ನಿಂದಿಸಿದಷ್ಟು ಸನಾತನ ಧರ್ಮ ಗಟ್ಟಿಯಾಗುತ್ತದೆ: ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ

ಹೊಸದಿಗಂತ ವರದಿ,ಚಿತ್ರದುರ್ಗ :

ಸನಾತನ ಧರ್ಮದ ಕುರಿತು ಕೆಲವು ನಾಯಿಗಳು ಬಾಯಿಗೆ ಬಂದಂತೆ ಬೊಗಳುತ್ತಿವೆ. ಅವರು ನಿಂದಿಸಿದಷ್ಟು ಸನಾತನ ಧರ್ಮ ಮತ್ತಷ್ಟು ಗಟ್ಟಿಯಾಗುತ್ತದೆ ಎಂದು ಮಹರಾಷ್ಟ್ರ ಕೊಲ್ಲಾಪುರದ ಕನ್ನೇರಿಮಠದ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ವಿಶ್ವ ಹಿಂದೂ ಪರಿಷತ್ – ಬಜರಂಗದಳ ಸಂಯುಕ್ತಾಶ್ರಯದಲ್ಲಿ ಭಾನುವಾರ ನಡೆದ ಬೃಹತ್ ಶೋಭಾಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಧರ್ಮದಲ್ಲೇ ಹುಟ್ಟಿದ ಅನೇಕರು ಸನಾತನ ಧರ್ಮವನ್ನು ನಿಂದಿಸುತ್ತಾ ಬಂದಿದ್ದಾರೆ. ಈಗ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ಮಾತನಾಡುತ್ತಿದ್ದಾನೆ. ಅವರ ತಾತ, ಮುತ್ತಾತಂದಿರು ಮಾಡಲಾಗದ ಕೆಲಸವನ್ನು ಈಗ ಇವನು ಮಾಡಲು ಮುಂದಾಗಿದ್ದಾನೆ. ಇಂಥವರಿಂದ ಸನಾತನ ಧರ್ಮಕ್ಕೆ ಯಾವುದೇ ತೊಂದರೆ ಇಲ್ಲ ಎಂದರು.

ಭಾರತ ದೇಶದಲ್ಲಿ ಸುಮಾರು ೮೦ ರಿಂದ ೯೦ ಕೋಟಿಯಷ್ಟು ಹಿಂದೂ ಜನರಿದ್ದಾರೆ. ಇವರು ಯಾವುದೇ ಹೀನ ಭಾವನೆ ಹೊಂದದೆ ಎಲ್ಲರನ್ನೂ ಜೊತೆಗೂಡಿ ಕರೆದುಕೊಂಡು ಹೋಗುತ್ತಿದ್ದಾರೆ. ಸನಾತನ ಧರ್ಮದಲ್ಲಿ ಯಾರು ಬೇಕಾದರೂ ತಮಗೆ ಬೇಕಾದಂತೆ ದೇವರ ಆರಾಧನೆಗಳನ್ನು ಮಾಡಬಹುದು. ಆಚರಣೆಗಾಗಿ ಶಿರವನ್ನೇ ಕತ್ತರಿಸುವ ಅತಿರೇಕದ ಧರ್ಮ ನಮ್ಮ ಸನಾತನ ಧರ್ಮವಲ್ಲ. ನಮ್ಮಲ್ಲಿ ಕೇವಲ ಸಾಂಕೇತಿಕ ಮೂರ್ತಿಗಳಿವೆ. ಅದರಂತೆ ಆರಾಧನೆಗಳು ನಡೆಯುತ್ತಿವೆ ಎಂದು ಹೇಳಿದರು.

ಇಲ್ಲಿ ನಡೆಯುತ್ತಿರುವ ಗಣಪತಿ ಉತ್ಸವ ನೋಡಿ ತುಂಬಾ ಸಂತೋಷವಾಯಿತು. ಬಾಲ ಗಂಗಾಧರ ತಿಲಕರು ಆರಂಭಿಸಿದ ಗಣೇಶೋತ್ಸವ ಇಂದು ಇಷ್ಟು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಇದರಲ್ಲಿ ಲಕ್ಷಾಂತರ ಜನರು ಭಾಗವಹಿಸುತ್ತಿದ್ದಾರೆ. ಇದರಿಂದ ದೇಶದಾದ್ಯಂತ ಉತ್ತಮ ಸಂದೇಶ ಹೋಗುತ್ತಿದೆ. ಇಂತಹ ಆಚರಣೆಯನ್ನು ಉದಯನಿಧಿ ಸ್ಟಾಲಿನ್‌ನಂಥವರು ಬಂದು ನೋಡಲಿ. ಆಗ ಅವರೂ ಸಹ ಪ್ರಭಾವಿತರಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಹಾರಾಷ್ಟ್ರ ಕೊಲ್ಲಾಪುರ ಕನ್ನೇರಿಮಠದ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ ಹಿಂದೂ ಮಹಾಗಣಪತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಶೋಭಾಯಾತ್ರಗೆ ಚಾಲನೆ ನೀಡಿದರು. ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಶ್ರೀ ಇಮ್ಮಡಿ ಕೇತೇಶ್ವರ ಸ್ವಾಮೀಜಿ, ಶ್ರೀ ಸೇವಾಲಾಲ್ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಹಿಂದೂ ಮಹಾಗಣಪತಿಯ ಸಮಿತಿ ಗೌರವಾಧ್ಯಕ್ಷ ಷಡಕ್ಷರಪ್ಪ ಕೊಂಡ್ಲಹಳ್ಳಿ, ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ಜಿ.ಎಂ.ಸುರೇಶ್, ಸಮಿತಿಯ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್, ಕೇಂದ್ರ ಸರ್ಕಾರದ ರಾಜ್ಯ ಸಚಿವ ಎ.ನಾರಾಯಣಸ್ವಾಮಿ, ಶಾಸಕ ವೀರೇಂದ್ರ ಪಪ್ಪಿ, ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಸಮಿತಿಯ ಮಾರ್ಗದರ್ಶಕರಾದ ಬದ್ರಿನಾಥ್, ಬಜರಂಗದಳ ಪ್ರಾಂತ ಸಹ ಸಂಯೋಜಕರು ಪ್ರsಂಜನ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಪಿ.ರುದ್ರೇಶ್, ಜಿಲ್ಲಾ ಸಹ ಕಾರ್ಯದರ್ಶಿ ಕೇಶವ್, ಬಜರಂಗದಳ ಜಿಲ್ಲಾ ಸಂಯೋಜಕ ಸಂದೀಪ್, ಜಿಲ್ಲಾ ಮುಖಂಡರಾದ ಅಶೋಕ್, ರಾಜೇಶ್, ನಗರಾಧ್ಯಕ್ಷ ಶ್ರೀನಿವಾಸ್, ನಗರ ಉಪಾಧ್ಯಕ್ಷ ರೋಹಿತ್, ನಗರ ಸಂಯೋಜಕ ರಂಗಸ್ವಾಮಿ, ಗ್ರಾಮಾಂತರ ಅಧ್ಯಕ್ಷ ಶಶಿಧರ್, ಸಮಿತಿ ಸದಸ್ಯರಾದ ವಿಪುಲ್ ಜೈನ್, ಕಾರ್ತಿಕ್, ಪ್ರಶಾಂತ್, ತಿಪ್ಪೇಸ್ವಾಮಿ ಟೈಗರ್, ವಿಕ್ರಂ ಜೈನ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!