ವಿಜ್ಞಾನದ ರುಚಿ ವೃದ್ಧಿಸುತ್ತಿರುವ ಸಂಚಾರಿ ಪ್ರಯೋಗಾಲಯ!

– ನಿತೀಶ ಡಂಬಳ

ನಿತ್ಯ ಬೆಳೆಯುತ್ತಿರುವ ವಿಜ್ಞಾನ ಹಾಗೂ ಆಧುನಿಕ ತಂತ್ರಜ್ಞಾನದ ಪ್ರಭಾವದಿಂದ ಈಗಿನ ಪೀಳಿಗೆಯ ಮಕ್ಕಳ ಕಲಿಕಾ ಸಾಮರ್ಥ್ಯವೂ ಅಕವಾಗುತ್ತಿದೆ. ಬೌದ್ಧಿಕ ತರಗತಿಗಿಂತಲೂ ಪ್ರಾಯೋಗಿಕ ತರಗತಿಗಳಿಂದ ಮಕ್ಕಳು ಹೆಚ್ಚಾಗಿ ಕಲಿಯುತ್ತಾರೆ. ಈ ನಿಟ್ಟಿನಲ್ಲಿ ಧಾರವಾಡದ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆಗಳನ್ನು ನಿರಂತರ ನಡೆಸುತ್ತ, ಅಧ್ಯಯನಕ್ಕೆ ಪೂರಕ ಕಾರ್ಯಗಳನ್ನು ಮಾಡುತ್ತಿದೆ.

ವಿಜ್ಞಾನ ಬಹುತೇಕರಿಗೆ ಆಸಕ್ತಿದಾಯಕ ವಿಷಯ. ಇಲ್ಲಿರುವ ಪ್ರಯೋಗಗಳು, ಚಮತ್ಕಾರಗಳಿಂದ ವಿಜ್ಞಾನ ಅತ್ಯಂತ ಕುತೂಹಲಕಾರಿಯಾಗಿದೆ. ಎಲ್ಲ ಖಾಸಗಿ ಹಾಗೂ ನಗರ ಪ್ರದೇಶದ ಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯವಿದ್ದು, ವಿದ್ಯಾರ್ಥಿಗಳ ಕಲಿಕೆಗೆ ಎಲ್ಲ ರೀತಿಯ ಅನುಕೂಲ ಹಾಗೂ ಸೌಲಭ್ಯ ಲಭ್ಯವಿರುತ್ತದೆ. ಆದರೆ ಇದೇ ಸ್ಥಿತಿ ಗ್ರಾಮೀಣ ಹಾಗೂ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ಕಂಡುಬರದಿರುವುದು ಖೇದಕರ. ಇದನ್ನು ಮನಗಂಡ ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್ ಸಂಸ್ಥೆ ಸಂಚಾರಿ ವಿಜ್ಞಾನ ಪ್ರಯೋಗಾಲಯ ಆರಂಭಿಸಿತು.

ವಿಜ್ಞಾನ ಉಪಕರಣ, ಪರಿಕರ ಹಾಗೂ ಬೋಧಕರನ್ನು ಒಳಗೊಂಡ ಸಂಚಾರಿ ಪ್ರಯೋಗಾಲಯ ಸರ್ಕಾರಿ ಶಾಲೆಗಳಿಗೆ ಹಲವು ವರ್ಷಗಳಿಂದ ನಿರಂತರವಾಗಿ ಭೇಟಿ ನೀಡುತ್ತಿದೆ. ಮುಖ್ಯವಾಗಿ ಪ್ರೌಢ ಶಾಲೆಯ ಪಠ್ಯಾಧಾರಿತ ವಿಜ್ಞಾನ ಪ್ರಯೋಗಗಳನ್ನು ವಿದ್ಯಾರ್ಥಿಗಳಿಂದಲೇ ಮಾಡಿಸಿ, ಕಲಿಕೆಯನ್ನು ಸರಳಗೊಳಿಸುತ್ತಿದೆ. ಒಂದು ವರ್ಷದಲ್ಲಿ ಒಂದು ಶಾಲೆಗೆ 6 ಬಾರಿ ಸಂಚಾರಿ ಪ್ರಯೋಗಾಲಯ ಸಂಚರಿಸುವ ಮೂಲಕ ವಿಜ್ಞಾನ ಕಲಿಕೆಯಲ್ಲಿ ವಿದ್ಯಾರ್ಥಿಗಳನ್ನು ನಿಪುಣರನ್ನಾಗಿ ಮಾಡುತ್ತಿದೆ.
ವಿಜ್ಞಾನದ ವಿಷಯಗಳಾದ ಭೌತಶಾಸ್ತ್ರ, ರಸಾಯನ ಶಾಸ್ತ್ರ ಹಾಗೂ ಜೀವಶಾಸ್ತ್ರಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು ವಿದ್ಯಾರ್ಥಿಗಳಿಂದಲೇ ಮಾಡಿಸಲಾಗುತ್ತದೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ವಿಜ್ಞಾನ ಶಿಕ್ಷಕರು, ಪ್ರಯೋಗಾಲಯ, ವೈಜ್ಞಾನಿಕ ಉಪಕರಣಗಳ ಕೊರತೆಯಿದ್ದು, ಅಂತಹ ಶಾಲೆಗಳಿಗೆ ಸಂಚಾರಿ ಪ್ರಯೋಗಾಲಯ ಭೇಟಿ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಕಲಿಕೆಯ ರುಚಿ ಹೆಚ್ಚಿಸುವುದರ ಜೊತೆಗೆ, ಅವರನ್ನು ಯುವ ವಿಜ್ಞಾನಿಗಳನ್ನಾಗಿ ರೂಪಿಸುವಲ್ಲಿ ಸಹಾಯಕವಾಗಿದೆ.

ಸಂಚಾರಿ ವಿಜ್ಞಾನ ಪ್ರಯೋಗಾಲಯದ ಸುಗಮಕಾರ ಸುರೇಶ ಚೌಗಲಾ, ವಿಜ್ಞಾನ ಕಠಿಣ ವಿಷಯವೆಂದು ಅಂದುಕೊಂಡ ಗ್ರಾಮೀಣ ವಿದ್ಯಾರ್ಥಿಗಳು ಸಂಚಾರಿ ವಿಜ್ಞಾನ ಪ್ರಯೋಗಾಲಯದ ಪ್ರಯೋಜನ ಪಡೆದುಕೊಂಡು ವಿಜ್ಞಾನ ವಿಷಯದಲ್ಲೇ ಉನ್ನತ ವ್ಯಾಸಂಗ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್ ಜೊತೆಗೆ ಕಾಲ್ಕಮ್, ಆಕೃತಿ ಯೋಜನೆಯಡಿ ಸಂಚಾರಿ ವಿಜ್ಞಾನ ಪ್ರಯೋಗಾಲಯ ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಧಾರವಾಡದ ಗಾಂಧಿನಗರ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಗೌರಮ್ಮ, ಸಂಚಾರಿ ವಿಜ್ಞಾನ ಪ್ರಯೋಗಾಲಯದಿಂದ ಅನೇಕ ಹೊಸ ವಿಷಯ ತಿಳಿದುಕೊಂಡೆವು. ಎಷ್ಟೋ ವಿಜ್ಞಾನ ಉಪಕರಣಗಳ ಹೆಸರೇ ತಿಳಿದಿರಲಿಲ್ಲ. ವಿಜ್ಞಾನ ಪ್ರಯೋಗಗಳನ್ನು ನಾವೇ ಮಾಡಿದ್ದರಿಂದ ಹೊಸ ಅನುಭವವಾಯಿತು. ವಿಜ್ಞಾನ ಸರಳ ವಿಷಯವೆಂದು ಅನಿಸುತ್ತಿದೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!