ಹೊಸ ದಿಗಂತ ವರದಿ , ಕುಶಾಲನಗರ:
ದೀಪಾವಳಿ ಹಿನ್ನೆಲೆಯಲ್ಲಿ ಕುಶಾಲನಗರದ ಜಾತ್ರಾ ಮೈದಾನದಲ್ಲಿ ಹಸಿರು ಪಟಾಕಿ ಮಾರಾಟ ಮಳಿಗೆಯಲ್ಲಿ ದುಪ್ಪಟ್ಟು ದರಕ್ಕೆ ಪಟಾಕಿ ಮಾರಾಟ ಮಾಡುತ್ತಿರುವ ದೂರಿನ ಮೇರೆಗೆ ಕಾಂಗ್ರೆಸ್ ಮುಖಂಡರು ಅಂಗಡಿಗೆ ಮುತ್ತಿಗೆ ಹಾಕಿ ಮಾಲಕನನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಈ ಬಾರಿ ಒಂದೇ ಮಾರಾಟ ಮಳಿಗೆ ತೆರೆಯಲಾಗಿದ್ದು, ಈ ಅವಕಾಶ ದುರ್ಬಳಕೆ ಮಾಡಿಕೊಂಡ ಪಟಾಕಿ ಅಂಗಡಿ ಮಾಲಕ ಮನಬಂದಂತೆ ದರ ವಿಧಿಸಿ ಪಟಾಕಿ ಮಾರಾಟ ಮಾಡುತ್ತಿರುವ ಬಗ್ಗೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಪುರಸಭೆ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿ ತೆರಳಿದ ಬಳಿಕವೂ ಗ್ರಾಹಕರಿಂದ ಸುಲಿಗೆ ಮಾಡುತ್ತಿರುವ ದೂರಿನ ಮೇರೆಗೆ ಕಾಂಗ್ರೆಸ್ ಮುಖಂಡರು ಅಂಗಡಿಗೆ ಮುತ್ತಿಗೆ ಹಾಕಿ ಮಾಲಕನನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ ಕನಿಷ್ಟ ಲಾಭಾಂಶದಲ್ಲಿ ಪಟಾಕಿ ಮಾರಾಟ ಮಾಡುವಂತೆ ತಾಕೀತು ಮಾಡಿದರು.
ಬೋರ್ಡ್ ಇಲ್ಲದ ಅಂಗಡಿಯಲ್ಲಿ ಮಾರಾಟಕ್ಕೆ ಸಂಗ್ರಹಿಸಿಟ್ಟಿದ್ದ ಕೆಲವು ಪಟಾಕಿಗಳಲ್ಲಿದ್ದ ಕ್ಯೂಆರ್ ಕೋಡ್’ನಲ್ಲಿ ಕಂಪನಿ ಮಾಹಿತಿ ತೋರಿಸದ ಕಾರಣ ಕೆರಳಿದ ಮುಖಂಡರು ಅಂಗಡಿ ಮಳಿಗೆ ಮುಚ್ಚುವಂತೆ ತಾಕೀತು ಮಾಡಿದರು.
ಸ್ಥಳಕ್ಕೆ ಉಪ ತಹಸೀಲ್ದಾರ್ ಮಧುಸೂದನ್, ಗ್ರಾಮ ಲೆಕ್ಕಿಗ ಗೌತಮ್, ಪುರಸಭೆ ಪರವಾಗಿ ರಾಘವ ಭೇಟಿ ನೀಡಿ ಪರಿಶೀಲಿಸಿದರು.
ಇದೇ ಸಂದರ್ಭ ಹೆಚ್ಚಿನ ದರ ವಿಧಿಸದೆ ಕಡಿಮೆ ದರದಲ್ಲಿ ಪಟಾಕಿ ಮಾರಾಟ ಮಾಡುವುದಾಗಿ ಮಾಲಕ ಕೋರಿಕೊಂಡ ಮೇರೆಗೆ ಮಾರಾಟಕ್ಕೆ ಅವಕಾಶ ನೀಡಲಾಯಿತು.
ಈ ಸಂದರ್ಭ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡೂರಾವ್, ಪುರಸಭೆ ಸದಸ್ಯ ಎಂ.ಕೆ.ದಿನೇಶ್, ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಎಚ್.ಕೆ.ಶಿವಶಂಕರ್, ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ಕಿರಣ್ ಕುಮಾರ್, ಪ್ರಮುಖರಾದ ಪ್ರಕಾಶ್, ಅಶೋಕ್, ಜೋಸೆಫ್ ವಿಕ್ಟರ್ ಸೋನ್ಸ್, ಮುಸ್ತಾಫ ಮತ್ತಿತರರು ಇದ್ದರು.