ಸಚಿನ್ ಪಾಂಚಾಳ ಆತ್ಮಹತ್ಯೆ: ಬೀದರ್ ಗೆ ಆಗಮಿಸಿದ ಸಿಐಡಿ ಟೀಮ್-ತನಿಖೆ ಚುರುಕು

ಹೊಸ ದಿಗಂತ ವರದಿ ಬೀದರ್:

ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣ ಕುರಿತು ಸಿಐಡಿ ತನಿಖೆ ಶುರುವಾಗಿದೆ. ಡಿವೈಎಸ್ ಪಿ ಸುಲೇಮಾನ್ ತಹಶೀಲ್ದಾರ್‌ ನೇತೃತ್ವದ ಸಿಐಡಿ ತಂಡ ಶುಕ್ರವಾರ ಬೀದರ್ ಗೆ ಆಗಮಿಸಿದ್ದು, ಅಧಿಕೃತವಾಗಿ ತನಿಖೆಗೆ ಚಾಲನೆ ನೀಡಿದೆ.

ಡಿ.26ರಂದು ಇಲ್ಲಿ ರೈಲ್ವೆಗೆ ತೆಲೆ ಕೊಟ್ಟು ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದನು. ಸಚಿವ ಪ್ರಿಯಾಂಕ್ ಖರ್ಗೆ ಆಪ್ತರಾದ ಕಲಬುರಗಿಯ ರಾಜು ಕಪನೂರ್ ಇತರರ ಧೋಖಾ, ಧಮ್ಕಿಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಸಚಿನ್ 7 ಪುಟದ ಡೆತ್ ನೋಟ್ ಬರೆದಿಟ್ಟಿದ್ದನು. ಪ್ರಕರಣದೊಂದಿಗೆ ಸಚಿವ ಖರ್ಗೆ ಹೆಸರು ಥಳಕು ಹಾಕಿಕೊಂಡ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದೆ. ಖರ್ಗೆ ತಲೆದಂಡಕ್ಕೆ ಬಿಜೆಪಿ ಹೋರಾಟ ಆರಂಭಿಸಿ, ಪ್ರಕರಣದ ತನಿಖೆ ಸಿಬಿಐಗೆ ವಹಿಸಲು ಒತ್ತಾಯಿಸಿದೆ. ರಾಜ್ಯ ಸರ್ಕಾರ ಇದಕ್ಕೆ ಸೊಪ್ಪು ಹಾಕದೆ ಸಿಐಡಿಗೆ ತನಿಖೆ ವಹಿಸಿ ಆದೇಶಿಸಿದೆ. ರಾಜಕೀಯ ಸಂಘರ್ಷದ ನಡುವೆ ಸಿಐಡಿ ಟೀಮ್ ತನಿಖೆ ಆರಂಭಿಸಿದ್ದು ಭಾರಿ ಕುತೂಹಲ ಮೂಡಿಸಿದೆ.

ಸಿಐಡಿ ತಂಡ ಇಲ್ಲಿಗೆ ಆಗಮಿಸುತ್ತಲೇ ಪ್ರಾಥಮಿಕ ಮಾಹಿತಿ ಕಲೆ ಹಾಕುವಿಕೆಯಲ್ಲಿ ತೊಡಗಿದೆ. ಎಸ್ ಪಿ ಕಚೇರಿಗೆ ತೆರಳಿ ಹಿರಿಯ ಅಧಿಕಾರಿಗಳಿಗೆ ಭೇಟಿ ಮಾಡಿದ ತಂಡ ಬಳಿಕ ರೈಲ್ವೆ ಪೊಲೀಸ್ ಠಾಣೆಗೆ ತೆರಳಿ ವಿವರ ಸಂಗ್ರಹಿಸಿದೆ. ನಂತರ ಸಚಿನ್ ಆತ್ಮಹತ್ಯೆ ಮಾಡಿಕೊಂಡ ಸ್ಥಳ ಮಹಜರಿಗೆ ಮುಂದಾಗಿದೆ. ಸಂಜೆ ಭಾಲ್ಕಿ ತಾಲ್ಲೂಕಿನ ಕಟ್ಟಿತೂಗಾಂವ್ ಗ್ರಾಮದಲ್ಲಿ ಸಚಿನ್ ಮನೆಗೆ ಭೇಟಿ ನೀಡಿ‌ ಕುಟಿಂಬದವರಿಂದ ಮಾಹಿತಿ ಪಡೆಯಲಿದೆ ಎಂದು ಮೂಲಗಳು ಹೊಸ ದಿಗಂತಕ್ಕೆ ತಿಳಿಸಿವೆ.

ಸಚಿನ್ ಆತ್ಮಹತ್ಯೆ ಹಿಂದಿನ ಕಾರಣ ಏನಿರಬಹುದು? ರಾಜು ಕಪನೂರ್ ಗ್ಯಾಂಗ್ ಜೊತೆಗೆ ಏನಿತ್ತು ಸಂಬಂಧ? ಹಣಕಾಸಿನ ವ್ಯವಹಾರ ಏನಿತ್ತು ಎಂಬಿತ್ಯಾದಿ ಕುರಿತು ಸಿಐಡಿ ಟೀಮ್ ವಿಚಾರಣೆ ಮಾಡಲಿದೆ. ಬ್ಯಾಂಕ್ ವಹಿವಾಟು ಸಹ ಪರಿಶೀಲನೆ ಮಾಡಲಿದೆ. ಇಲ್ಲಿ ಒಂದು ಹಂತದ ವಿಚಾರಣೆ‌ ಬಳಿಕ ಕಲಬುರಗಿಗೂ ತೆರಳಿ ತನಿಖೆ ಮುಂದುವರಿಸಲಿದೆ.
ಪೊಲೀಸರ ನಿರ್ಲಕ್ಷ್ಯ, ದೂರು ಸ್ವೀಕರಿಸದೆ ಅಮಾನವೀಯ ವರ್ತನೆ ತೋರಿದ ಬಗ್ಗೆ ಸಚಿನ್ ಸಹೋದರಿಯರು ಗಂಭೀರವಾದ ಆರೋಪ ಹೊರಿಸಿದ್ದಾರೆ. ಈ ಬಗ್ಗೆ ಸಹ ಸಿಐಡಿ ಅಧಿಕಾರಿಗಳು ತನಿಖೆ ಮಾಡಲಿದ್ದಾರೆ ಎಂದು ಈ ಮೂಲಗಳು ಮಾಹಿತಿ ನೀಡಿವೆ.

ಸಚಿನ್ ಆತ್ಮಹತ್ಯೆ ಪ್ರಕರಣವು
ರಾಜ್ಯಾದ್ಯಂತ ರಾಜಕೀಯವಾಗಿ ಭಾರಿ ಸಂಚಲನ ಮೂಡಿಸಿದೆ. ಸಚಿವ ಖರ್ಗೆ ಹೆಸರು ಇದರಲ್ಲಿ ಸೇರಿದ ಕಾರಣ ಸಿಐಡಿ ತಂಡಕ್ಕೂ ಪ್ರಕರಣದ ನಿಷ್ಪಕ್ಷಪಾತ, ಪಾರದರ್ಶಕ ತನಿಖೆ ನಡೆಸುವುದು ಸವಾಲಿನ ಸಂಗತಿ ಎನಿಸಿದೆ. ಈ ಮಧ್ಯೆ ಖರ್ಗೆ ರಾಜೀನಾಮೆ ಹಾಗೂ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹಿಸಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತ್ರತ್ವದಲ್ಲಿ ಶನಿವಾರ (ಜ.4ರಂದು) ಕಲಬುರಗಿಯಲ್ಲಿ ಸಚಿವ ಖರ್ಗೆ ಮನೆಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ. ಖರ್ಗೆ ತವರಿನಲ್ಲಿ ನಡೆಯಲಿರುವ ಈ ಪ್ರತಿಭಟನೆ ಕಾಂಗ್ರೆಸ್-ಬಿಜೆಪಿ ನಡುವಿನ ಹೈ ವೋಲ್ಟೇಜ್ ಕದನಕ್ಕೆ ಕಾರಣವಾಗುವ ಸಾಧ್ಯತೆಗಳಿವೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!