ನಾಳೆ ‘ಕರ್ತವ್ಯ ಪಥ’ ಉದ್ಘಾಟಿಸಿ, ನೇತಾಜಿ ಪ್ರತಿಮೆ ಅನಾವರಣಗೊಳಿಸಲಿದ್ದಾರೆ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನವೀಕರಿಸಲಾದ ʼಕರ್ತವ್ಯ ಪಥʼ ಉದ್ಘಾಟನೆಗೆ ಸಿದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸಂಜೆ 7 ಗಂಟೆಗೆ ಇಂಡಿಯಾ ಗೇಟ್‌ ಸಮೀಪವಿರುವ ‘ಕರ್ತವ್ಯ ಪಥ’ವನ್ನು ಉದ್ಘಾಟಿಸಲಿದ್ದಾರೆ. ಜೊತೆಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.
ಈ ಹಿಂದೆ ಅಧಿಕಾರದ ಐಕಾನ್ ಆಗಿದ್ದ ʼರಾಜಪಥʼ ದ ಹೆಸರನ್ನು ಪ್ರಜಾಪ್ರಭುತ್ವದಲ್ಲಿ ಜನರ ಪ್ರತಿನಿಧಿತ್ವದ ಸಂಕೇತನಾಮವಾದ ʼಕರ್ತವ್ಯʼ ಪಥವೆಂದು ಬದಲಿಸಲಾಗಿದೆ. ಬ್ರಿಟಿಷರ ಕಾಲವನ್ನು ನೆನಪಿಸುವ ಹೆಸರುಗಳು ಮತ್ತು ಗುರುತುಗಳನ್ನು ದೇಶದಿಂದ ಅಳಿಸಿ ಹಾಕಲಾಗುತ್ತದೆ ಎಂದು ಪ್ರಧಾನಿ ಕಾರ್ಯಾಲಯದ ಹೇಳಿಕೆ ತಿಳಿಸಿದೆ.
 ನವೀಕರಿಸಲಾದ ʼಕರ್ತವ್ಯ ಪಥʼವು ಕರ್ತವ್ಯ ಪಥ ಸುಂದರವಾದ ಉದ್ಯಾನಗಳು ಹಾಗೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಇದಲ್ಲದೆ ಹೊಸ ಪಾದಚಾರಿ ಸುರಂಗ ಮಾರ್ಗಗಳು, ಸುಧಾರಿತ ಪಾರ್ಕಿಂಗ್ ಸ್ಥಳಗಳು, ಹೊಸ ಪ್ರದರ್ಶನ ಫಲಕಗಳು ಮತ್ತು ನವೀಕರಿಸಲಾದ ರಾತ್ರಿ ದೀಪಗಳು ಸೇರಿದಂತೆ ಹಲವಾರು ವೈಶಿಷ್ಟ್ಯಗಳಿಂದ ಕಂಗೊಳಿಸುತ್ತಿದೆ. ಇದು ಘನ ತ್ಯಾಜ್ಯ ನಿರ್ವಹಣೆ, ಮಳೆನೀರು ನಿರ್ವಹಣೆ, ಬಳಸಿದ ನೀರಿನ ಮರುಬಳಕೆ, ಮಳೆನೀರು ಕೊಯ್ಲು, ನೀರಿನ ಸಂರಕ್ಷಣೆ ಮತ್ತು ಶಕ್ತಿ-ಸಮರ್ಥ ಬೆಳಕಿನ ವ್ಯವಸ್ಥೆಗಳಂತಹ ವ್ಯವಸ್ಥೆಗಳನ್ನು ಒಳಗೊಂಡಿದೆ.
ಈ ಸಂದರ್ಭದಲ್ಲಿ ಇಂಡಿಯಾ ಗೇಟ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಪ್ರಧಾನಿ ಅನಾವರಣಗೊಳಿಸಲಿದ್ದಾರೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಗ್ರಾನೈಟ್‌ನಿಂದ ನಿರ್ಮಿಸಲಾಗಿದೆ. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ನೇತಾಜಿಯವರ ಅಪಾರ ಕೊಡುಗೆಯ ಸ್ಮರಣಾರ್ಥ ಹಾಗೂ ಅವರಿಗೆ ದೇಶವು ಋಣಿಯಾಗಿರುವ ಸಂಕೇತವಾಗಿ ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ.
ಶಿಲ್ಪಿ ಅರುಣ್ ಯೋಗಿರಾಜ್ ಅವರು ಈ ಪ್ರತಿಮೆಯನ್ನು ರಚಿಸಿದ್ದು, 28 ಅಡಿ ಎತ್ತರದ ಪ್ರತಿಮೆಯನ್ನು ಏಕಶಿಲೆಯ ಗ್ರಾನೈಟ್ ಕಲ್ಲಿನಿಂದ ಕೆತ್ತಲಾಗಿದೆ ಮತ್ತು 65 ಮೆಗಾಟನ್‌ ತೂಕವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!