ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಟಾರ್ ಜೋಡಿಯಾದ ವಿಜಯ್ ದೇವರಕೊಂಡ ಮತ್ತು ತಮ್ಮ ಪತ್ನಿ ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಿರುವ, ಬಹುನಿರೀಕ್ಷಿತ ‘ರಣಬಾಲಿ’ಚಿತ್ರಕ್ಕೆ ಈಗ ಸ್ಟಾರ್ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರಿಂದ ಅದ್ಭುತ ವಿಮರ್ಶೆ ಸಿಕ್ಕಿದೆ. ಚಿತ್ರದಲ್ಲಿ ವಿಜಯ್ ಅವರ ಆಕ್ಷನ್ ಅವತಾರ ಹಾಗೂ ರಶ್ಮಿಕಾ ಅವರ ನೈಜ ನಟನೆಯನ್ನು ನಿರ್ದೇಶಕರು ಕೊಂಡಾಡಿದ್ದಾರೆ.
ಅರ್ಜುನ್ ರೆಡ್ಡಿ ಚಿತ್ರದ ಮೂಲಕ ವಿಜಯ್ ದೇವರಕೊಂಡ ವೃತ್ತಿಜೀವನಕ್ಕೆ ಬಿಗ್ ಬ್ರೇಕ್ ನೀಡಿದ್ದ ಸಂದೀಪ್ ರೆಡ್ಡಿ ವಂಗಾ, ಈ ಚಿತ್ರದಲ್ಲಿನ ವಿಜಯ್ ನಟನೆಯು ಅವರ ಸಿನಿ ಜರ್ನಿಯಲ್ಲೇ ಒಂದು ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ.
ಎಕ್ಸ್ ನಲ್ಲಿ ಸಂದೀಪ್ ಪೋಸ್ಟ್
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಂದೀಪ್, “ವಿಜಯ್… ನಿನ್ನ ಆಕ್ಷನ್ನಲ್ಲಿ ರಗಡ್ ಲುಕ್ ಇದೆ. ಅದನ್ನು ಸುಮ್ಮನೆ ಸೃಷ್ಟಿಸಲು ಸಾಧ್ಯವಿಲ್ಲ. ನೀನು ಫೈಟ್ ಮಾಡುವ ಶೈಲಿಯಲ್ಲಿ ಒಂದು ಭಯಾನಕತೆಯಿದೆ. ಭಾರತೀಯ ಚಿತ್ರರಂಗದ ಮುಂದಿನ ಅತ್ಯುನ್ನತ ಆಕ್ಷನ್ ಹೀರೊ ನೀನೇ ಆಗ್ತೀಯಾ ಎಂದು ನಾನು ನಂಬುತ್ತೇನೆ. ವಿಜಯ್ ನಿನಗೆ ಅಭಿನಂದನೆಗಳು” ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಚಿತ್ರಮಂದಿರಗಳಲ್ಲೇ ಹೋಗಿ ಸಿನಿಮಾ ನೋಡುವಂತೆ ಪ್ರೇಕ್ಷಕರಿಗೆ ಕರೆ ನೀಡಿದ್ದಾರೆ.
‘ಜಯಮ್ಮ’ ಪಾತ್ರಕ್ಕೂ ಮೆಚ್ಚುಗೆ
ಇದೇ ವೇಳೆ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಅವರ ‘ಜಯಮ್ಮ’ ಪಾತ್ರವು ಅತ್ಯಂತ ನೈಜವಾಗಿ ಮೂಡಿಬಂದಿದೆ ಎಂದಿರುವ ಸಂದೀಪ್, ಚಿತ್ರದ ನಿರ್ದೇಶಕ ರಾಹುಲ್ ಸಂಕೃತ್ಯನ್ ಅವರ ಬಗ್ಗೆ ಮಾತನಾಡುತ್ತಾ, ನಮ್ಮ ಶಾಲಾ ಪಠ್ಯಪುಸ್ತಕಗಳು ತೋರಿಸಲು ಹಿಂಜರಿದ ಇತಿಹಾಸದ ಒಂದು ಪ್ರಮುಖ ಭಾಗವನ್ನು ಇಷ್ಟು ಚೆನ್ನಾಗಿ ತೆರೆಯ ಮೇಲೆ ತಂದಿದ್ದಕ್ಕೆ ಧನ್ಯವಾದಗಳು. ಇದು ಇತಿಹಾಸದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿಯೂ ಆಸಕ್ತಿ ಮೂಡಿಸುವ ಚಿತ್ರ ಎಂದು ಶ್ಲಾಘಿಸಿದ್ದಾರೆ.
ಚಿತ್ರತಂಡದ ಖುಷಿ
ನಿರ್ದೇಶಕ ಸಂದೀಪ್ ಅವರ ಈ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ವಿಜಯ್ ದೇವರಕೊಂಡ, ಬೆಳಗ್ಗೆ ಎದ್ದ ತಕ್ಷಣ ಸಂದೀಪ್ ರೆಡ್ಡಿ ವಂಗಾ ಅವರಿಂದ ಇಂತಹ ಅದ್ಭುತ ಸಂದೇಶ ನೋಡಿ ತುಂಬಾ ಖುಷಿಯಾಯಿತು. ‘ಅರ್ಜುನ್ ರೆಡ್ಡಿ’ ಪ್ರೀಮಿಯರ್ ಶೋ ಮುಗಿದಾಗ ನೀನು ನನ್ನನ್ನು ಅಪ್ಪಿಕೊಂಡು ಆಡಿದ ಮಾತುಗಳು ಈಗ 10 ವರ್ಷಗಳ ನಂತರ ಮತ್ತೆ ನೆನಪಾಗುತ್ತಿವೆ. ನಿನಗೆ ಈ ಸಿನಿಮಾ ಇಷ್ಟವಾಗುತ್ತದೆ ಎಂದು ನನಗೆ ಗೊತ್ತಿತ್ತು. ಆದರೆ ನಿನ್ನ ಈ ವಿಮರ್ಶೆ ನನಗೆ ದೊಡ್ಡ ಕಿಕ್ ಕೊಟ್ಟಿದೆ ಎಂದು ಬರೆದುಕೊಂಡಿದ್ದಾರೆ. ನಟಿ ರಶ್ಮಿಕಾ ಕೂಡ ಸಂದೀಪ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಇದನ್ನೂ ಓದಿ:
ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ‘ರಣಬಾಲಿ’ ಚಿತ್ರವು 1870ರ ದಶಕದ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ನಡೆದ ಬರಗಾಲ ಹಾಗೂ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಹೋರಾಡುವ ಒಬ್ಬ ಯೋಧನ ಕಥೆಯಾಗಿದೆ. ಅಕ್ಟೋಬರ್ 16 ರಂದು ತೆರೆಕಂಡಿರುವ ಈ ಚಿತ್ರವು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಯಾದ ನಂತರ ಒಟ್ಟಿಗೆ ನಟಿಸಿರುವ ಮೊದಲ ಸಿನಿಮಾ ಎಂಬುದು ವಿಶೇಷ.



