ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬ್ರಿಟನ್ ದೇಶದಲ್ಲಿ ಈಗಾಗಲೇ ದೀಪಾವಳಿ ಸಂಭ್ರಮ ಶುರುವಾಗಿದ್ದು, ಖುದ್ದು ಪ್ರಧಾನಿ ರಿಷಿ ಸುನಕ್ ದಂಪತಿ ದೀಪಾವಳಿ ಹಬ್ಬ ಆಚರಿಸಿದ್ದಾರೆ.
ಯುಕೆ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಅವರು ತಮ್ಮ ಪುತ್ರಿಯರಾದ ಕೃಷ್ಣ ಮತ್ತು ಅನೌಷ್ಕಾ ಅವರೊಂದಿಗೆ ಲಂಡನ್‌ನಲ್ಲಿ ದೀಪಾವಳಿಯ ಹಬ್ಬವನ್ನು ಆಚರಿಸಿದರು. ದೀಪಾವಳಿ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದರು. ರಿಷಿ ಸುನಕ್ ಸ್ವತಃ ದೀಪ ಹಚ್ಚಿ ಸಂಭ್ರಮಿಸಿದ್ದಾರೆ. ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ ಅವರೂ ಕೂಡ ಡೌನಿಂಗ್ ಸ್ಟ್ರೀಟ್ ನಲ್ಲಿರುವ ಹಿಂದೂ ಸಮುದಾಯದ ಸದಸ್ಯರೊಂದಿಗೆ ದೀಪ ಹಚ್ಚಿ ಸಂಭ್ರಮಿಸಿದ್ದಾರೆ.
ಈ ಸಂಭ್ರಮ ಫೋಟೋ, ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಯುಕೆ ಪ್ರಧಾನ ಮಂತ್ರಿ ಕಚೇರಿಯು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ, ಪ್ರಧಾನ ಮಂತ್ರಿ ರಿಷಿ ಸುನಾಕ್ ಅವರು ದೀಪಾವಳಿಗೆ ಹಿನ್ನೆಲೆಯಲ್ಲಿ ಡೌನಿಂಗ್ ಸ್ಟ್ರೀಟ್‌ಗೆ ಹಿಂದೂ ಸಮುದಾಯದ ಅತಿಥಿಗಳನ್ನು ಸ್ವಾಗತಿಸಿದ್ದರು. ಇದು ಕತ್ತಲೆಯ ವಿರುದ್ಧ ಬೆಳಕಿನ ವಿಜಯೋತ್ಸವದ ಆಚರಣೆಯಾಗಿದೆ ಎಂದು ಪೋಸ್ಟ್ ಮಾಡಿದ್ದರು.
ಸಂತಸ ಹಂಚಿಕೊಂಡ ರಿಷಿ ಸುನಕ್!
ನನ್ನ ಕುಟುಂಬದೊಂದಿಗೆ ದೀಪಾವಳಿಯನ್ನು ಆಚರಿಸುವುದು ನನಗೆ ವಿಶೇಷ ಕ್ಷಣವಾಗಿದೆ. ಪ್ರಪಂಚದಾದ್ಯಂತ ಹಬ್ಬ ಆಚರಿಸುತ್ತಿರುವ ಎಲ್ಲರಿಗೂ ದೀಪಾವಳಿಯ ಶುಭಾಶಯಗಳು” ಎಂದು ರಿಷಿ ಸುನಕ್ ಅವರು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸೀರೆ ತೊಟ್ಟು ಮಿಂಚಿದ ಅಕ್ಷತಾ!
ಅಕ್ಷತಾ ಮೂರ್ತಿ ಅವರು ರಾಯಲ್ ನೀಲಿ ಸೀರೆ ತೊಟ್ಟು ಮಿಂಚಿದ್ದಾರೆ. ಮಕ್ಕಳು ಕೂಡಾ ಸಾಂಪ್ರದಾಯಿಕ ಈ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.