ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಛತ್ತೀಸ್‌ಗಢದ ದುರ್ಗ್‌ನಲ್ಲಿ ಶಂಕಿತನೋರ್ವನನ್ನು ಬಂಧಿಸಲಾಗಿತ್ತು.
ಆದರೆ ವಿಪರ್ಯಾಸವೆಂದರೆ ವ್ಯಕ್ತಿಯ ಜೊತೆಗೆ ಫಿಂಗರ್ಪ್ರಿಂಟ್ ಹೋಲಿಕೆ ಆಗುತ್ತಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
ಬಾಂದ್ರಾದಲ್ಲಿ ಇರುವ ಸೈಫ್ ಅಲಿ ಖಾನ್ ಅವರ ಅಪಾರ್ಟ್ಮೆಂಟ್ಗೆ ಕಳ್ಳರು ನುಗ್ಗಿದ್ದರು. ಆ ವೇಳೆ ಸೈಫ್ ಅಲಿ ಖಾನ್ ಮೇಲೆ ಚೂಕು ಹಾಕಲಾಗಿತ್ತು. ಆ ಘಟನೆ ನಡೆದ ಕೂಡಲೇ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದರು. ಸೈಫ್ ನಿವಾಸದಲ್ಲಿ ಫಿಂಗರ್ಪ್ರಿಂಟ್ ಸಂಗ್ರಹ ಮಾಡಲಾಗಿತ್ತು. ಬಳಿಕ ಮೊಹಮ್ಮದ್ ಶೆರಿಫುಲ್ ಇಸ್ಲಾಂ ಶೆಹಜಾದ್ ಎಂಬ ಆರೋಪಿಯನ್ನು ಬಂಧಿಸಲಾಗಿತ್ತು. ಅಚ್ಚರಿ ಏನೆಂದರೆ, ಈ ವ್ಯಕ್ತಿಯ ಜೊತೆಗೆ ಫಿಂಗರ್ಪ್ರಿಂಟ್ ಹೋಲಿಕೆ ಆಗುತ್ತಿಲ್ಲ.
ಜನವರಿ 18ರಂದು ಮುಂಬೈ ಪೊಲೀಸರ ಮಾಹಿತಿ ಹಿನ್ನೆಲೆಯಲ್ಲಿ ರೈಲ್ವೆ ರಕ್ಷಣಾ ಪಡೆ ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಸ್-ಕೋಲ್ಕತ್ತಾ ಶಾಲಿಮಾರ್ ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಆಕಾಶ್ ಕನೋಜಿಯಾ (31) ಅವರನ್ನು ದುರ್ಗ್ ನಿಲ್ದಾಣದಲ್ಲಿ ಬಂಧಿಸಿತು. ಆದರೆ ಮಾರನೇ ದಿನ ಬೆಳಗ್ಗೆ ಮುಂಬೈ ಪೊಲೀಸರು ನೆರೆಯ ಥಾಣೆಯಿಂದ ಬಾಂಗ್ಲಾದೇಶಿ ಪ್ರಜೆ ಶರೀಫುಲ್ ಇಸ್ಲಾಂ ಶೆಹಜಾದ್ ನನ್ನು ಬಂಧಿಸಿದರು. ಹೀಗಾಗಿ ದುರ್ಗ್ ಆರ್‌ಪಿಎಫ್ ಆಕಾಶ್ ಕನೋಜಿಯನ್ನು ಕಳುಹಿಸಿಕೊಟ್ಟಿದ್ದರು.
ಈ ವರದಿ ಪ್ರಕಾರ, ಮುಂಬೈ ಪೊಲೀಸರು ಸೈಫ್ ಮನೆಯಲ್ಲಿ ಸಂಗ್ರಹಿಸಿದ ಬೆರಳಚ್ಚಿಗೂ, ಮೊಹಮ್ಮದ್ ಶೆರಿಫುಲ್ ಇಸ್ಲಾಂ ಶೆಹಜಾದ್ನ ಬೆರಳಚ್ಚಿಗೂ ತಾಳೆ ಆಗುತ್ತಿಲ್ಲ. ಹಾಗಾದರೆ ಪೊಲೀಸರು ಬಂಧಿಸಿರುವುದು ಬೇರೆಯದೇ ವ್ಯಕ್ತಿಯನ್ನಾ ಎಂಬ ಅನುಮಾನ ಸೃಷ್ಟಿಯಾಗಿದೆ. ಆದ್ದರಿಂದ ಹೆಚ್ಚಿನ ಪರೀಕ್ಷೆ ಮಾಡಲು ಇನ್ನಷ್ಟು ಫಿಂಗರ್ಪ್ರಿಂಟ್ ಸ್ಯಾಂಪಲ್ಗಳನ್ನು ಕಳಿಸಿಕೊಡಲಾಗಿದೆ.
ಮೊಹಮ್ಮದ್ ಶೆರಿಫುಲ್ ಇಸ್ಲಾಂ ಶೆಹಜಾದ್ ಬಾಂಗ್ಲಾದೇಶ ಮೂಲದವನು ಎಂದು ಪೊಲೀಸರು ಆರೋಪಿಸಿದ್ದಾರೆ. ಆದರೆ ಅದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಆರೋಪಿ ಪರ ವಕೀಲರು ವಾದ ಮಾಡಿದ್ದಾರೆ. ಇನ್ನೊಂದು ಪ್ರಮುಖ ಅಂಶ ಏನೆಂದರೆ, ಸೈಫ್ ಮನೆಯ ಸಿಸಿಟಿವಿಯಲ್ಲಿ ಕಾಣಿಸಿದ ವ್ಯಕ್ತಿಯ ಮುಖಕ್ಕೂ, ಮುಂಬೈ ಪೊಲೀಸರು ಅರೆಸ್ಟ್ ಮಾಡಿದ ವ್ಯಕ್ತಿಯ ಮಖಕ್ಕೂ ಸಾಮ್ಯತೆಯೇ ಇಲ್ಲ ಎಂದು ನೆಟ್ಟಿಗರು ಹೇಳಿದ್ದಾರೆ. ಇದರಿಂದಾಗಿ ಮುಂಬೈ ಪೊಲೀಸರ ಕಾರ್ಯವೈಖರಿ ಬಗ್ಗೆ ಪ್ರಶ್ನೆ ಎದ್ದಿದೆ. ನಿಜವಾದ ಆರೋಪಿ ಎಲ್ಲಿದ್ದಾನೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.