ಕೇವಲ 20 ಎಸೆತಗಳಲ್ಲಿ 40 ರನ್ ಸಿಡಿಸಿದ ಸಚಿನ್: T20 ವಿಶ್ವಕಪ್‌ಗೆ ಓಪನರ್ ಆಗಿ ಆಯ್ಕೆ ಮಾಡುವಂತೆ ಫ್ಯಾನ್ಸ್‌ ಬೇಡಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನೀವು 1990ರ ದಶಕದಿಂದ ಕ್ರಿಕೆಟ್ ಆನಂದಿಸುತ್ತಾ ಬಂದವರಾಗಿದ್ದರೆ, ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್‌ಗೆ ಬಂದಾಗಲೆಲ್ಲಾ ಮೈದಾನದಲ್ಲಿ ಮೊಳಗುವ “ಸಚಿನ್, ಸಚಿನ್” ಕೂಗುಗಳು ನಿಮಗೆ ಚಿರಪರಿಚಿತವಾಗಿರಲೇಬೇಕು.
ಸಚಿನ್‌ ನಿವೃತ್ತಿ ಘೋಷಿಸಿ 10 ವರ್ಷಗಳೇ ಸಮೀಪಿಸುತ್ತಿದೆ ಆದರೆ, ಸಚಿನ್‌ ಮೈದಾನಕ್ಕೆ ಇಳಿಯುತ್ತಾರೆಂದರೆ ಇಂದಿಗೂ ಲಕ್ಷಾಂತರ ಮಂದಿ ಅಭಿಮಾನಿಗಳು ಮೈದಾನದಲ್ಲಿ ಅವರ ಆಟವನ್ನು ಹಿಂಬಾಲಿಸುತ್ತಾರೆ. ಪ್ರಸ್ತುತ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್‌ ಮೈದಾನಕ್ಕಿಳಿದಿದ್ದಾರೆ. ಇಂಗ್ಲೆಂಡ್ ಲೆಜೆಂಡ್ಸ್ ವಿರುದ್ಧ ಅಕ್ಷರಶಃ ಅಬ್ಬರಿಸಿದ ಸಚಿನ್ ಕೇವಲ 20 ಎಸೆತಗಳಲ್ಲಿ 40 ರನ್ ಸಿಡಿಸಿದಿದ್ದಾರೆ. ನಿವೃತ್ತಿಯ ಒಂಬತ್ತು ವರ್ಷಗಳ ನಂತರವೂ ರನ್ ಗಳಿಸುವ ಹಸಿವು ಸ್ವಲ್ಪವೂ ಕಡಿಮೆಯಾಗಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಅವರ ಆಟದ ವೈಭವ ಅಭಿಮಾನಿಗಳಿಗೆ ರೋಮಾಂಚನ ನೀಡಿದೆ. ಮಾಸ್ಟರ್ ಅಭಿಮಾನಿಗಳಿಗೆ ಹಿಂದಿನ ದಿನಗಳನ್ನು ನೆನಪಿಸಿದ್ದಾರೆ.
ಮೊದಲು ಬ್ಯಾಟ್ ಮಾಡಿದ ಲೆಜೆಂಡ್ಸ್‌ ಪರ ಇನ್ನಿಂಗ್ಸ್‌ ಆರಂಭಿಸಿದ ಸಚಿನ್‌ ಸ್ಟೀಫನ್ ಪ್ಯಾರಿ ಅವರ ಎಸೆತದಲ್ಲಿ ಬೌಂಡರಿಯೊಂದಿಗೆ ಪ್ರಾರಂಭಿಸಿದರು. ಆ ಬಳಿಕ ಮತ್ತೂ ಒಂದು ಬೌಂಡರಿ ಸಿಡಿಸಿ ರಂಜಿಸಿದರು. ಆ ಬಳಿಕ ಇಂಗ್ಲಿಷ್ ವೇಗಿ ಕ್ರಿಸ್ ಟ್ರೆಮ್ಲೆಟ್ ಬೌಲಿಂಗ್‌ ನಲ್ಲಿ ಬ್ಯಾಕ್-ಟು-ಬ್ಯಾಕ್ ಮನಮೋಹಕ ಸಿಕ್ಸರ್‌ಗಳನ್ನು ಸಿಡಿಸಿ ಮೈದಾನದಲ್ಲಿ ವಿದ್ಯುತ್‌ ಸಂಚಾರ ಮೂಡಿಸಿದರು. ಅವರು ಔಟಾಗುವ ಹೊತ್ತಿಗೆ,‌ ಇಂಡಿಯಾ ಲೆಜೆಂಡ್ಸ್ ಮೊದಲ ಆರು ಓವರ್‌ಗಳಲ್ಲಿ 67 ರನ್‌ಗಳನ್ನು ಸಿಡಿಸಿತ್ತು. ಮಾಸ್ಟರ್ ಕೇವಲ 20 ಎಸೆತಗಳಲ್ಲಿ ಮೂರು ಸಿಕ್ಸರ್‌ಗಳು ಮತ್ತು ಬೌಂಡರಿಗಳನ್ನು ಹೊಂದಿದ್ದ 40 ರನ್ ಕಲೆಹಾಕಿದ್ದರು. ಈ ಪಂದ್ಯದಲ್ಲಿ ಇಂಡಿಯಾ ಲೆಜೆಂಡ್ಸ್ ಇಂಗ್ಲೆಂಡ್ ಲೆಜೆಂಡ್ಸ್ ಅನ್ನು 40 ರನ್ ಗಳಿಂದ ಸೋಲಿಸಿತು.
ಮಾಸ್ಟರ್‌ ಬ್ಲಾಸ್ಟರ್‌ ಅತ್ತ ಮೈದಾನದಲ್ಲಿ ಅಬ್ಬರಿಸುತ್ತಲೇ ಇತ್ತ ಟ್ವಿಟರ್‌ ನಲ್ಲಿ #SachinTendulkar ಹೆಸರು ಟ್ರೆಂಡ್ ಆಗಿದೆ. ಮುಂಬರುವ T20 ವಿಶ್ವಕಪ್ 2022 ನಲ್ಲಿ ಸಚಿನ್‌ ರನ್ನು ಟಿಂ ಇಂಡಿಯಾದ ಬ್ಯಾಕ್-ಅಪ್ ಓಪನರ್ ಆಗಿ ಆಯ್ಕೆ ಮಾಡಬೇಕು ಎಂದು ಹಲವಾರು ಅಭಿಮಾನಿಗಳು ಬಿಸಿಸಿಐ ಮುಂದೆ ಬೇಡಿಕೆ ಇಡುತ್ತಿದ್ದಾರೆ!. ‌

ಮಾಸ್ಟರ್‌ ಇಂದಿನ ಯುವ ಆಟಗಾರರಷ್ಟೇ ಫಿಟ್ನೆಸ್‌ ಹೊಂದಿದ್ದಾರೆ. ಅವರ ಆಟವನ್ನು ನೋಡುತ್ತಿದ್ದರೆ ಟಿ 20 ವಿಶ್ವಕಪ್‌ ಗೆ ಆಯ್ಕೆ ಮಾಡಿದರೆ ಅಲ್ಲಿಯೂ ಅಬ್ಬರಿಸುವುದು ಗ್ಯಾರೆಂಟಿ ಎಂದು ಅಭಿಮಾನಿಗಳು ಕಾಮೆಂಟ್‌ ಹಂಚಿಕೊಳ್ಳುತ್ತಿದ್ದಾರೆ.

ಇಂಡಿಯಾ ಲೆಜೆಂಡ್ಸ್ ತಂಡ:
ನಮನ್ ಓಜಾ(w), ಸಚಿನ್ ತೆಂಡೂಲ್ಕರ್(c), ಸುರೇಶ್ ರೈನಾ, ಸ್ಟುವರ್ಟ್ ಬಿನ್ನಿ, ಯುವರಾಜ್ ಸಿಂಗ್, ಯೂಸುಫ್ ಪಠಾಣ್, ಮನ್‌ಪ್ರೀತ್ ಗೋನಿ, ಇರ್ಫಾನ್ ಪಠಾಣ್, ಪ್ರಗ್ಯಾನ್ ಓಜಾ, ರಾಜೇಶ್ ಪವಾರ್, ರಾಹುಲ್ ಶರ್ಮಾ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!