ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಮಾಜಿ ಸಿಎಂ, ಮಾಜಿ ವಿದೇಶಾಂಗ ಸಚಿವ ಎಸ್ಎಂ ಕೃಷ್ಣ ಮಂಗಳವಾರ ಮುಂಜಾನೆ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಕೊನೆಗಾಲದಲ್ಲಿ ಶ್ವಾಸಕೋಶದ ಸೋಂಕು ಸಹ ಕಾಡಿತ್ತು. ಇದೀಗ ಎಸ್ಎಂ ಕೃಷ್ಣ ಬರೆದಿರುವ ಕೊನೆಯ ಪತ್ರ ಲಭ್ಯವಾಗಿದೆ.
ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಹಾರೈಸಿ ಎಸ್ಎಂ ಕೃಷ್ಣ ವಾರದ ಹಿಂದೆ ಮಂಡ್ಯ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು. ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲೆಂದು ಶುಭಸಂದೇಶ ಕಳುಹಿಸಿದ್ದರು.
‘ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನನ್ನ ಶುಭಾಶಯಗಳು. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಫಲವಾಗಿ ರೂಪುಗೊಂಡ ಮಂಡ್ಯ ಜಿಲ್ಲೆ ನಾಡಿನಲ್ಲಿ ಅತಿ ಹೆಚ್ಚು ಕನ್ನಡ ಮಾತನಾಡುವ ಭಾಷಿಕರು ಇರುವ ಜಿಲ್ಲೆ. ಇಂತಹ ಐತಿಹ್ಯವುಳ್ಳ ನಮ್ಮ ಮಂಡ್ಯ ಜಿಲ್ಲೆಯಲ್ಲಿ 3ನೇ ಬಾರಿಗೆ ಆಯೋಜನೆಗೊಂಡಿರುವ ಕನ್ನಡದ ಸಿರಿಹಬ್ಬವು ಯಶಸ್ವಿಯಾಗಿ ಜರುಗಲೆಂದು ಶುಭ ಹಾರೈಸುತ್ತೇನೆ’’ ಎಂದು ಕೊನೆಯ ಪತ್ರದಲ್ಲಿ ಎಸ್ಎಂ ಕೃಷ್ಣ ಉಲ್ಲೇಖಿಸಿದ್ದರು.