2022ರಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಏಷ್ಯನ್‌ ಕರೆನ್ಸಿ ಎನಿಸಿಕೊಂಡ ರೂಪಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕೋವಿಡ್‌ ನಂತರದ ಕಾಲಘಟ್ಟದಲ್ಲಿ ಜಾಗತಿಕವಾಗಿ ತಲೆದೂರಿದ ಹಣದುಬ್ಬರವನ್ನು ನಿಯಂತ್ರಿಸಲು ಯುಎಸ್‌ ಫೆಡರಲ್‌ ರಿಸರ್ವ್‌ ಕಟ್ಟುನಿಟ್ಟಾದ ಕ್ರಮ ಕೈಗೊಂಡಿದ್ದರಿಂದ ಯುಎಸ್‌ ಡಾಲರ್‌ ಮೇಲ್ಮುಖವಾಗಿ ಚಿಮ್ಮಿದರ ಪರಿಣಾಮ ಭಾರತೀಯ ರುಪಾಯಿ ಸೇರಿದಂತೆ ಇತರ ಕರೆನ್ಸಿಗಳು ನೆಲಕಚ್ಚಿವೆ. ಅದರಲ್ಲೂ ಭಾರತೀಯ ರೂಪಾಯಿಯು 2022 ರಲ್ಲಿ 10.14 ಶೇಕಡಾದಷ್ಟು ಕುಸಿತಗೊಂಡು ಅತ್ಯಂತ ಕಳಪೆ ಪ್ರದರ್ಶನ ನೀಡಿದ ಏಷ್ಯನ್‌ ಕರೆನ್ಸಿ ಎಂದೆನಿಸಿದೆ. ಇದು 2013ರ ನಂತರ ಕಂಡ ಅತ್ಯಂತ ದೊಡ್ಡ ವಾರ್ಷಿಕ ಕುಸಿತವಾಗಿದೆ.

ಡಾಲರ್‌ ಮೌಲ್ಯವು 2015ರಿಂದ ಅದರ ಅತಿದೊಡ್ಡ ವಾರ್ಷಿಕ ಲಾಭದತ್ತ ಸಾಗಿದರೆ 2021 ರ ಅಂತ್ಯದ ವೇಳೆಗೆ 74.33ಗಳಷ್ಟಿದ್ದ ರೂಪಾಯಿ ಮೌಲ್ಯವು 2022ರ ಅಂತ್ಯದ ವೇಳೆಗೆ ಒಂದು ಡಾಲರ್‌ ಗೆ 82.72 ರೂಪಾಯಿಗೆ ತಲುಪಿದೆ. ಇದು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಸಂಪೂರ್ಣ ಪರಿಭಾಷೆಯಲ್ಲಿ ಭಾರತದ ಚಾಲ್ತಿ ಖಾತೆ ಕೊರತೆಯನ್ನು ಗರಿಷ್ಠ ಮಟ್ಟಕ್ಕೆ ತಳ್ಳಿತು.

ಆದರೆ ಇತ್ತೀಚಿನ ಕೆಲವರದಿಗಳ ಪ್ರಕಾರ 2023ರಲ್ಲಿ ಸರಕುಗಳ ಬೆಲೆ ಸರಾಗಗೊಳಿಸುವ ಮೂಲಕ ಭಾರತೀಯ ರುಪಾಯಿಯ ಮೌಲ್ಯವರ್ಧನೆಯಾಗಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಮಾರುಕಟ್ಟೆ ಪಾಲುದಾರರು 2023ರಲ್ಲಿ ರೂಪಾಯಿ ಮೌಲ್ಯವರ್ಧನೆಯೊಂದಿಗೆ ವ್ಯಾಪಾರ ಮಾಡಲಿದ್ದು ವಿದೇಶಿ ಹೂಡಿಕೆದಾರರು ಭಾರತೀಯ ಷೇರುಗಳನ್ನು ಖರೀದಿಸುವುದನ್ನು ಮುಂದುವರೆಸುತ್ತಾರೆ ಎಂದು ವಿಶ್ಲೇಷಣೆಗಳು ಹೇಳಿವೆ.

ಆದರೂ “ಫೆಡ್ ನಿರೀಕ್ಷಿತಕ್ಕಿಂತ ಹೆಚ್ಚು ಕಾಲ ದರಗಳನ್ನು ಹೆಚ್ಚಿಸಬಹುದು ಮತ್ತು ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಲ್ಲಿನ ನಿಧಾನಗತಿಯು ದೀರ್ಘಕಾಲದ ಹಿಂಜರಿತಕ್ಕೆ ತಿರುಗಿದರೆ, ಭಾರತದ ರಫ್ತುಗಳು ತೀವ್ರವಾಗಿ ಕುಸಿಯಬಹುದು ಇದು ರುಪಾಯಿಗೆ ಎರಡು ಪ್ರಮುಖ ಅಪಾಯಗಳಾಗಿವೆ” ಎಂದು ತಜ್ಞರು ಅಭಿಪ್ರಾಯಿಸಿರುವುದಾಗಿ ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!