ಉಕ್ರೇನ್ ಕದನ ತಲ್ಲಣ- ಖಾಲಿಯಾಗ್ತಿವೆ ರಷ್ಯದ ಕ್ರೀಡಾ ಕ್ಲಬ್ಬುಗಳು

ಹೊಸ ದಿಗಂತ ಡಿಜಿಟಲ್ ಡೆಸ್ಕ್
ರಷ್ಯಾವು ಉಕ್ರೇನ್‌ ಜೊತೆಗೆ ಸಂಘರ್ಷವನ್ನು ಮುಂದುವರೆಸಿದೆ. ಭೀಕರ ಕದನದ ಪರಿಣಾಮವಾಗಿ ರಷ್ಯಾ ದೇಶದ ಕ್ರೀಡಾಕ್ಷೇತ್ರದಲ್ಲಿ ತಲ್ಲಣಗಳು ಸೃಷ್ಟಿಯಾಗುತ್ತಿದ್ದು , ಆ ದೇಶದ ಫುಟ್‌ಬಾಲ್, ಹ್ಯಾಂಡ್‌ಬಾಲ್ ಮತ್ತು ಬಾಸ್ಕೆಟ್‌ಬಾಲ್ ಕ್ಲಬ್‌ಗಳಲ್ಲಿದ್ದ ವಿದೇಶಿ ಆಟಗಾರರು, ಕೋಚ್‌ ಗಳು ರಷ್ಯಾವನ್ನು ತೊರೆದು ತವರಿಗೆ ವಾಪಸ್ಸಾಗುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ರಷ್ಯಾ ಕ್ರೀಡಾಕ್ಷೇತ್ರದ ಮೇಲೆ ಅತ್ಯಂತ ಕೆಟ್ಟ ಪರಿಣಾಮಗಳನ್ನು ಬೀರುವ ಸಾಧ್ಯತೆ ಇದೆ.
ಸೋವಿಯತ್ ಒಕ್ಕೂಟದ ಕಾಲದಿಂದಲೇ ರಷ್ಯಾದಲ್ಲಿ ಸ್ಪೋರ್ಟ್ಸ್ ಕ್ಲಬ್ಬುಗಳ ಮೆರುಗು ಬಹಳ ಜೋರು. ಇವು ಜನರಿಗೆ ಮನರಂಜನೆಯನ್ನೂ ಹಾಗೂ ದೊಡ್ಡಸಂಖ್ಯೆಯಲ್ಲಿ ಉದ್ಯೋಗಗಳನ್ನೂ ಸೃಷ್ಟಿಸಿವೆ. ವಿದೇಶಿ ಕೋಚುಗಳು, ಆಟಗಾರರು ಸಹ ಇಲ್ಲಿ ಜಾಗ ಕಂಡುಕೊಂಡಿದ್ದಾರೆ. ಒಟ್ಟಿನಲ್ಲಿ ಇದೊಂದು ಆರ್ಥಿಕ ಚಟುವಟಿಕೆಯ ರೂಪವೇ ಆಗಿದ್ದು, ಅದಕ್ಕೀಗ ಹೊಡೆತ ಬೀಳುತ್ತಿದೆ.
ಉದಾಹರಣೆಗೆ ಕ್ರಸ್ನದೊರ್ ಎಂಬ ಖ್ಯಾತ ಫುಟ್ಬಾಲ್‌ ಕ್ಲಬ್ ಕೋಚ್ ಆಗಿ ಕಳೆದ ಜನವರಿಯಲ್ಲಿ ನೇಮಕಗೊಂಡಿದ್ದ ಜರ್ಮನಿಯ ಡೇನಿಯಲ್ ಫಾರ್ಕೆ‌ ಅವರು ಒಂದೂ ಪಂದ್ಯಕ್ಕೆ ತರಬೇತಿ ನೀಡದೆ ತವರಿಗೆ ಮರಳಿದ್ದಾರೆ. ಅವರೊಂದಿಗೆ ಸಹಾಯಕ ಕೋಚ್‌ ಗಳಾಗಿ ನೇಮಕಗೊಂಡಿದ್ದ ಎಡ್ಮಂಡ್ ರೈಮರ್, ಕ್ರಿಸ್ ಡೊಮೊಗಲ್ಲಾ ಮತ್ತು ಕ್ರಿಸ್ಟೋಫರ್ ಜಾನ್ ಅವರೂ ಸಹ ತಂಡವನ್ನು ತೊರೆದಿದ್ದಾರೆ.
“ನಾವು ಭಾರವಾದ ಹೃದಯವನ್ನು ಹೊತ್ತು ರಷ್ಯಾದಿಂದ ಹೊರನಡೆಯುತ್ತಿದ್ದೇವೆ. ಯುದ್ಧದ ಹಿನ್ನೆಲೆಯಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು, ಕುಟುಂಬ ಮತ್ತು ಸ್ನೇಹಿತರಿಂದ ತವರಿಗೆ ವಾಪಸ್ಸಾಗುವಂತೆ ಕೇಳಿ ಬರುತ್ತಿದ್ದ ಮನವಿಗಳು, ಹಾಗೆಯೇ ಕ್ರೀಡಾಕ್ಷೇತ್ರದಲ್ಲಿ ಅತ್ಯಂತ ಕೆಟ್ಟ ವಾತಾವರಣ ನಿರ್ಮಾಣವಾಗಿರುವುದು ನಮ್ಮ ನಿರ್ಣಯಕ್ಕೆ ಕಾರಣವಾಗಿದೆ” ಎಂದು ಫಾರ್ಕೆ ಹೇಳಿದ್ದಾರೆ.
ರಷ್ಯಾ ಮಾಧ್ಯಮಗಳ ವರದಿ ಪ್ರಕಾರ, ಇದೇ ಕ್ಲಬ್ಬಿನ ಪೋಲೆಂಡ್‌ ಮೂಲದ ಕೋಚ್‌ ಗ್ರೆಜೆಗೋರ್ಜ್ ಕ್ರಿಚೋವಿಯಾ ಸಹ ರಷ್ಯಾ ತೊರೆಯಲು ಅನುಮತಿ ಕೋರಿದ್ದಾರೆ ಎಂದು ತಿಳಿದುಬಂದಿದೆ. ಜರ್ಮನ್‌ ಮೂಲದ ಕೋಚ್ ಮಾರ್ಕಸ್ ಗಿಸ್ಡೊಲ್ ಎಂಬುವವರು ಲೋಕೋಮೊಟಿವ್ ಫುಟ್ಬಾಲ್ ಕ್ಲಬ್ ಕೋಚ್ ಆಗಿದ್ದರು. ಅವರು ಅದಾಗಲೇ ಮಾಸ್ಕೊ ತೊರೆದಿದ್ದಾರೆ.ಈ ಕುರಿತಾಗಿ ಜರ್ಮನ್‌ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಯುದ್ಧಕ್ಕೆ ಜವಾಬ್ದಾರರಾಗಿರುವ ದೇಶದಲ್ಲಿ ನನ್ನ ವೃತ್ತಿಯನ್ನು ಮುಂದುವರೆಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ರಷ್ಯನ್ ಲೀಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಡೈನಮೋ ಮಾಸ್ಕೋ‌ ತಂಡದ ಸಹಾಯಕ ಕೋಚ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಉಕ್ರೇನಿಯನ್‌ನ ಮಾಜಿ ಅಂತರಾಷ್ಟ್ರೀಯ ಆಟಗಾರ ಆಂಡ್ರಿ ವೊರೊನಿನ್ ಸಹ ರಷ್ಯಾದಿಂದ ನಿರ್ಗಮಿಸಿದ್ದಾರೆ. ನನ್ನ ದೇಶದೊಂದಿಗೆ ಯುದ್ಧದಲ್ಲಿರುವ ದೇಶದಲ್ಲಿ ನಾನು ಬದುಕಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!