ರುಪಾಯಿ ಕುಸಿತ: ಏನು ? ಏಕೆ ? ಎತ್ತ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಮೆರಿಕದ ಡಾಲರ್‌ ಎದುರು ರುಪಾಯಿಯು ದಿನೇ ದಿನೇ ಕುಸಿಯಿತ್ತಿದೆ. ಇದುವರೆಗಿನ ಸಾರ್ವಕಾಲಿಕ ಕನಿಷ್ಟ ಮಟ್ಟವನ್ನು ರುಪಾಯಿ ದಾಖಲಿಸಿದ್ದು ಒಂದು ಡಾಲರ್‌ ಬೆಲೆಯು 80.13 ರುಪಾಯಿಗಳಷ್ಟಾಗಿದೆ. ಇದು ಇನ್ನೂ ಕೆಲ ತಿಂಗಳ ಕಾಲ ಮುಂದುವರೆಯಲಿದ್ದು ರುಪಾಯಿ ಮೌಲ್ಯವು ಕುಸಿದು 82ರವೆರಗೂ ತಲುಪಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರುಪಾಯಿ ಮೌಲ್ಯ ಕುಸಿತ ಎಂದರೇನು? ಏಕಾಗುತ್ತಿದೆ ಇತ್ಯಾದಿ ಅಂಶಗಳ ಕುರಿತಾದ ಚಿಕ್ಕ ವಿವರಣೆ ಇಲ್ಲಿದೆ.

ಡಾಲರ್-ರುಪಾಯಿ ವಿನಿಮಯ ದರ ಎಂದರೇನು ?
ಹೆಸರೇ ಸೂಚಿಸುವಂತೆ ಇದು ರುಪಾಯಿ ಮತ್ತು ಡಾಲರ್‌ ವಿನಿಮಯ ಗೊಳ್ಳುವ ದರವಾಗಿದ್ದು ಸರಳವಾಗಿ ಹೇಳುವುದಾದರೆ ಒಂದು ಡಾಲರ್‌ ಖರೀದಿಸಲು ಪಾವತಿಸಬೇಕಾದ ರೂಪಾಯಿಗಳ ಮೊತ್ತವಾಗಿದೆ. ಡಾಲರ್‌ ಅನ್ನು ಜಾಗತಿಕ ಕರೆನ್ಸಿ ಎಂದು ಒಪ್ಪಿಕೊಂಡಿರುವುರಿಂದ ನಾವು ನಮ್ಮ ಬಹುತೇಕ ಆಮದುಗಳಿಗೆ ಇದೇ ಡಾಲರ್‌ ನಲ್ಲೇ ಪಾವತಿ ಮಾಡುತ್ತೇವೆ.

ರುಪಾಯಿ ಕುಸಿಯಲು ಕಾರಣವೇನು?
ದಿನೇ ದಿನೇ ಡಾಲರ್‌ ಬಲವಾಗುತ್ತಿದ್ದು, ವಿದೇಶಿಹೂಡಿಕೆಯ ಹೊರಹರಿವು, ಏರುತ್ತಿರುವ ಕಚ್ಚಾ ತೈಲ ಬೆಲೆಗಳು, ಇವೆಲ್ಲವೂ ರುಪಾಯಿ ಕುಸಿಯಲು ಕಾರಣವಾಗಿವೆ. ಅಲ್ಲದೇ ಭಾರತವು ರಫ್ತು ಮಾಡುವುದಕ್ಕಿಂತಲೂ ಆಮದು ಮಾಡಿಕೊಳ್ಳುವ ಪ್ರಮಾಣ ಹೆಚ್ಚಿದೆ. ಇದನ್ನೇ ಚಾಲ್ತಿಖಾತೆ ಕೊರತೆ (CAD) ಎಂದು ಕರೆಯಲಾಗುತ್ತದೆ. ಈ ಚಾಲ್ತಿಖಾತೆ ಕೊರತೆ ಹೆಚ್ಚಿದಾಗ ದೇಶಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು.

ವಿದೇಶಿ ಬಂಡಿವಾಳದ ಹೊರಹರಿವು ಮತ್ತು ರುಪಾಯಿ ಕುಸಿತ
2022ರ ಆರಂಭದಿಂದಲೂ ಅನೇಕ ವಿದೇಶಿ ಬಂಡವಾಳ ಹೂಡಿಕೆದಾರರರು ಭಾರತದ ಷೇರುಗಳಲ್ಲಿ ಹೂಡಿಕೆ ಮಾಡಿದ ಹಣವನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ. ಏಕೆಂದರೆ ಅಮರಿಕದಲ್ಲಿ ಬಡ್ಡಿದರಗಳು ವೇಗವಾಗಿ ಏರಿಕೆಯಾಗುತ್ತಿದೆ. ಇದರಿಂದ ಅಲ್ಲಿನ ಹೂಡಿಕೆದಾರರಿಗೆ ನಮ್ಮ ದೇಶಕ್ಕಿಂತ ಹೆಚ್ಚಿನ ಲಾಭ ಅಲ್ಲೇ ಸಿಗುತ್ತಿದೆ ಹೀಗಾಗಿ ಅವರು ತಮ್ಮ ಹೂಡಿಕೆಗಳನ್ನು ಹಿಂಪಡೆಯುತ್ತಿದ್ದಾರೆ. ಇದು ರುಪಾಯಿ ಬೇಡಿಕೆ ಮತ್ತಷ್ಟು ಕುಸಿಯಲು ಕಾರಣವಾಗಿದೆ.

ಕುಸಿತದಿಂದ ಏನಾಗುತ್ತದೆ ?
ಇದರಿಂದ ನಾವು ವಿದೇಶದಿಂದ ಖರೀದಿ ಮಾಡಬೇಕಾದ ವಸ್ತುಗಳಿಗೆ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಉದಾಹರಣೆಗೆ ಕಚ್ಚಾ ತೈಲಗಳು, ಕಚ್ಚಾ ತೈಲ ಖರೀದಿಸಲು ನಾವು ಡಾಲರ್‌ ರೂಪದಲ್ಲಿ ಹಣವನ್ನು ಪಾವತಿಸಬೇಕಾಗುತ್ತದೆ. ಬೆಲೆ ಏರಿಕೆಗೆ ಇದು ಕಾರಣವಾಗುತ್ತದೆ. ಅದರಲ್ಲೂ ನಮ್ಮ ಆಮದು ಹೆಚ್ಚಿರುವುದರಿಂದ ಇದು ನಮ್ಮ ಚಾಲ್ತೀ ಖಾತೆ ಕೊರತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ

ರುಪಾಯಿಯೊಂದೇ ಕುಸಿಯುತ್ತಿದೆಯೇ?
ಸರಳವಾದ ಉತ್ತರ ಇಲ್ಲ. ಡಾಲರ್‌ ಎದುರಲ್ಲಿ ಯುರೋ, ಜಪಾನ್ ಯೆನ್‌ ಸೇರಿದಂತೆ ಬಹುತೇಕ ಎಲ್ಲಾ ಕರೆನ್ಸಿಗಳು ಡಾಲರ್‌ ಎದುರಲ್ಲಿ ಕುಸಿತಗೊಳ್ಳುತ್ತಿವೆ. ಹಾಗೆ ನೋಡುವುದಾದರೆ ರುಪಾಯಿಯು ಯುರೋದ ಎದುರಲ್ಲಿ ಸ್ವಲ್ಪ ಏರಿಕೆ ಕಂಡಿದೆ.

ಕುಸಿತದಿಂದ ನಷ್ಟವೇ ಹೆಚ್ಚಿದೆಯೆ ಅಥವಾ ಲಾಭವೂ ಇದೆಯೇ?
ಬೆಲೆ ಏರಿಕೆಯು ಅಧಿಕ ಪ್ರಮಾಣದಲ್ಲಿ ಜನಸಾಮಾನ್ಯರ ಮೇಲೆ ಹೊರೆಯಾಗುವುದು ಸತ್ಯವೇ ಆದರೂ ರುಪಾಯಿ ಅಪಮೌಲ್ಯೀಕರಣದಿಂದ ಕೆಲವೊಂದು ಧನಾತ್ಮಕ ಪರಿಣಾಮಗಳೂ ಇವೆ. ನಾವು ಆಮದಿಗೆ ಹೆಚ್ಚು ಪಾವತಿ ಮಾಡಬೇಕಾಗುವುದು ಒಂದೆಡೆಯಾದರೆ ಇನ್ನೊಂದೆಡೆ ನಮ್ಮ ರಫ್ತಿನ ಪ್ರಮಾಣದಲ್ಲಿ ಏರಿಕೆಯಾಗುತ್ತದೆ. ಹೇಗೆಂದರೆ ನಮ್ಮ ದೇಶದ ವಸ್ತುಗಳು ಇತರ ದೇಶದ ವಸ್ತುಗಳಿಗಿಂತ ಅಗ್ಗವಾಗಿ ಲಭ್ಯವಾಗುತ್ತದೆ. ಇದರಿಂದ ಇತರ ದೇಶಗಳು ನಮ್ಮ ದೇಶದ ವಸ್ತುಗಳ ಖರೀದಿಗೆ ಹೆಚ್ಚಿನ ಒಲವು ತೋರಿಸುತ್ತಾರೆ. ಇದು ನಮ್ಮ ರಫ್ತಿನ ಏರಿಕೆಗೆ ಕಾರಣವಾಗುತ್ತದೆ.

ಬಲಿಷ್ಠ ಆರ್ಥಿಕತೆಗಳಾದ ಚೀನಾ ಜಪಾನ್‌ ನಂತಹ ದೇಶಗಳು ಕೆಲವೊಮ್ಮೆ ತಮ್ಮ ಕರೆನ್ಸಿಗಳನ್ನು ಉದ್ದೇಶಪೂರ್ವಕವಾಗಿ ಅಪಮೌಲ್ಯೀಕರಣಗೊಳಿಸುತ್ತಾರೆ. ಇದರಿಂದ ಅವರ ವಸ್ತುಗಳು ಅಗ್ಗವಾಗಿ ಬೇಡಿಕೆ ಹೆಚ್ಚುತ್ತದೆ.

ರುಪಾಯಿ ಕುಸಿತದ ನಿರ್ವಹಣೆ ಮತ್ತು RBI
ಭಾರತೀಯ ರಿಸರ್ವ್‌ ಬ್ಯಾಂಕ್‌ ರುಪಾಯಿಯ ಮೌಲ್ಯವನ್ನು ನಿರ್ವಹಣೆ ಮಾಡುತ್ತದೆ. ರೂಪಾಯಿ ವಿನಿಮಯ ದರದಲ್ಲಿ ತೀವ್ರ ಏರಿಳಿತಗಳಿಗೆ ಆರ್‌ಬಿಐ ಅನುಮತಿ ನೀಡುವುದಿಲ್ಲ. ಹೆಚ್ಚು ಏರಿಕೆ ಅಥವಾ ಹೆಚ್ಚು ಇಳಿಕೆ ಎರಡೂ ಸಂದರ್ಭದಲ್ಲಿ ಆರ್‌ ಬಿ ಐ ಮಧ್ಯ ಪ್ರವೇಶಿಸಿ ಏರಿಳಿತಗಳನ್ನು ನಿರ್ಬಂಧಿಸುತ್ತದೆ. ತನ್ನ ವಿದೇಶಿ ವಿನಿಮಯದಿಂದ ಮಾರುಕಟ್ಟೆಯಲ್ಲಿ ಡಾಲರ್‌ಗಳನ್ನು ಮಾರಾಟ ಮಾಡುವ ಮೂಲಕ ಪತನವನ್ನು ಕಡಿಮೆ ಮಾಡುತ್ತದೆ. ಇದರಿಂದ ಡಾಲರ್‌ ಹಾಗೂ ರುಪಾಯಿ ಬೇಡಿಕೆ ನಡುವಿನ ಅಂತರ ಕಡಿಮೆಯಾಗುತ್ತದೆ. ಅಲ್ಲದೇ ಹೆಚ್ಚು ಮೌಲ್ಯವರ್ಧನೆಯ ಸಂದರ್ಭದಲ್ಲಿ ಅದು ಮಾರುಕಟ್ಟೆಯಿಂದ ಹೆಚ್ಚುವರಿ ಡಾಲರ್‌ಗಳನ್ನು ಖರೀದಿಸುತ್ತದೆ. ಇದು ಭಾರತದ ವಿದೇಶಿ ವಿನಿಮಯ ಸಂಗ್ರಹದಲ್ಲಿ ಏರಿಕೆಗೆ ಕಾರಣವಾಗುತ್ತದೆ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!