ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಲಕ್ಕಾಡ್ ಜಿಲ್ಲೆಯಲ್ಲಿ 2022ರಲ್ಲಿ ನಡೆದ ಆರ್‌ಎಸ್‌ಎಸ್ ನಾಯಕ ಶ್ರೀನಿವಾಸನ್ ಹತ್ಯೆ ಪ್ರಕರಣದ ಆರೋಪಿಗಳಾದ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ 10 ಮಂದಿ ಸದಸ್ಯರಿಗೆ ಇಂದು ಕೇರಳ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ಮತ್ತು ಪಿ.ವಿ.ಬಾಲಕೃಷ್ಣನ್ ಅವರಿದ್ದ ಪೀಠವು, ಶಫೀಕ್, ಜಫರ್ ಬಿ, ಜಮ್ಶೀರ್ ಹೆಚ್, ಅಬ್ದುಲ್ ಬಸಿತ್, ಮುಹಮ್ಮದ್ ಶಫೀಕ್ ಕೆ, ಅಶ್ರಫ್ ಕೆ, ಜಿಷದ್ ಬಿ, ಅಶ್ರಫ್ ಮೌಲವಿ ಮತ್ತು ಸಿರಾಜುದ್ದೀನ್ ಎಂಬ ಆರೋಪಿಗಳಿಗೆ ಜಾಮೀನು ನೀಡಿದೆ.
ಎಲ್ಲ 10 ಆರೋಪಿಗಳಿಗೆ ತಲಾ ಒಂದು ಲಕ್ಷ ರೂಪಾಯಿ ಮೊತ್ತದ ಬಾಂಡ್ ಮತ್ತು ಇಬ್ಬರು ಶೂರಿಟಿ ಆಧಾರದಲ್ಲಿ ಜಾಮೀನು ನೀಡಲಾಗಿದೆ. ಆದರೆ, ಆರೋಪಿಗಳು ವಿಶೇಷ ನ್ಯಾಯಾಲಯದ ಅನುಮತಿಯಿಲ್ಲದೇ ಕೇರಳ ರಾಜ್ಯದಿಂದ ಹೊರ ಹೋಗುವಂತಿಲ್ಲ. ಮತ್ತು ಎನ್‌ಐಎ ತನಿಖಾಧಿಕಾರಿಗೆ ತಮ್ಮ ಸಂಪೂರ್ಣ ವಾಸದ ವಿಳಾಸ, ಮೊಬೈಲ್ ಸಂಖ್ಯೆಗಳನ್ನೂ ನೀಡಬೇಕು ಎಂದು ಷರತ್ತು ವಿಧಿಸಿದೆ.