೆಯು, ಡಿಜಿಟಲ್ ಅರ್ಥವ್ಯವಸ್ಥೆ ಹಾಗೂ ಹಸಿರು ತಂತ್ರಜ್ಞಾನ ವಲಯದಲ್ಲಿ ರಫ್ತು ಅವಕಾಶಗಳನ್ನು ಬಳಸಿಕೊಳ್ಳುವಂತ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಒತ್ತು ನೀಡಿದೆ.
• ಕೊರೋನಾ ಕಾಲದಲ್ಲಿ ಆನ್ಲೈನ್ ಶಿಕ್ಷಣ ಅನಿವಾರ್ಯವಾಯಿತು. ಅದು ಪರಿಸ್ಥಿತಿ ನಿಭಾವಣೆಗೆ ಸರಿಯಾದರೂ, ಶಿಕ್ಷಕರ ಸಮ್ಮುಖದಲ್ಲಿ ಕಲಿಯುವ ಪ್ರಕ್ರಿಯೆಗೆ ಅದು ಎಂದಿಗೂ ಪರ್ಯಾಯವಾಗದು ಎಂದು ಸಭೆ ಅಭಿಪ್ರಾಯಪಟ್ಟಿದೆ. ಹಾಗೆಂದೇ, ಶಿಕ್ಷಣವಂಚಿತರಿಗೆ ಸಹಕರಿಸುವ ಎಲ್ಲ ಪ್ರಯತ್ನಗಳು ಸಮಾಜದ ಸ್ತರದಲ್ಲಿ ಮತ್ತೆ ತೆರೆದುಕೊಳ್ಳಬೇಕು ಎಂದು ಒತ್ತಿ ಹೇಳಿದೆ.
• ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದವರಿಗೆ ಕೇವಲ ಬ್ರಿಟಿಷರನ್ನು ಹೊರಗೋಡಿಸುವ ಗುರಿ ಇದ್ದಿರಲಿಲ್ಲ. ಅವರೆಲ್ಲರ ಕಲ್ಪನೆಯಲ್ಲಿ ಸಮೃದ್ಧ ಭಾರತ ನಿರ್ಮಾಣದ ಕಲ್ಪನೆ ಇತ್ತು. ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷದ ಸಂದರ್ಭದಲ್ಲಿ ಆ ಆಯಾಮಗಳ ಬಗ್ಗೆ ಕೆಲಸಗಳಾಗಬೇಕೆಂದು ಸಭೆ ಅಭಿಪ್ರಾಯಪಟ್ಟಿದೆ.
ಪ್ರಶ್ನೋತ್ತರದ ಸಂದರ್ಭದಲ್ಲಿ ಸರಕಾರ್ಯವಾಹರು ಹೇಳಿದ್ದು
• ಧಾರ್ಮಿಕ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಸಾಮಾಜಿಕ ಸ್ವಾಸ್ಥ್ಯವನ್ನು ಅದು ಹದಗೆಡಿಸುವಂತಿರಬಾರದು. ಶಾಲೆಯಲ್ಲಿ ಸಮವಸ್ತ್ರದ ನಿಯಮಗಳಿದ್ದಾಗ ಅಲ್ಲಿ ಧಾರ್ಮಿಕತೆ ಆಧಾರದಲ್ಲಿ ಆಗ್ರಹಗಳು ಸರಿಯಲ್ಲ.
• ಜೈ ಶ್ರೀರಾಮ ಎನ್ನುವುದು ಒಂದು ಅಭಿವಾದನ, ದೇಶದ ಬಹುತೇಕ ಭಾಗಗಳಲ್ಲಿ ಇದನ್ನು ಎದುರಿನವರನ್ನು ಮಾತನಾಡಿಸುವ ಒಕ್ಕಣೆಯಾಗಿ ಬಳಸುತ್ತಾರೆ. ಅದನ್ನು ಧಾರ್ಮಿಕತೆ ಹೆಸರಲ್ಲಿ ಆಕ್ಷೇಪಿಸುವುದು ಸರಿಯಲ್ಲ.
• ಗ್ರಾಮೀಣ ಭಾಗಗಳಲ್ಲಿ ರೈತರ ಜತೆ ಸಾಪ್ತಾಹಿಕ ಸಮಾಲೋಚನೆ ಕಾರ್ಯಕ್ರಮಗಳನ್ನು ಕಾರ್ಯಕರ್ತರು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ.
• ನಾವು ಸಮಾಜಕ್ಕಾಗಿ ಭೂಮಿಕೆ ತಯಾರು ಮಾಡುತ್ತೇವೆಯೇ ಹೊರತು, ಚುನಾವಣೆಗಲ್ಲ. ಹಾಗೆಂದು ಚುನಾವಣೆಯಂಥ ಶ್ರೇಷ್ಟ ಸಂದರ್ಭದಲ್ಲಿ ಜನರು ತಮ್ಮ ಹಕ್ಕನ್ನು ತಪ್ಪದೇ ಚಲಾಯಿಸಬೇಕೆಂದು ಪ್ರೇರೇಪಿಸುವ ಕೆಲಸವನ್ನು ಸಂಘ ಮಾಡುತ್ತಲೇ ಬಂದಿದೆ. ಚುನಾವಣೆಯ ಕರ್ತವ್ಯಗಳನ್ನು ನಿಭಾಯಿಸುವುದು ರಾಷ್ಟ್ರಧರ್ಮ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!