Saturday, June 10, 2023

Latest Posts

ಉಕ್ರೇನ್ ನ ಆಸ್ಪತ್ರೆಯ ಮೇಲೆ ಕ್ಷಿಪಣಿ ದಾಳಿ ನಡೆಸಿದ ರಷ್ಯಾ: ಇದು ಮಾನವೀಯತೆ ಮೇಲೆ ಎಸಗಿದ ಅಪರಾಧ ಎಂದ ಜೆಲೆನ್‌ಸ್ಕಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಕ್ರೇನ್ ಡ್ನಿಪ್ರೋ ನಗರದಲ್ಲಿ ಇರುವ ಆಸ್ಪತ್ರೆಯೊಂದರ ಮೇಲೆ ಶುಕ್ರವಾರ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ. ಈ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, 23 ಮಂದಿ ಗಾಯಗೊಂಡಿದ್ದಾರೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್‌ಸ್ಕಿ ಈ ದಾಳಿಯನ್ನು ಮಾನವೀಯತೆ ಮೇಲೆ ಎಸಗಿದ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕ್ಷಿಪಣಿ ದಾಳಿ ನಡೆದ ಬಳಿಕ ಕಟ್ಟಡದಿಂದ ಬೆಂಕಿ ಹಾಗೂ ಹೊಗೆ ಏಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕ್ಷಿಪಣಿ ದಾಳಿ ನಡೆದ ಕೂಡಲೇ ರಕ್ಷಣಾ ಕಾರ್ಯಗಳೂ ಯುದ್ಧೋಪಾದಿಯಲ್ಲಿ ಆರಂಭ ಆದವು. ಆಸ್ಪತ್ರೆಯ ಮೇಲಿನ ಮಹಡಿಯು ಕ್ಷಿಪಣಿ ದಾಳಿಯಿಂದ ಸಂಪೂರ್ಣ ಧ್ವಂಸ ಆಗಿದೆ. ಮೂರು ಮಹಡಿಯ ಈ ಕಟ್ಟಡದಲ್ಲಿ ಮೂರನೇ ಮಹಡಿ ಸಂಪೂರ್ಣ ಧ್ವಂಸ ಆಗಿದ್ದು, ಉಳಿದೆರಡು ಮಹಡಿಗಳೂ ಹಾನಿಗೀಡಾಗಿವೆ. ಈ ಘಟನೆಯಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆ ಆಗಬಹುದು ಎಂಬ ಆತಂಕವೂ ವ್ಯಕ್ತವಾಗಿದೆ.

ರಷ್ಯಾದ ಕ್ಷಿಪಣಿ ದಾಳಿ ವಿಚಾರ ಹೊರಬಿದ್ದ ಕೂಡಲೇ ಟ್ವೀಟ್ ಮಾಡಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್‌ಸ್ಕಿ, ಕ್ಷಿಪಣಿ ದಾಳಿ ನಡೆದ ಆಸ್ಪತ್ರೆಯಲ್ಲಿ ಮಾನಸಿಕ ರೋಗಿಗಳು ಹಾಗೂ ಪಶು ಚಿಕಿತ್ಸಾಲಯ ಇತ್ತು ಎಂದು ಮಾಹಿತಿ ನೀಡಿದ್ಧಾರೆ. ಅಷ್ಟೇ ಅಲ್ಲ, ರಷ್ಯಾ ಮತ್ತೊಂದು ಬಾರಿ ಕ್ಷಿಪಣಿ ದಾಳಿ ನಡೆಸಿದೆ. ಇದು ಮಾನವೀಯತೆ ಮೇಲೆ ನಡೆದ ಮತ್ತೊಂದು ಅಪರಾಧ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಯಾವುದೇ ಒಂದು ದುಷ್ಟ ರಾಷ್ಟ್ರ ಮಾತ್ರ ಆಸ್ಪತ್ರೆಗಳ ಮೇಲೆ ದಾಳಿ ನಡೆಸಬಲ್ಲದು. ಈ ಆಸ್ಪತ್ರೆ ಮೇಲೆ ದಾಳಿ ನಡೆಸುವ ಹಿಂದೆ ಯಾವುದೇ ಮಿಲಿಟರಿ ಉದ್ದೇಶ ಇಲ್ಲ. ಇದನ್ನು ಸಂಪೂರ್ಣವಾಗಿ ರಷ್ಯಾ ದೇಶದ ಭಯೋತ್ಪಾದನೆ ಎಂದು ಕರೆಯಬಹುದು ಎಂದು ಜೆಲೆನ್‌ಸ್ಕಿ ಕಿಡಿ ಕಾರಿದ್ಧಾರೆ.

ಈ ಪ್ರಾಂತ್ಯದ ಗವರ್ನರ್ ಕೂಡಾ ಘಟನೆ ಕುರಿತಾಗಿ ಮಾಹಿತಿ ನೀಡಿದ್ದಾರೆ. 69 ವರ್ಷ ವಯಸ್ಸಿನ ವೃದ್ಧರೊಬ್ಬರು ಘಟನೆಯಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ಧಾರೆ. ಮೃತರು ಈ ಮಾರ್ಗದಲ್ಲಿ ಸಾಗಿ ಬರುತ್ತಿದ್ದ ವೇಳೆ ರಷ್ಯಾದ ಭಯೋತ್ಪಾದಕರು ರಾಕೆಟ್ ದಾಳಿ ನಡೆಸಿದ್ದಾರೆ ಎಂದು ಗವರ್ನರ್ ಆಕ್ರೋಶ ಹೊರ ಹಾಕಿದ್ದಾರೆ.

ಇದಲ್ಲದೆ ಕ್ಷಿಪಣಿ ದಾಳಿ ನಡೆದ ಕಟ್ಟಡದಿಂದ ಮತ್ತೊಬ್ಬ ವ್ಯಕ್ತಿಯ ಮೃತ ದೇಹ ಹೊರಗೆ ತೆಗೆದಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ. ಜೊತೆಯಲ್ಲೇ ಆಸ್ಪತ್ರೆಯಲ್ಲಿದ್ದವರ ಪೈಕಿ 21 ರಿಂದ 23 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಉಕ್ರೇನ್ ರಕ್ಷಣ ಸಚಿವಾಲಯ ಕೂಡಾ ಈ ಘಟನೆಯನ್ನು ಅತಿ ಭೀಕರ ಯುದ್ಧಾಪರಾಧ ಎಂದು ಹೇಳಿದ್ದು ಜಿನೆವಾ ಒಪ್ಪಂದದ ಉಲ್ಲಂಘನೆ ಎಂದು ಅವರು ಹೇಳಿದ್ದಾರೆ. ಯುದ್ಧದಲ್ಲಿ ಸೈನಿಕರು ಹಾಗೂ ಸಾಮಾನ್ಯ ನಾಗರಿಕರನ್ನು ಯಾವ ರೀತಿ ನಡೆಸಿಕೊಳ್ಳಬೇಕು ಎಂಬ ಮಾರ್ಗ ಸೂಚಿಯನ್ನು ಜಿನೆವಾ ಒಪ್ಪಂದದಲ್ಲಿ ಹೇಳಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲ ದೇಶಗಳೂ ಯುದ್ಧಗಳ ಸಂದರ್ಭದಲ್ಲಿ ಪಾಲಿಸಬೇಕಾದ ನಿಯಮಗಳನ್ನು ಜಿನೆವಾ ಒಪ್ಪಂದದಲ್ಲಿ ವಿವರಿಸಲಾಗಿದೆ. ಈ ಒಪ್ಪಂದದ ಮಾರ್ಗಸೂಚಿಗಳಿಗೆ ಎಲ್ಲ ರಾಷ್ಟ್ರಗಳೂ ಬದ್ಧರಾಗಿ ಇರಬೇಕು. ಆದ್ರೆ, ಈ ಒಪ್ಪಂದದ ನಿಯಮಗಳನ್ನು ರಷ್ಯಾ ಉಲ್ಲಂಘನೆ ಮಾಡುತ್ತಲೇ ಇದೆ. ನಿರಂತರವಾಗಿ ಯುದ್ಧಾಪರಾಧದಲ್ಲಿ ತೊಡಗಿದೆ ಎಂದು ಉಕ್ರೇನ್ ಆಪಾದಿಸಿದೆ.

ಇನ್ನು ಆಸ್ಪತ್ರೆ ಮೇಲೆ ಕ್ಷಿಪಣಿ ದಾಳಿ ನಡೆಸಿದ ವಿಚಾರವಾಗಿ ರಷ್ಯಾ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!