ಮಾತುಕತೆ ಮೇಜಿನಲ್ಲಿ ಜೈಶಂಕರ್ ಎದುರು ರಷ್ಯ ಅಧ್ಯಕ್ಷ ಪುಟಿನ್- ಈ ಭೇಟಿ ಹುಟ್ಟಿಸಿರುವ ಚರ್ಚೆ ಏನು ಗೊತ್ತೇ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಷ್ಯ ಪ್ರವಾಸದಲ್ಲಿರುವ ವಿದೇಶ ಸಚಿವ ಎಸ್ ಜೈಶಂಕರ್ ಅವರು ಅಲ್ಲಿನ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿರುವ ವಿಡಿಯೊ ತುಣುಕುಗಳು ಸಾಮಾಜಿಕ ತಾಣಗಳಲ್ಲಿ ಅಚ್ಚರಿಪೂರಿತ ಚರ್ಚೆಗಳನ್ನು ಹುಟ್ಟುಹಾಕಿವೆ.

ಸಾಮಾನ್ಯವಾಗಿ ರಷ್ಯ ಅಧ್ಯಕ್ಷ ಪುಟಿನ್ ತಮ್ಮ ತತ್ಸಮಾನ ಹುದ್ದೆಯವರೊಂದಿಗೆ ಮಾತುಕತೆ ಮೇಜಿನಲ್ಲಿ ಎದುರುಬದುರಾಗಿ ಕೂರುತ್ತಾರೆ. ಅಂದರೆ ಎದುರಿನ ವ್ಯಕ್ತಿ ಸಹ ಪ್ರಧಾನಿ ಅಥವಾ ರಾಷ್ಟ್ರಾಧ್ಯಕ್ಷ ಆಗಿರಬೇಕು. ಆದರೆ, ಭಾರತದ ವಿದೇಶ ಮಂತ್ರಿ ಎಸ್ ಜೈಶಂಕರ್ ಅವರನ್ನು ಸಹ ಆದ್ಯತೆ ಮೇರೆಗೆ ಭೇಟಿಯಾಗಿ ಮಾತನಾಡಿರುವುದು ಜಾಗತಿಕವಾಗಿ ಭಾರತದ ಬಲ ವೃದ್ಧಿಯಾಗಿರುವುದನ್ನು ಹಾಗೂ ರಷ್ಯ ಮತ್ತು ಭಾರತಗಳ ಸಂಬಂಧ ಮತ್ತಷ್ಟು ಗಟ್ಟಿಯಾಗಿರುವುದನ್ನು ಸೂಚಿಸುತ್ತಿದೆ ಎಂದು ಹಲವು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.

ಖಾಲಿಸ್ತಾನಿ ಪ್ರತ್ಯೇಕತಾವಾದಿಗಳಿಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸ್ಥಿತಿ ಒತ್ತಡಕ್ಕೊಳಗಾಗಿದೆ. ಈ ವಿಷಯದಲ್ಲಿ ಅಮೆರಿಕ ಸಹ ತನ್ನ ಮಿತ್ರ ಕೆನಡಾ ಪರವಾಗಿ ಭಾರತದ ಮೇಲೆ ಒತ್ತಡ ಹೇರುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಜನವರಿ 2024ರ ಗಣರಾಜ್ಯೋತ್ಸವಕ್ಕೆ ಅಪೇಕ್ಷಿತರಾಗಿದ್ದ ಅಮೆರಿಕ ಅಧ್ಯಕ್ಷ ಜೊ ಬೈಡೆನ್ ಆ ಆಂತ್ರಣ ಒಪ್ಪದಿದ್ದಾಗ ಭಾರತವು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಲ್ ಮೆಕ್ರಾನ್ ಅವರನ್ನು ಆಹ್ವಾನಿಸಿದೆ. ಇದು ಜಾಗತಿಕ ರಾಜಕಾರಣದಲ್ಲಿ ಭಾರತವು ವಿಶಿಷ್ಟ ಸಂದೇಶ ಕೊಡುತ್ತಿರುವುದರ ಸೂಚನೆ ಎಂದು ಅಭಿಪ್ರಾಯ ನಿರೂಪಕ ಮಿನ್ಹಾಜ್ ಮರ್ಚೆಂಟ್ ಹೇಳಿದ್ದಾರೆ.

ವಿದೇಶ ಸಚಿವ ಜೈಶಂಕರ್ ಅವರ ಜತೆಗಿನ ಮಾತುಕತೆಯಲ್ಲಿ ಪುಟಿನ್ ರಷ್ಯವು ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯನ್ನು ನಿರೀಕ್ಷಿಸುತ್ತಿದೆ ಎಂಬ ಸಂದೇಶವನ್ನೂ ನೀಡಿದ್ದಾರೆ. ಅಷ್ಟೇ ಅಲ್ಲದೇ, “ಚುನಾವಣೆಗಳ ಕಾರಣಕ್ಕೆ ಬರುವ ವರ್ಷ ಪ್ರಧಾನಿ ಮೋದಿ ವ್ಯಸ್ತರಾಗಲಿದ್ದಾರೆ. ನಾವು ಅದರಲ್ಲಿ ಅವರಿಗೆ ಯಶಸ್ಸನ್ನು ಕೋರುತ್ತೇವೆ” ಎನ್ನುವ ಮೂಲಕ ಮೋದಿ ಗೆಲುವಿಗೆ ಹಾರೈಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!