ವ್ಲಾದಿವೊಸ್ತೊಕ್ ಸಭೆ ಉದ್ದೇಶಿಸಿ ಪ್ರಧಾನಿ ಮಾತು- ರಷ್ಯದ ಈ ಪ್ರದೇಶ ಭಾರತಕ್ಕೇಕೆ ಮುಖ್ಯ ಗೊತ್ತೇ?

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ರಷ್ಯದ ವ್ಲಾದಿವೊಸ್ತೊಕ್ ನಲ್ಲಿ ನಡೆಯುತ್ತಿರುವ ‘ಈಸ್ಟರ್ನ್ ಇಕಾನಾಮಿಕ್ ಫೋರಂ’ ಸಭೆಯನ್ನುದ್ದೇಶಿಸಿ ಅಂತರ್ಜಾಲ ಮುಖೇನ ಮಾತನಾಡಿದ್ದಾರೆ.

“ಭಾರತವು ರಷ್ಯದ ಪೂರ್ವದಂಚಿನಲ್ಲಿ ಔಷಧ ಕ್ಷೇತ್ರ ಮತ್ತು ವಜ್ರಕ್ಕೆ ಸಂಬಂಧಿಸಿದ ಹೂಡಿಕೆಗಳನ್ನು ಮಾಡಿದೆ. ಆರ್ಕಟಿಕ್ ಸಂಬಂಧಿಸಿದ ವಿಷಯಗಳಲ್ಲಿ ಮತ್ತು ಇಂಧನ ಕ್ಷೇತ್ರದಲ್ಲಿ ರಷ್ಯದ ಜತೆಗೆ ಸಹಭಾಗಿತ್ವ ವೃದ್ಧಿಸುವುದಕ್ಕೆ ಭಾರತ ಉತ್ಸುಕವಾಗಿದೆ. ವ್ಲಾಡಿವೊಸ್ತೊಕ್ ನಗರದಲ್ಲಿ ಭಾರತದ ಪ್ರತಿನಿಧಿ ಕಚೇರಿ ಸ್ಥಾಪಿಸಿ 30 ವರ್ಷಗಳು ತುಂಬುತ್ತಿವೆ ಹಾಗೂ ಆ ನಗರದಲ್ಲಿ ಅಂಥ ಕಚೇರಿ ಹೊಂದಿದ ಮೊದಲ ದೇಶ ಭಾರತವೇ ಆಗಿತ್ತು” ಎಂದು ಪ್ರಧಾನಿ ಮೋದಿ ತಮ್ಮ ಮಾತುಗಳಲ್ಲಿ ‘ಈಸ್ಟರ್ನ್ ಇಕಾನಾಮಿಕ್ ಫೋರಂ’ ಮಹತ್ವವನ್ನು ಬಣ್ಣಿಸಿದ್ದಾರೆ.

ಏನಿದು ರಷ್ಯದ ಫಾರ್ ಈಸ್ಟ್?

ರಷ್ಯದ ಪೂರ್ವದ ಅಂಚಿನ ಪ್ರದೇಶಗಳು ಅಲ್ಲಿನ ಶೀತ ವಾತಾವರಣದ ಕಾರಣದಿಂದ ಕಡಿಮೆ ಜನಸಾಂದ್ರತೆ ಹೊಂದಿವೆ. ಆದರೆ ನೈಸರ್ಗಿಕವಾಗಿ ಸಂಪದ್ಭರಿತವಾಗಿರುವ ಈ ಪ್ರದೇಶಗಳನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವ ನಡೆಯನ್ನು ರಷ್ಯ ಸರ್ಕಾರ ಇತ್ತೀಚಿನ ವರ್ಷಗಳಲ್ಲಿ ಇಟ್ಟಿದೆ. ಇದಕ್ಕೆ ಬಹುದೊಡ್ಡ ಸಹಭಾಗಿತ್ವ ಒದಗಿರುವುದು ಭಾರತದಿಂದಲೇ. ಈ ಪ್ರದೇಶದ ಸಾಧ್ಯತೆಗಳ ಅನ್ವೇಷಣೆಗೆ ತಂತ್ರಜ್ಞಾನ ಸಹಾಯವೂ ಸೇರಿದಂತೆ ಮಾನವ ಸಂಪನ್ಮೂಲಗಳಿಗಾಗಿ ಭಾರತದತ್ತ ನೋಡುತ್ತಿದೆ ರಷ್ಯ.

2019ರಲ್ಲಿ ಮೋದಿ ಸರ್ಕಾರ ರಷ್ಯದ ಪೂರ್ವದಂಚಿನ ಪ್ರಾಂತ್ಯಗಳ ಅಭಿವೃದ್ಧಿಗೆ 1 ಬಿಲಿಯನ್ ಡಾಲರುಗಳ ಸಾಲ ಸಹಾಯವನ್ನು ಘೋಷಿಸಿತ್ತು. ಬಹಳ ಮುಖ್ಯವಾಗಿ, ವ್ಲಾದಿವೊಸ್ತೊಕ್ ನಗರದಿಂದ ಚೆನ್ನೈಗೆ ನೌಕಾಮಾರ್ಗದ ವ್ಯಾಪಾರ ಕಾರಿಡಾರ್ ಅಭಿವೃದ್ಧಿಯ ಕನಸನ್ನು ಈಡೇರಿಸಿಕೊಳ್ಳುವುದಕ್ಕೆ ಮೋದಿ ಮತ್ತು ಪುಟಿನ್ ಕಾರ್ಯಗತರಾಗಿದ್ದಾರೆ. ಈ ಮಾರ್ಗವು ರಷ್ಯ-ಭಾರತದ ಸಾಂಪ್ರದಾಯಿಕ ವ್ಯಾಪಾರ ಮಾರ್ಗಕ್ಕಿಂತ ಹತ್ತಿರ ಮತ್ತು ಪರಿಣಾಮಕಾರಿ ಆಗಿರಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!