ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಬಿಜೆಪಿ ಧ್ಯೇಯ: ಜೆ.ಪಿ. ನಡ್ಡಾ

ಹೊಸದಿಗಂತ ವರದಿ,ವಿಜಯಪುರ:

ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎನ್ನುವ ಒಂದೇ ಧ್ಯೇಯವನ್ನಿಟ್ಟುಕೊಂಡು ಬಿಜೆಪಿ ಮುನ್ನಡೆಯುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದರು.
ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡ ವಿಜಯ ಸಂಕಲ್ಪ ಅಭಿಯಾನ ಬೃಹತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಿಜೆಪಿ ಎಲ್ಲರ ಹಿತವನ್ನು, ಏಳ್ಗೆಯನ್ನು ಬಯಸಿದರೆ, ಇನ್ನು ಕಾಂಗ್ರೆಸ್ ಹಣಬಲ, ತೋಳಬಲದಿಂದ ಸಮಾಜದಲ್ಲಿ ಅರಾಜಕತೆ ಸೃಷ್ಟಿ ಮಾಡಿರುವ ಇತಿಹಾಸ ಹೊಂದಿದೆ. ಅಲ್ಲದೆ ಕಾಂಗ್ರೆಸ್ ನಾಯಕತ್ವ ಇಲ್ಲದೆ ನರಳುವಂತಾಗಿದೆ ಎಂದು ದೂರಿದರು.
ಬಿಜೆಪಿ ಜನಮುಖಿ ಕಾರ್ಯ ಮಾಡಿದರೆ, ಇನ್ನು ಕಾಂಗ್ರೆಸ್ ಜನವಿರೋಧಿ ಕಾರ್ಯ ಮಾಡುತ್ತಲೇ ಬಂದಿದೆ. ರಾಹುಲ್ ಗಾಂಧಿ ನಡೆಸಿದ ಭಾರತ ಜೋಡೋ ಯಾತ್ರೆಯಲ್ಲಿ, ಅವರ ಅಕ್ಕ ಪಕ್ಕದಲ್ಲಿ ಭಾರತ ಒಡೆಯವ ಜನರೇ ಇದ್ದರು ಎಂದು ಟೀಕಿಸಿದರು.
ಮೊನ್ನೆ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದು, ರಾಜ್ಯದಲ್ಲಿ 10,800 ಕೋಟಿ ರೂ.ಗಳಲ್ಲಿ ಶಿಲಾನ್ಯಾಸ ಕಾರ್ಯ ಕೈಗೊಂಡಿದ್ದಾರೆ. ಈ ಹಿಂದೆ ಯಾರಾದ್ರು ಪ್ರಧಾನಿ ಬಂದಿದ್ರಾ ? ಯಾವಾಗಾದ್ರು ಬಂದಿದ್ರಾ, ಏನಾದ್ರು ಕೇಳಿದ್ರಾ ? ಪರಿಸ್ಥಿತಿ ಇಲ್ಲಿಗೆ ಬಂದಿದೆ ಎಂದರು.
ನಾವು ಜನರಿಗಾಗಿ ಕೆಲಸ ಮಾಡುತ್ತೇವೆ. ಹಲವು ದೃಷ್ಟಿಯಲ್ಲಿ ಅಭಿವೃದ್ಧಿಯ ಕೆಲಸ ಮಾಡಲಾಗುತ್ತಿದೆ. ಲಂಬಾಣಿ ಸಮುದಾಯಕ್ಕೆ ಹಕ್ಕು ಪತ್ರ ನೀಡಲಾಗಿದೆ. ಯಾದಗಿರಿಯಲ್ಲಿ ಜಲಜೀವನ ಮಿಷನ್ ಅಡಿಯಲ್ಲಿ ಕುಡಿಯುವ ನೀರಿನ ಯೋಜನೆ ಮಾಡಲಾಗಿದೆ. ಎಲ್ಲ ರಾಷ್ಟ್ರೀಯ ಹೆದ್ದಾರಿಗಳು ಚತುಷ್ಪಥಗೊಂಡಿವೆ. ಅಲ್ಲದೆ ಇದು 6 ರಿಂದ 12 ರಸ್ತೆಗಳ ಅಭಿವೃದ್ಧಿ ಆಗುತ್ತವೆ. ಇನ್ನು ಒಂದೇ ಭಾರತ ಅಡಿ 400 ರೇಲ್ವೆಗಳು ಓಡುತ್ತವೇ ಇದು ಆಧುನಿಕ ಭಾರತ ನಕ್ಷೆಯಾಗಿದೆ ಎಂದರು.
ಅಲ್ಲದೆ ನಾಡಪ್ರಭು ಕೆಂಪೇಗೌಡರ ಮೂರ್ತಿಯನ್ನು ಅನಾವರಣಗೊಳಿಸಿದ್ದು, ಪ್ರಧಾನಿ ನರೇಂದ್ರ ಮೋದಿ. ಕೆಂಪೇಗೌಡರಿಗೆ ಗೌರವ ನೀಡುವ ಕೆಲಸ ಯಾವ ಪ್ರಧಾನಿಯಾದ್ರು ಮಾಡಿದ್ರಾ ? ಅದೇನಾದ್ರು ಮಾಡಿದ್ರೆ ಯಶಸ್ವಿ ಪ್ರಧಾನಿ ನರೇಂದ್ರ ಮೋದಿ. ಕರ್ನಾಟಕಕ್ಕೆ ಬರುವ ಪ್ರಧಾನಿ ಮೋದಿ ಅವರು, ರಾಜ್ಯದ ಸಂಸ್ಕೃತಿ, ಪರಂಪರೆ, ರೀತಿ, ರಿವಾಜನ್ನು, ಇಲ್ಲಿನ ಕವಿ, ಲೇಖಕರನ್ನು ಗೌರವಿಸುತ್ತಾರೆ. ದೇಶದ ಪ್ರಗತಿಯಲ್ಲಿ ಕರ್ನಾಟಕದ ಸಹಭಾಗಿತ್ವ ಹೆಚ್ಚಿದೆ ಎಂದರು.
ಬಿಜೆಪಿಯದ್ದು ಅಭಿವೃದ್ಧಿ, ಪಾರದರ್ಶಕ, ಶಾಂತಿ ಸುವ್ಯವಸ್ಥೆಯ ರಾಜಕಾರಣವಾದರೆ, ಇನ್ನು ಕಾಂಗ್ರೆಸಿನದು ಜನವಿರೋಧಿ, ಭ್ರಷ್ಟಾಚಾರ, ಜಾತಿವಾದಿ ರಾಜಕಾರಣವಾಗಿದೆ. ಹೀಗಾಗಿ ಮತ್ತೆ ಬಿಜೆಪಿಯನ್ನು ಜನರು ಬೆಂಬಲಿಸಬೇಕು ಎಂದರು.
ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ನೆರೆದಿರುವ ಜನರನ್ನು ನೋಡಿದಾಗ, ತಮ್ಮ ಈ ಉತ್ಸಾಹವನ್ನು ಕಂಡಾಗ, ಮತ್ತೆ ಕರ್ನಾಟಕದಲ್ಲಿ ಕಮಲ ಅರಳುತ್ತದೆ ಎಂದು ನಿರ್ಣಯ ಮಾಡಿದಂತಿದೆ. ರಾಜ್ಯದಲ್ಲಿನ ಅಭಿವೃದ್ಧಿಯ ಯಾತ್ರೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಆರಂಭಿಸಿದ್ದಾರೆ. ಅದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇದರಿಂದ ರಾಜ್ಯದ ಚಿತ್ರ ಹಾಗೂ ಹಣೆಬರಹ ಬದಲಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಅಶ್ವತ್ಥ್ ನಾರಾಯಣ, ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ರಮೇಶ ಭೂಸನೂರ, ಎ.ಎಸ್. ಪಾಟೀಲ ನಡಹಳ್ಳಿ, ಸೋಮನಗೌಡ ಪಾಟೀಲ ಸಾಸನೂರ, ವಿಧಾನ ಪರಿಷತ್ ಸದಸ್ಯ ವಿ.ಎಚ್. ಪೂಜಾರ,
ಮಾಜಿ ಸಚಿವರಾದ ಎಸ್.ಕೆ. ಬೆಳ್ಳುಬ್ಬಿ, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ದಯಾಸಾಗರ ಪಾಟೀಲ, ರವಿಕಾಂತ ಪಾಟೀಲ, ಚಂದ್ರಶೇಖರ ಕವಟಗಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!