ಹೊಸದಿಗಂತ ಡಿಜಿಟಲ್ ಡೆಸ್ಕ್
ರಾಜ್ಯದಲ್ಲಿ ಮತ್ತೆ ಆಂಬ್ಯಲೆನ್ಸ್ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಈ ಹಿಂದೆ ಸರ್ವರ್ ಡೌನ್ ಆಗಿ ಆಂಬ್ಯುಲೆನ್ಸ್ ಸೇವೆಯಲ್ಲಿ ವ್ಯತ್ಯಯವಾಗಿತ್ತು. ಇದೀಗ ವೇತನ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ನೌಕರರು ಆಕ್ರೋಶಗೊಂಡಿದ್ದಾರೆ.
ರಾಜ್ಯದಲ್ಲಿ ಆಂಬ್ಯುಲೆನ್ಸ್ ಸೇವೆ ಒದಗಿಸುವ ಜಿವಿಕೆ ಸಂಸ್ಥೆಗೆ ಕಳೆದ ಎರಡು ತಿಂಗಳಿಂದ ವೇತನವನ್ನು ಬಾಕಿ ಉಳಿಸಿಕೊಂಡಿದೆ. ಹೀಗಾಗಿ ನೌಕರರ ಸಂಘ ಆಕ್ರೋಶ ವ್ಯಕ್ತಪಡಿಸಿದ್ದು, ವೇತನ ಪಾವತಿಸುವಂತೆ ಗಡುವು ನೀಡಿದ್ದಾರೆ. ನಾಳೆ ಸಂಜೆ ಒಳಗೆ ಸಂಬಳ ಆಗಿದ್ದರೆ, ಆಂಬ್ಯುಲೆನ್ಸ್ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಈ ಕುರಿತು ತಿಳಿಸಿದ 108 ಆಂಬ್ಯುಲೆನ್ಸ್ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಪರಮಶಿವಯ್ಯ , ಆರೋಗ್ಯ ಕವಚ ಯೋಜನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವೇತನ ಬಾಕಿ ಉಳಿಸಿಕೊಂಡಿರುವುದರ ವಿರುದ್ಧ ಮುಷ್ಕರ ಕೈಗೊಳ್ಳುವುದಾಗಿ ಈ ಹಿಂದೆಯೇ ತಿಳಿಸಿದ್ದೆವು. ಈ ಬಗ್ಗೆ ಆರೋಗ್ಯ ಆಯುಕ್ತರಿಗೆ ದೂರು ನೀಡಿದ್ದೆವು. ಗುರುವಾರದ ಒಳಗೆ ಸಂಬಳ ನೀಡದಿದ್ದರೆ, ಜಿಬಿಕೆ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸುವುದಾಗಿ ಆಯುಕ್ತರು ಸಹ ಭರವಸೆ ನೀಡಿದ್ದರು. ಅಲ್ಲದೆ, ಸರ್ಕಾರವೇ ವೇತನ ಕೊಡುತ್ತದೆ ಎಂಬ ಮಾಹಿತಿ ನೀಡಿದ್ದರು . ಆದರೆ ಇನ್ನು ಸಂಬಳ ಸಿಕ್ಕಿಲ್ಲ. ಈ ಬಾರಿ ಇನ್ನೊಮ್ಮೆ ಎಚ್ಚರಿಕೆ ಕೊಡುತ್ತಿದ್ದೇವೆ. ಈ ಬಾರಿ ನಾವು ಯಾವುದೇ ಆಮಿಷ, ಆಶ್ವಾಸನೆಗಳಿಗೆ ಒಳಗಾಗುವುದಿಲ್ಲ. ನಮಗೆ ಬೇಕಾಗಿರುವುದು ವೇತನವಷ್ಟೇ. ಗುರವಾರದ ಒಳಗೆ ಹಾಕದಿದ್ದರೆ, ಇಡೀ ರಾಜ್ಯಾದ್ಯಂತ ಆಂಬ್ಯಲೆನ್ಸ್ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುತ್ತದೆ. ಇದರಿಂದ ರಾಜ್ಯದಲ್ಲಿ ಏನಾದರೂ ಆರೋಗ್ಯ ತುರ್ತು ಪರಿಸ್ಥಿತಿ ಉಂಟಾದರೆ, ಅದಕ್ಕೆ ಜಿವಿಕೆ ಸಂಸ್ಥೆಯೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿದೆ. .
ಸರ್ಕಾರ ಹಣ ಬಿಡುಗಡೆ ಮಾಡಿದೆ. ಸಂಸ್ಥೆಯ ಬಳಿ ಹಣವೂ ಸಹ ಇದೆ. ಸರ್ಕಾರವೂ ಸಹ ಸಂಸ್ಥೆಗೆ ನಿರ್ದೇಶನ ನೀಡಿದೆ. ಇಂದು ಸಂಜೆಯೊಳಗೆ ಜಿವಿಕೆ ಸಂಸ್ತೆ ಸಂಬಳ ಹಾಕುವುದಾಗಿ ಹೇಳಿದೆ. ಹೇಳಿದಂತೆ ಮಾಡಿದರೆ ನಮಗೂ ಸಂತೋಷ. ಒಂದು ವೇಳೆ ಸಂಬಳ ಹಾಕದಿದ್ದರೆ ನಾಳೆ ಸಂಜೆಯವರೆಗೂ ಮಾತ್ರ ಗಡುವು ನೀಡುತ್ತೇವೆ. ಆಗಲೂ ಸಂಬಳ ಹಾಕದಿದ್ದರೆ, ಮುಂದಾಗುವ ಅನಾಹುತಕ್ಕೆ ನೀವೇ ಹೊಣೆ ಎಂದು ಪರಮಶಿವಯ್ಯ ಎಚ್ಚರಿಕೆ ನೀಡಿದ್ದಾರೆ.