ಗಮಕ ಕಲಾವಿದ ಕೇಶವಮೂರ್ತಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಆರ್ ಎಸ್ ಎಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಗಮಕ ಕಲಾವಿದ, ಪದ್ಮಶ್ರೀ ಪುರಸ್ಕೃತ ಹಿರಿಯ ವಿದ್ವಾಂಸರಾದ ಶಿವಮೊಗ್ಗದ ಹೊಸ‌ಹಳ್ಳಿಯ ಕೆ.ಆರ್. ಕೇಶವಮೂರ್ತಿಗಳ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಂತಾಪ ಸೂಚಿಸಿದೆ.

ಭಾರತೀಯ ಪರಂಪರಾಗತ ಗಮಕ ಕಲೆಯನ್ನು ಜೀವನದ ಉ‌ಸಿರಾಗಿಸಿಕೊಂಡಿದ್ದ ಕೇಶವಮೂರ್ತಿಯವರದ್ದು ಓರ್ವ ಕಲಾತಪಸ್ವಿಯ ಬದುಕು‌. ಗಮಕ ಕಲೆಯ ಮೂಲಕ ನಾಡಿನ ವಿದ್ವತ್ ಪರಂಪರೆ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿಹಿಡಿದ ಅಧ್ವರ್ಯು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಮೇರು ಸಾಧಕ. ಅವರ ವಿದ್ವತ್ತು, ಜೀವನಾನುಭವ, ತ್ಯಾಗ, ಪ್ರಾಣಿಮಾತ್ರದಲ್ಲಿ ಅವರಿಗಿದ್ದ ಪ್ರೀತಿ ಹಾಗೂ ಕರುಣೆ, ಸಮಾಜೋನ್ನತಿಯ ಬಗೆಗಿನ ಕಳಕಳಿ ಇವುಗಳನ್ನು ದೇಶ ಗುರುತಿಸಿದೆ. ಅವುಗಳು ಮುಂದಿನ ಪೀಳಿಗೆಗೆ ಆದರ್ಶದ ಉದಾಹರಣೆಯಾಗಲಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೊತೆಗೆ ಅನ್ಯೋನ್ಯ ಸಂಬಂಧ ಹೊಂದಿದ್ದ ಕೇಶವಮೂರ್ತಿಗಳು ಅನೇಕ ಕಾರ್ಯಕರ್ತರೊಂದಿಗೆ ನಿಕಟ ಸಂಪರ್ಕದಲ್ಲಿದ್ದರು. ನಮ್ಮ ಕಾರ್ಯದ ಮೇಲೆ ಸದಾ ಸ್ನೇಹಾಶೀಷಗಳನ್ನು ಧಾರೆಯೆರೆಯುತ್ತಿದ್ದರು. ಅವರ ಅಗಲಿಕೆ ನಮ್ಮೆಲ್ಲರಿಗೆ ದುಃಖ ತಂದಿದೆ. ಅವರ ಆತ್ಮಕ್ಕೆ ಭಗವಂತನು ಸದ್ಗತಿಯನ್ನು ನೀಡಲಿ, ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದ ಸದಸ್ಯರಿಗೆ, ಶಿಷ್ಯಕೋಟಿಗಳಿಗೆ, ಅಪಾರ ಅಭಿಮಾನಿಗಳಿಗೆ ಭಗವಂತನು ನೀಡಲಿ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಸಂತಾಪ ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!