Monday, September 25, 2023

Latest Posts

ತಥಾಕಥಿತ ಕನ್ನಡ ಹೋರಾಟಗಾರರು ಅಂಬೇಡ್ಕರ್ ಮತ್ತು ಕುವೆಂಪು ಆಶಯಗಳ ವಿರೋಧಿಗಳೇ?- ಕನ್ನಡ ಟ್ವೀಟಿಗರ ಪ್ರಶ್ನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡರು ಕರ್ನಾಟಕದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆ ವಿರೋಧಿಸಿ ಭಾನುವಾರ ಟ್ವೀಟ್ ಮಾಡುವುದರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟಿಕೊಂಡಿತು.

ತಮ್ಮನ್ನು ಕನ್ನಡ ಹೋರಾಟಗಾರರೆಂದು ಕರೆದುಕೊಳ್ಳುವ, ಟ್ವಿಟರ್ ನಲ್ಲಿ ಸಕ್ರಿಯವಾಗಿರುವ ಕೆಲವರ ವಾದ- “ಕನ್ನಡದವರ ತೆರಿಗೆ ಹಣ ಸಂಸ್ಕೃತ ವಿಶ್ವವಿದ್ಯಾಲಯ ಕಟ್ಟುವುದಕ್ಕೆ ಹೋಗಬಾರದು. ಹೀಗಾಗಿ ಇದಕ್ಕೆ ವಿರೋಧವಿದೆ.”

ಇದನ್ನು ಪ್ರಶ್ನಿಸಿ ಟ್ವೀಟ್ ಮಾಡಿರುವ ಹಲವು ಕನ್ನಡಿಗರು ಹೇಳಿದ್ದು- “ನಾನೂ ಕನ್ನಡಿಗನೇ. ಯಾವುದೇ ರೋಲ್ಕಾಲ್ ದಂಧೆ ಮಾಡದೇ ದುಡಿದು ತೆರಿಗೆ ಕಟ್ಟುತ್ತಿದ್ದೇನೆ. ಸಂಸ್ಕೃತ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ನನ್ನ ತೆರಿಗೆ ವಿನಿಯೋಗವಾಗುವುದಕ್ಕೆ ಸ್ವಾಗತವಿದೆ. ಈಗ ವಿರೋಧಿಸುತ್ತಿರುವವರು ಎಲ್ಲ ಕನ್ನಡಿಗರ ಪರ ಆಜ್ಞೆ ಹೊರಡಿಸುವುದಕ್ಕೆ ಏನು ಅಧಿಕಾರ ಪಡೆದಿದ್ದಾರೆ?”

ಕುವೆಂಪು ಅವರ ಸಂಸ್ಕೃತಪ್ರೀತಿ

ಅನೇಕ ಕನ್ನಡ ಸಂಘಟನೆಗಳು ತಮ್ಮ ಐಡೆಂಟಿಟಿ ಕಟ್ಟಿಕೊಳ್ಳುವಲ್ಲಿ ಕುವೆಂಪು ಹೆಸರನ್ನು ಧಾರಾಳವಾಗಿ ಬಳಸಿಕೊಂಡಿವೆ. ಆದರೆ ಈ ಸಂಘಟನೆಗಳಲ್ಲಿರುವವರಿಗೆ ಕುವೆಂಪು ಅವರು ಸಂಸ್ಕೃತದ ಬಗ್ಗೆ ತಮ್ಮ ಕವಿತೆಯಲ್ಲಿ ಹೇಗೆ ಕೊಂಡಾಡಿದ್ದಾರೆಂಬುದರ ಅರಿವಿದೆಯೇ ಎಂದು ಪ್ರಶ್ನಿಸಿ, ಕುವೆಂಪು ಅವರ ನವಿಲು ಕವನಸಂಕಲನದ ‘ಸಂಸ್ಕೃತಮಾತೆ’ ಕವಿತೆಯನ್ನು ಹಂಚಿಕೊಂಡಿದ್ದಾರೆ ಹಲವು ಟ್ವಿಟ್ಟರ್ ಬಳಕೆದಾರರು.

ಅಂಬೇಡ್ಕರ್ ಆಶಯ

ದೇಶದ ಅಧಿಕೃತ ಭಾಷೆ ಯಾವುದಾಗಬೇಕೆಂದು ಸಂವಿಧಾನ ಸಭೆಯಲ್ಲಿ ಚರ್ಚೆ ನಡೆದಾಗ ಬಾಬಾ ಸಾಹೇಬ ಅಂಬೇಡ್ಕರರು ಸಂಸ್ಕೃತದ ಪರ ಮಾತನಾಡಿದ್ದರು. ಇನ್ನೊಂದು ಭಾಷೆಯಾಗಿ ಇಂಗ್ಲಿಷ್ ಇರಲಿ ಎಂದಿದ್ದರು ಎಂಬ ಅಂಶವನ್ನೂ ಹಲವರು ಮುಂದಕ್ಕೆ ತಂದಿದ್ದಾರೆ.

“ಸಂಸ್ಕೃತ ಕೇವಲ ಒಂದು ವರ್ಗದವರ ಭಾಷೆ ಎಂದು ಜರಿಯುವವರೂ ಇವರೇ. ವಿಶ್ವವಿದ್ಯಾಲಯದ ಮೂಲಕ ಆ ಭಾಷೆಯಲ್ಲಿರುವ ಜ್ಞಾನವನ್ನು ಎಲ್ಲರಿಗೂ ಮುಕ್ತವಾಗಿ ಹಂಚುವ ಅವಕಾಶವಿರುವಾಗ ಅದನ್ನು ವಿರೋಧಿಸುತ್ತಿರುವವರೂ ಇವರೇ. ಇದು ಅಂಬೇಡ್ಕರ್ ಆಶಯಕ್ಕೇ ವಿರುದ್ಧ” ಎಂದು ಹಲವರು ಟ್ವಿಟ್ಟರಿನಲ್ಲಿ ವಾದ ಮಂಡಿಸಿದ್ದಾರೆ.

ಸಂಸ್ಕೃತಕ್ಕೆ ಪ್ರೋತ್ಸಾಹ ಕನ್ನಡದ ವಿರೋಧ ಹೇಗಾಗುತ್ತದೆ?

ಕನ್ನಡಕ್ಕೆ ಸಿಗಬೇಕಾದ್ದನ್ನು ನೀಡುವುದಕ್ಕೆ ಯಾವುದೇ ಸರ್ಕಾರಕ್ಕೆ ವ್ಯಾಪ್ತಿ ಇದ್ದೇ ಇದೆ. ಸಂಸ್ಕೃತ ಸೇರಿದಂತೆ ಇನ್ಯಾವುದೇ ಭಾಷೆಯ ಪ್ರೋತ್ಸಾಹಕ್ಕೆ ಕ್ರಮ ಕೈಗೊಂಡ ತಕ್ಷಣ ಅದು ಹೇಗೆ ಕನ್ನಡ ವಿರೋಧಿ ಅಥವಾ ವೆಚ್ಚದಾಯಕವಾಗಿಬಿಡುತ್ತದೆ ಎಂಬುದು ಟ್ವೀಟಿಗರ ಪ್ರಶ್ನೆ.

ಸಂಸ್ಕೃತ ವಿಶ್ವವಿದ್ಯಾಲಯ ಅದಾಗಲೇ ಚಾಲ್ತಿಯಲ್ಲಿದೆ. ಈಗ ಅಭಿವೃದ್ಧಿಯಾಗುವುದಕ್ಕೆ ಹೊರಟಿರುವುದು ಅದಕ್ಕೆ ಕ್ಯಾಂಪಸ್. ಇದನ್ನು ಕನ್ನಡದ ಹೆಸರಲ್ಲಿ ವಿರೋಧಿಸುವುದರಲ್ಲಿ ಯಾವ ತರ್ಕವಿದೆ. ಹಾಗಾದರೆ. ರಾಜ್ಯದಲ್ಲಿ ಉರ್ದು ಶಾಲೆಗಳಿಗೋಸ್ಕರ ಹಣವನ್ನೇ ವ್ಯಯಿಸಬಾರದಿತ್ತಲ್ಲವೇ ಎಂಬ ಪ್ರಶ್ನೆಗಳನ್ನೂ ಕನ್ನಡದ ಟ್ವಿಟರ್ ಬಳಕೆದಾರರು ತಥಾಕಥಿತ ಕನ್ನಡ ಹೋರಾಟಗಾರರಿಗೆ ಕೇಳಿದ್ದಾರೆ.

ಕನ್ನಡದ ಮಠಮಾನ್ಯಗಳು ಸಂಸ್ಕೃತ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸುತ್ತಲೇ ಬಂದಿವೆ. ಸಂಸ್ಕೃತದ ಪ್ರೋತ್ಸಾಹವೇ ಕನ್ನಡ ವಿರೋಧ ಎಂದಾದರೆ ಈ ಗಣ್ಯರನ್ನೆಲ್ಲ ಕನ್ನಡ ವಿರೋಧಿಗಳು ಎಂದಂತಾಗಲಿಲ್ಲವೇ ಎಂದೂ ಟ್ವೀಟಿಗರು ತರ್ಕಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!