ಕುಕ್ಕೆ ಸುಬ್ರಹ್ಮಣ್ಯ-ತಿರುಪತಿ ಬಸ್ ಸಂಚಾರಕ್ಕೆ ಚಾಲನೆ ನೀಡಿದ ಸಚಿವ ಎಸ್.ಅಂಗಾರ

ಹೊಸದಿಗಂತ ಡಿಜಿಟಲ್ ಡೆಸ್ಕ್

ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಿಂದ ದಕ್ಷಿಣ ಭಾರತದ ಪವಿತ್ರ ಕ್ಷೇತ್ರ ತಿರುಪತಿಗೆ ಬಸ್ ವ್ಯವಸ್ಥೆಗೆ ಚಾಲನೆ ನೀಡುತ್ತಿರುವುದು ಸಂತಸ ತಂದಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಭಿವೃದ್ದಿ ವಿಭಾಗದ ಪುತ್ತೂರು ಉಪ ವಿಭಾಗದ ಧರ್ಮಸ್ಥಳ ಡಿಪೋದ ವತಿಯಿಂದ ಆರಂಭಗೊ0ಡ ಈ ಸೇವೆಯು ಕರಾವಳಿಯ ಶ್ರೇಷ್ಠ ಯಾತ್ರಾಸ್ಥಳ ಮತ್ತು ದಕ್ಷಿಣ ಭಾರತದ ಪಾವನ ಕ್ಷೇತ್ರದ ನಡುವೆ ಬೆಸುಗೆಯಾಗಿದೆ.ಈ ಬಸ್ ವ್ಯವಸ್ಥೆಯು ಪ್ರಯಾಣಿಕ ಭಕ್ತರಿಗೆ ಹೆಚ್ಚು ಅನುಕೂಲತೆ ಒದಗಿಸಲಿದೆ.ಯಾತ್ರಾ ಕ್ಷೇತ್ರಗಳಿಗೆ ನೇರವಾಗಿ ಪ್ರಯಾಣ ಬೆಳೆಸಲು ಬಸ್ ವ್ಯವಸ್ಥೆ ಬೇಕು ಎಂದು ಭಕ್ತರು ಬೇಡಿಕೆ ಇರಿಸಿದ್ದರು.ಇದೀಗ ಅವರ ಬೇಡಿಕೆ ನನಸಾಗುವಂತೆ ಮಾಡಲಾಗಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದರು
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮದ ಪುತ್ತೂರು ಉಪವಿಭಾಗದಿಂದ ಭಕ್ತರ ಅನುಕೂಲತೆಗಾಗಿ ಆರಂಭಿಸಲಾದಕುಕ್ಕೆ ಸುಬ್ರಹ್ಮಣ್ಯ- ತಿರುಪತಿ ಬಸ್ ವ್ಯವಸ್ಥೆಯನ್ನು ಶನಿವಾರ ಉದ್ಘಾಟಿಸಿ ಸಚಿವರು ಮಾತನಾಡಿದರು. ಇತರ ಕಡೆಯ ಭಕ್ತರಿಗೆ ಒಂದೇ ಬಸ್‌ನಲ್ಲಿ ಅವಳಿ ಕ್ಷೇತ್ರ ಸಂದರ್ಶನ ಮಾಡುವ ಸುಯೋಗ ಈ ಮೂಲಕ ಒದಗಿ ಬಂದಿದೆ.ಈ ವ್ಯವಸ್ಥೆಯನ್ನು ಭಕ್ತರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಚಿವರ ಬಸ್‌ಪ್ರಯಾಣ:
ಪುರೋಹಿತ ಪ್ರಸನ್ನ ಹೊಳ್ಳ ವೈದಿಕ ವಿದಿ ವಿಧಾನಗಳ ಮೂಲಕ ಬಸ್‌ಗೆ ಪೂಜೆ ನೆರವೇರಿಸಿದರು.ಬಳಿಕ ಸಚಿವರು ಶ್ರೀ ದೇವರಲ್ಲಿ ಪ್ರಾರ್ಥಿಸಿ ತೆಂಗಿನ ಕಾಯಿ ಒಡೆದು ನೂತನ ಸಂಚಾರಕ್ಕೆ ಚಾಲನೆ ನೀಡಿದರು.ನಂತರ ಸಚಿವರು ಬಸ್ ನಿಲ್ದಾಣದಿಂದ ಕುಮಾರಧಾರೆ ತನಕ ಬಸ್‌ನಲ್ಲಿ ಪ್ರಯಾಣಿಸಿದರು.ಪ್ರಯಾಣ ಸಂದರ್ಭ ಸಚಿವರು ಬಸ್‌ನ ಬಗ್ಗೆ, ಚಾಲಕರ ಬಗ್ಗೆ ವಿವರವನ್ನು ಅಧಿಕಾರಿಗಳಿಂದ ಪಡೆದುಕೊಂಡರು. ಅಲ್ಲದೆ ಕೆ.ಎಸ್.ಆರ್.ಟಿ.ಸಿಯಲ್ಲಿನ ಬಾಕಿ ಇರುವ ಹುದ್ದೆಗಳ ಬಗ್ಗೆ ವಿಚಾರಿಸಿದರು. ಶೀಘ್ರವೇ ಹುದ್ದೆಯ ಭರ್ತಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ತಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ, ಪುತ್ತೂರು ವಿಭಾಗೀಯ ಸಂಚಾರಾಧಿಕಾರಿ ಮುರಳೀಧರ ಆಚಾರ್,ಕಾರ್ಯನಿರ್ವಾಹಕ ಅಭಿಯಂತರ ಮಂಜುನಾಥ್ ಗುಡಿಗಾರ್, ಕಾರ್ಮಿಕ ಕಲ್ಯಾಣಾಧಿಕಾರಿ ಪ್ರಕಾಶ್, ಸಂಚಾರ ನಿಯಂತ್ರಕರಾದ ಗೋಪಾಲಕೃಷ್ಣ ಎಡಮಂಗಲ, ವೇಣುಗೋಪಾಲ ಕೈಕಂಬ, ಪಾಲಾಕ್ಷ ಮೂರ್ತಿ, ಪುಟ್ಟಣ್ಣ, ಭರತ್, ನವ್ರತ್ತ ಸಂಚಾರ ನಿಯಂತ್ರಣಾಧಿಕಾರಿ ಸುಬ್ರಹ್ಮಣ್ಯ ಭಟ್, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ.ವಿ.ಭಟ್, ಶೋಭಾ ಗಿರಿಧರ್, ಗ್ರಾ.ಪಂ.ಸದಸ್ಯೆ ಭಾರತಿ ದಿನೇಶ್, ತಾ.ಪಂ.ಮಾಜಿ ಸದಸ್ಯೆ ಭಾಗೀರಥಿ ಮುರುಳ್ಯ, ಪ್ರಮುಖರಾದ ದಿನೇಶ್ ಸಂಪ್ಯಾಡಿ, ರಾಜೇಶ್ ಎನ್.ಎಸ್, ಸುಬ್ರಹ್ಮಣ್ಯ ಕಾಮತ್, ಶ್ರೀಕುಮಾರ್ ಬಿಲದ್ವಾರ, ರಾಮಚಂದ್ರ ದೇವರಗದ್ದೆ, ಜಯರಮ ಎಚ್.ಎಲ್, ಅಚ್ಚುತ್ತ ಗೌಡ ಉಪಸ್ಥಿತರಿದ್ದರು.
13 ಗಂಟೆಪ್ರಯಾಣ:
ಕುಕ್ಕೆ-ತಿರುಪತಿ ಬಸ್ ರಾತ್ರಿ 9 ಗಂಟೆಗೆ ಕುಕ್ಕೆ ಸುಬ್ರಹ್ಮಣ್ಯದಿಂದ ಹೊರಡಲಿದೆ.ಬೆಳಗ್ಗೆ 4.30ಗೆ ಬೆಂಗಳೂರು ತಲುಪಲಿದೆ.ಅಲ್ಲಿಂದ 5 ಗಂಟೆಗೆ ಹೊರಟು 10.30 ಗಂಟೆಗೆ ತಿರುಪತಿ ತಲುಪಲಿದೆ.ತಿರುಪತಿಯಿಂದ ಸಂಜೆ 4 ಗಂಟೆಗೆ ಹೊರಡಲಿದೆ.ಅಲ್ಲಿಂದ ಬೆಂಗಳೂರಿಗೆ ಬಂದು ಬಳಿಕ ಕುಕ್ಕೆಗೆ ಪ್ರಯಾಣ ಬೆಳೆಸಿ ಬೆಳಗ್ಗೆ 5 ಗಂಟೆಗೆ ಸುಬ್ರಹ್ಮಣ್ಯ ತಲುಪಲಿದೆ.ಈ ಮೂಲಕ ಕುಕ್ಕೆಯಿಂದ ತಿರುಪತಿಗೆ 13 ಗಂಟೆಗಳ ಪ್ರಯಾಣವನ್ನು ಬಸ್ ನೆರವೇರಿಸಲಿದೆ.ಬಸ್‌ನಲ್ಲಿ ಇಬ್ಬರು ಚಾಲಕರು ಇರಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!