Tuesday, March 28, 2023

Latest Posts

ಸನಾತನ‌ ಧರ್ಮವೇ ಭಾರತದ ರಾಷ್ಟ್ರೀಯತೆ: ಲೇಖಕ ಡಾ. ಜಿ. ಬಿ. ಹರೀಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹುಬ್ಬಳ್ಳಿ: ಭಾರತದ ಸಂಸ್ಕೃತಿ, ಧರ್ಮ, ಆಧ್ಯಾತ್ಮ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಅರವಿಂದ ಘೋಷ್ ಅವರ ಪಾತ್ರ ಅತ್ಯಂತ ಘನವಾಗಿದೆ ಎಂದು ಖ್ಯಾತ ಲೇಖಕ ಡಾ. ಜಿ. ಬಿ. ಹರೀಶ ಹೇಳಿದರು.

ನಗರದ ಕೇಶವಕುಂಜದಲ್ಲಿ ಲೋಕಹಿತ ಟ್ರಸ್ಟ್ ನಿಂದ ನಡೆದ ಮಂತ್ರದ್ರಷ್ಟ ಅರವಿಂದ ಘೋಷ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಯೋಗ, ಆಧ್ಯಾತ್ಮ ವಿಷಯಗಳಲ್ಲಿ ಪರಿಣಿತಿ ಹೊಂದಿದ ಅರವಿಂದರು, ದೈವತಾವಾದ ಮಾನವತಾವಾದಕ್ಕಿಂತ‌ ಮೀಗಿಲಾಗಿದೆ ಎಂದಿದ್ದರು. ಅವರು ಯೋಗಿಯಾಗಿದ್ದಕ್ಕೆ ಸ್ವಾತಂತ್ರ್ಯ ಹೋರಾಟದ ಯೋಧರಾದರು. ದೇಹಾಂತ್ಯವಾದ ನಂತರವೂ ಅವರ ಕಾಯ ಚೈತನ್ಯ ಹಾಗೇಯೇ ಇದ್ದಿದ್ದು ಅವರ ಯೋಗ ಸಾಧನೆಯನ್ನು ಬಿಂಬಿಸುತ್ತದೆ ಎಂದರು.

ಆಧ್ಯಾತ್ಮ ಹೊರತುಪಡಿಸಿದರೆ ಅರವಿಂದರು ಒಬ್ಬ ಪ್ರಖರ ರಾಷ್ಟ್ರೀಯವಾದಿ. ದೇಶದ ಅಖಂಡತೆ ಬಗ್ಗೆ ಅಪಾರ ಶ್ರದ್ಧೆ ಹೊಂದಿದ್ದರು ಹಾಗೂ ದೇಶ ವಿಭಜನೆಯನ್ನು ವಿರೋಧಿಸಿದ್ದರು. ಪತ್ರಕರ್ತರಾಗಿ ತಮ್ಮ ವಂದೇ ಮಾತರಂ ಹಾಗೂ ಕರ್ಮಯೋಗಿ ಪತ್ರಿಕೆಗಳಲ್ಲಿ ಭಾರತದ ಶ್ರೇಷ್ಠತೆ ಕುರಿತು ಹಲವಾರು ಲೇಖನಗಳನ್ನು ಬರೆದಿದ್ದಾರೆ. ಭಗವದ್ಗೀತೆ, ವೇದಗಳಿಗೆ ವ್ಯಾಖ್ಯಾನ ರಚಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಯಾಗಿ, ಶ್ರೇಷ್ಠ ಕವಿಯೂ ಆಗಿದ್ದ ಅರವಿಂದರ ಕೊಡುಗೆ ದೇಶಕ್ಕೆ ಅಪಾರವಾಗಿದೆ‌.

ಮಂತ್ರದ್ರಷ್ಟ ಅರವಿಂದ ಘೋಷ್ ಪುಸ್ತಕದಲ್ಲಿ ಅವರ ಏಕಮುಖ ಜೀವನ ಚರಿತ್ರೆ ಮಾತ್ರವಲ್ಲ ಬದಲಾಗಿ ದೇಶದ ಸಂಸ್ಕೃತಿ, ಸನಾತನ ಧರ್ಮದ ಕುರಿತು ಸಾಕಷ್ಟು ವಿಚಾರಗಳು ವ್ಯಕ್ತವಾಗಿವೆ. ಭಾರತದ ಉತ್ಥಾನವೆಂದರೆ ಅದು ಧರ್ಮದ ಉತ್ಥಾನ. ಸನಾತನ ಧರ್ಮವೇ ನಮ್ಮ ರಾಷ್ಟ್ರೀಯತೆ. ರಾಷ್ಟ್ರ ಸಂತ ವಿವೇಕಾನಂದರಿಂದ ಪ್ರೇರಿತರಾದ ಅರವಿಂದರು ಅವರ ಕಾರ್ಯಗಳನ್ನೇ ಮುಂದುವರೆಸಿದ್ದರು.

ಸಾಮರಸ್ಯದ ಕೊರತೆಯೇ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣವಾಗಿವೆ. ಅವುಗಳಿಗೆ ಪರಿಹಾರ ನಮ್ಮ ಸನಾತನ ಧರ್ಮದಲ್ಲೇ ಅಡಕವಾಗಿದೆ ಎಂಬಿತ್ಯಾದಿ ಯೋಗಿ ಅರವಿಂದರ ಚಿಂತನೆಗಳು ಸಾರ್ವಕಾಲಿಕವಾಗಿವೆ ಎಂದು ಡಾ. ಜಿ.ಬಿ. ಹರೀಶ ಉಲ್ಲೇಖಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!