ಮಕ್ಕಳ ಕಳ್ಳರು ಬಂದಿದ್ದಾರೆಂಬ ವದಂತಿ: ಶಾಲೆ ಬಳಿ ಜಮಾಯಿಸಿದ ಪೋಷಕರು

ಹೊಸದಿಗಂತ ವರದಿ ಅಂಕೋಲಾ:

ಮಕ್ಕಳು ಹಿಡಿಯುವ ತಂಡ ಬಂದಿದೆ ಎಂದು ಯಾರೋ ಕಿಡಿಗೇಡಿಗಳು ಹಬ್ಬಿಸಿದ ವದಂತಿ ಶಾಲಾ ಮಕ್ಕಳ ಪಾಲಕರಲ್ಲಿ ಆತಂಕದ ವಾತಾವರಣಕ್ಕೆ ಕಾರಣವಾದ ಘಟನೆ ತಾಲೂಕಿನ ತೆಂಕಣಕೇರಿ ಗ್ರಾಮದಲ್ಲಿ ನಡೆದಿದೆ.
ಕಾರಿನಲ್ಲಿ ಮಕ್ಕಳು ಹಿಡಿಯುವ ತಂಡ ಬಂದಿದೆ ಎಂದು ಯಾರೋ ಹಬ್ಬಿಸಿದ ಸುಳ್ಳು ಸುದ್ದಿ ಒಬ್ಬರ ಬಾಯಿಂದ ಮತ್ತೊಬ್ಬರಿಗೆ ಹರಡಿ ರಕ್ಕೆ ಪುಕ್ಕ ಪಡೆದುಕೊಂಡು ಕೆಲವು ಪಾಲಕರು ತಮ್ಮ ಮಕ್ಕಳನ್ನು ಕರೆದೊಯ್ಯಲು ಶಾಲೆಯ ಬಳಿ ಬಂದು ನಿಲ್ಲಲು ಕಾರಣವಾಗಿದೆ.

ಕಣ್ಣಾರೆ ಕಂಡಿರುವಕ್ಕಿಂತ ಹೆಚ್ಚು ಬಣ್ಣ ಹಚ್ಚಿದ ಸುದ್ದಿ ಹರಡುತ್ತಿದ್ದು ಮಕ್ಕಳು ಹಿಡಿಯುವವರು ಬಂದಿದ್ದಾರೆ, ಯಾರನ್ನೋ ಹಿಡಿಯುವ ಪ್ರಯತ್ನ ನಡೆಸಿದರು, ಹಾಗೆ ಬಂದರು, ಹೀಗೆ ಮಾಡಿದರು ಎಂಬ ವದಂತಿಗಳು ಬಾಯಿಂದ ಬಾಯಿಗೆ ಹರಡಿ ಜನರಲ್ಲಿ ಭೀತಿಯ ವಾತಾವರಣ ಮೂಡಲು ಕಾರಣವಾಗಿ ಅಪರಿಚಿತರು ಬಂದರೆ ಸಂಶಯದ ದೃಷ್ಟಿಯಿಂದ ಕಾಣುವಂತಾಗಿದೆ.

ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಇಂಥ ಸುಳ್ಳು ವದಂತಿ ಹರಡುತ್ತಿದೆ.
ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲ ತಾಣಗಳಲ್ಲಿ ಮಕ್ಕಳು ಹಿಡಿಯುವ ತಂಡದ ಕುರಿತು ಸುಳ್ಳು ಸುದ್ದಿ ಮತ್ತು ವಿಡಿಯೋಗಳು ಹರಿದಾಡಿದ್ದು ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠೆ ಡಾ ಸುಮನ್ ಪನ್ನೇಕರ್ ಅವರು ಪ್ರಕಟಣೆ ನೀಡಿ ಇಂಥ ಸುಳ್ಳು ವದಂತಿಗಳನ್ನು ನಂಬಬಾರದು ಎಂದು ತಿಳಿಸಿದ್ದರಲ್ಲದೇ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

ಪೊಲೀಸ್ ಇಲಾಖೆಯ ಎಚ್ಚರಿಕೆ ನಂತರವೂ ಮಕ್ಕಳು ಹಿಡಿಯುವವರ ಕುರಿತು ವದಂತಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದ್ದು ಜೊತೆಗೆ ಕೆಲವರು ಕಪೋಲ ಕಲ್ಪಿತ ಕಥೆಗಳನ್ನು ಕಟ್ಟಿ ಜನರಲ್ಲಿ ಸುಮ್ಮನೇ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!