ಹೊಸದಿಗಂತ ಡಿಜಿಟಲ್ ಡೆಸ್ಕ್
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆರೋಗ್ಯಸ್ಥಿತಿ ಕ್ಷೀಣಿಸುತ್ತಿದೆ. ಮಾರಕ ಕ್ಯಾನ್ಸರ್ ನಿಂದ ಬಳಲುತ್ತಿರುವ ಅವರು ಇನ್ನು ಹೆಚ್ಚೆಂದರೆ ಮೂರು ವರ್ಷ ಕಾಲ ಬದುಕಬಹುದು ಎಂದು ವೈದ್ಯರು ಹೇಳಿರುವುದಾಗಿ ರಷ್ಯಾದ ಗುಪ್ತಚರ ಇಲಾಖೆಯ(ಎಫ್ ಎಸ್ ಬಿ) ಮಾಹಿತಿ ಆಧರಿಸಿ ಮಾಧ್ಯಮಗಳು ವರದಿ ಮಾಡಿವೆ.
69 ವರ್ಷದ ಪುಟಿನ್ ಹಂತಹಂತವಾಗಿ ದೃಷ್ಟಿ ಸಾಮರ್ಥ್ಯ ಕಳೆದುಕೊಳ್ಳುತ್ತಿದ್ದಾರೆ, ಅವರ ಕೈಕಾಲುಗಳು ಅನಿಯಂತ್ರಿತವಾಗಿ ನಡುಗುತ್ತಿವೆ. ಆರೋಗ್ಯವೂ ವೇಗವಾಗಿ ಕ್ಷೀಣಿಸುತ್ತಿದೆ ಎಂದು ಅಧಿಕಾರಿಗಳ ನೀಡಿದ ಮಾಹಿತಿ ಆಧರಿಸಿ ರಷ್ಯಾದ ವಿದೇಶಿ ಗುಪ್ತಚರ ಸೇವೆಗೆ ಸಂಬಂಧಿಸಿದ ಟೆಲಿಗ್ರಾಮ್ ಚಾನೆಲ್ ʼಜನರಲ್ ಎಸ್ ವಿಆರ್ʼ ವರದಿ ಮಾಡಿದೆ.
ಪುಟಿನ್ ಈ ತಿಂಗಳ ಆರಂಭದಲ್ಲಿ ಕ್ಯಾನ್ಸರ್ ಸರ್ಜರಿಗೆ ಒಳಗಾಗಿದ್ದರು. ಅವರು ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಸರ್ಜರಿಯಿಂದ ಶೀಘ್ರ ಚೇತರಿಕೆ ಕಾಣಲಿದ್ದಾರೆ ಎಂದು ವರದಿಗಳು ಹೇಳಿದ್ದವು. ಆದರೆ, ಇದೀಗ ಕ್ಯಾನ್ಸರ್ ಪುಟಿನ್ ದೇಹದಲ್ಲಿ ವೇಗವಾಗಿ ವ್ಯಾಪಿಸುತ್ತಿದ್ದು, ಪ್ರಾಣಂತಕವಾಗಿ ಪರಿಣಮಿಸಿದೆ ಎಂದು ಇತ್ತೀಚಿನ ವರದಿಗಳು ಹೇಳಿವೆ.
ತಮ್ಮ ಹದಗೆಟ್ಟ ಆರೋಗ್ಯದಿಂದ ಬೇಸತ್ತ ಪುಟಿನ್ ಇತ್ತೀಚೆಗೆ ಹೆಚ್ಚು ಕೋಪೋದ್ರಿಕ್ತರಾಗುತ್ತಿದ್ದಾರೆ. ಅಧಿಕಾರಿಗಳ ವಿರುದ್ಧ ಅವರು ಇತ್ತೀಚೆಗೆ ಅನಿಯಂತ್ರಿತ ಕೋಪದಿಂದ ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ.
ಅದಾಗ್ಯೂ, ರಷ್ಯಾ ಅಧ್ಯಕ್ಷರ ಆರೋಗ್ಯದ ಬಗ್ಗೆ ಕೇಳಿಬರುತ್ತಿರುವ ಊಹಾಪೋಹಗಳನ್ನು ರಷ್ಯಾದ ವಿದೇಶಾಂಗ ಸಚಿವ ಸರ್ಗೋಯಿ ಲಾವ್ರೊವ್ ನಿರಾಕರಿಸಿದ್ದಾರೆ. ಪುಟಿನ್ ಗೆ ಯಾವುದೇ ಗಂಭೀರ ಅನಾರೋಗ್ಯ ಲಕ್ಷಣಗಳಿಲ್ಲ ಎಂದು ಹೇಳಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ