ಇವತ್ತು ಸಲ್ಮಾನ್ ರಶ್ದಿ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತಿರುವವರೇ ಅಂದು ಅವರ ಪುಸ್ತಕ ನಿಷೇಧಿಸಿದ್ದರು!

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಶುಕ್ರವಾರ ನ್ಯೂಯಾರ್ಕಿನಲ್ಲಿ ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ ಮಾರಣಾಂತಿಕ ಇರಿತವಾಗಿರುವುದನ್ನು ಭಾರತದ ತಥಾಕಥಿತ ಬುದ್ಧಿಜೀವಿ ವರ್ಗವೂ ಸೇರಿದಂತೆ ಹಲವರು ಖಂಡಿಸಿದ್ದಾರೆ. ಈ ಕೊಲೆ ಪ್ರಯತ್ನಕ್ಕೆ ಕಾರಣವಾಗಿರುವುದು 33 ವರ್ಷಗಳ ಹಿಂದೆ ಸಲ್ಮಾನ್ ರಶ್ದಿ ಬರೆದಿದ್ದ ಪುಸ್ತಕ- ದ ಸಟಾನಿಕ್ ವರ್ಸಸ್. ಅದು ಪ್ರವಾದಿ ಮೊಹಮ್ಮದ್ದರ ಜೀವನವನ್ನು ಕುರಿತದ್ದಾಗಿತ್ತು.

ಇದೀಗ ಘಟನೆಯ ನಂತರ ಖಂಡನೆಯ ಮಾತನಾಡುತ್ತಿರುವವರ ಪೈಕಿ ಹಲವರಲ್ಲಿ ಇಬ್ಬಂದಿತನ ಇರುವುದು ಸ್ಪಷ್ಟ. ಏಕೆಂದರೆ, 1988ರಲ್ಲಿ ಸಲ್ಮಾನ್ ರಶ್ದಿ ಇಂಗ್ಲೆಂಡಿನಲ್ಲಿ ಪ್ರಕಟಿಸಿದ್ದ ಪುಸ್ತಕವನ್ನು ಆಮದು ಮಾಡಿಕೊಳ್ಳುವುದಕ್ಕೆ ಜಗತ್ತಿನಲ್ಲೇ ಮೊದಲಿಗನಾಗಿ ನಿಷೇಧ ಹೇರಿದ್ದು ಅಂದಿನ ರಾಜೀವ್ ಗಾಂಧಿ ಪ್ರಣೀತ ಕಾಂಗ್ರೆಸ್ ಸರ್ಕಾರ. ಯಾವಾಗ ಇರಾನಿನ ಅಯತುಲ್ಲಾ ಖೊಮೇನಿ ಸಲ್ಮಾನ್ ರಶ್ದಿ ತಲೆ ಉರುಳಲಿ ಅಂತ ಫತ್ವಾ ಹೊರಡಿಸಿದರೋ, ಆಗಲೇ ಭಾರತ ಕೃತಿಯ ಮೇಲೆ ಒಂದರ್ಥದಲ್ಲಿ ನಿಷೇಧ ಹೇರಿಬಿಟ್ಟಿತು.

ಇವತ್ತಿಗೆ, ಫರೀದ್ ಜಕಾರಿಯಾ ಎಂಬ ಪತ್ರಕರ್ತ ಅಮೆರಿಕದಲ್ಲಿ ಕುಳಿತುಕೊಂಡು, ಛೇ… ಹಿಂಗಾಗಬಾರದಿತ್ತು ಎನ್ನುತ್ತಿದ್ದಾರೆ. ಇದೇ ಫರೀದ್ ಜಕಾರಿಯಾ ತಂದೆ ರಫೀಕ್ ಜಕಾರಿಯಾ ಅವತ್ತಿಗೆ ಭಾರತದಲ್ಲಿ ಮುಸ್ಲಿಂ ಮತಗುರುವಾಗಿ ಪ್ರಭಾವ ಹೊಂದಿದ್ದರು. ಸಲ್ಮಾನ್ ರಶ್ದಿ ವಿರುದ್ಧ ಬೆಂಕಿ ಉಗುಳುತ್ತ ಅವತ್ತಿನ ಸರ್ಕಾರವನ್ನು ಆಗ್ರಹಿಸಿ, ಸಲ್ಮಾನ್ ರಶ್ದಿ ಭಾರತಕ್ಕೆ ಕಾಲಿಡದ ವ್ಯಕ್ತಿಯನ್ನಾಗಿಸಿದ್ದರಲ್ಲಿ ಜಕಾರಿಯಾ ಪಾಲು ದೊಡ್ಡದಿದೆ.

ಭಾರತ ಅಸಹಿಷ್ಣುವಾಗಿದೆ, ಇಲ್ಲಿ ಅಭಿಪ್ರಾಯ ಸ್ವಾತಂತ್ರ್ಯವೇ ಇಲ್ಲ ಎಂದೆಲ್ಲ ಇತ್ತೀಚೆಗೆ ಬೊಬ್ಬೆ ಹಾಕುವವರಲ್ಲಿ ಬಾಲಿವುಡ್ ಗೀತರಚನೆಕಾರ ಜಾವೇದ್ ಅಖ್ತರ್ ಸಹ ಒಬ್ಬರು. ಆದರೆ ಬಹಳ ವರ್ಷಗಳ ಹಿಂದೆ ಇದೇ ಜಾವೇದ್ ಅಖ್ತರ್ ರಶ್ದಿ ಬಗ್ಗೆ ಮಾತನಾಡಿರುವುದರಲ್ಲಿ ಅವರ ಇಬ್ಬಂದಿತನ ಬಹಿರಂಗವಾಗಿದೆ. ಉಳಿದೆಲ್ಲ ಸಂದರ್ಭಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೇ ಪರಮೋಚ್ಛ ಎನ್ನುವ ಜಾವೇದ್ ಅಖ್ತರ್, ರಶ್ದಿಯ ಸಟಾನಿಕ್ ವರ್ಸಸ್ ಬಗ್ಗೆ ಅಭಿಪ್ರಾಯ ಕೇಳಿದಾಗ ಹೇಳ್ತಾರೆ- “ನಾನು ನಾಸ್ತಿಕ. ಆದರೂ ಇಸ್ಲಾಂ ಬಗ್ಗೆ ರಶ್ದಿ ಹಾಗೆಲ್ಲ ಬರೆದಿರೋದು ಸರಿ ಅಲ್ಲ. ಡೀಸೆಂಟ್ ಆಗಿ ಬರೆಯಬೇಕಿತ್ತು.”

ರಶ್ದಿಯ ಬಗ್ಗೆ ಈಗ ಅನುಕಂಪದ, ಬೆಂಬಲದ ಮಾತನಾಡುತ್ತಿರುವವರಲ್ಲಿ ಹೆಚ್ಚಿನವರು ಅವರು ಪುಸ್ತಕ ಬರೆದಾಗ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಗೋಜಿಗೆ ಹೋಗಿರಲಿಲ್ಲ ಹಾಗೂ ಇಸ್ಲಾಂ ತೀವ್ರವಾದವನ್ನು ಖಂಡಿಸಲೂ ಇಲ್ಲ ಎಂಬುದು ಕಠೋರ ವಾಸ್ತವ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!