October 17, 2026
Saturday, October 17, 2026
spot_img

CINE | ‘ಅಕ್ಕ’ ಟೀಸರ್ ಔಟ್: ಗ್ಯಾಂಗ್‌ಸ್ಟರ್ ಲುಕ್‌ನಲ್ಲಿ ಕೀರ್ತಿ ಸುರೇಶ್-ರಾಧಿಕಾ ಆಪ್ಟೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಹುಭಾಷಾ ನಟಿ ಕೀರ್ತಿ ಸುರೇಶ್ ಮತ್ತು ನಟಿ ರಾಧಿಕಾ ಆಪ್ಟೆ ಮೊದಲ ಬಾರಿಗೆ ಒಟ್ಟಿಗೆ ನಟಿಸಿರುವ ಬಹುನಿರೀಕ್ಷಿತ ಗ್ಯಾಂಗ್‌ಸ್ಟರ್ ಡ್ರಾಮಾ ಸರಣಿ ‘ಅಕ್ಕ’ಚಿತ್ರದ ಅಧಿಕೃತ ಟೀಸರ್ ಶನಿವಾರ ಬಿಡುಗಡೆಯಾಗಿದೆ. 1980ರ ದಶಕದ ಹಿನ್ನೆಲೆಯನ್ನು ಹೊಂದಿರುವ ಈ ವೆಬ್ ಸರಣಿಯ ಬಿಡುಗಡೆಯ ದಿನಾಂಕವನ್ನೂ ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ.

ವಿಶೇಷವೆಂದರೆ, ನಟಿ ಕೀರ್ತಿ ಸುರೇಶ್ ಅವರ ಜನ್ಮದಿನದ ಅಂಗವಾಗಿ ನೆಟ್‌ಫ್ಲಿಕ್ಸ್ ಇಂಡಿಯಾ ಈ ಟೀಸರ್ ಅನ್ನು ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಿದೆ. ಈ ಸರಣಿಯು ಇದೇ ಅಕ್ಟೋಬರ್ 30 ರಂದು ನೆಟ್‌ಫ್ಲಿಕ್ಸ್ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ.

ಟೀಸರ್‌ನಲ್ಲಿ ಏನಿದೆ?

ಟೀಸರ್‌ನಲ್ಲಿ ಕೀರ್ತಿ ಸುರೇಶ್ ‘ಭವಾನಿ’ ಎಂಬ ಪ್ರಭಾವಶಾಲಿ ಪಾತ್ರದಲ್ಲಿ ಕಾಣಿಸಿಕೊಂಡರೆ, ರಾಧಿಕಾ ಆಪ್ಟೆ ‘ರುದ್ರಾ’ ಎಂಬ ವಿಭಿನ್ನ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ‘ಪೇರ್ನೂರು’ ಎಂಬ ಸಾಮ್ರಾಜ್ಯದ ಹಿನ್ನೆಲೆಯಲ್ಲಿ ಈ ಕಥೆ ಸಾಗುತ್ತದೆ. ತಲೆಮಾರುಗಳಿಂದ ಮಹಿಳೆಯರೇ ಕಟ್ಟಿ, ಆಳಿ, ರಕ್ಷಿಸಿಕೊಂಡು ಬಂದಿರುವ ಈ ಸಾಮ್ರಾಜ್ಯದಲ್ಲಿ ಅಧಿಕಾರದ ಲಾಲಸೆ, ಸಂಪ್ರದಾಯ ಹಾಗೂ ಎರಡು ಗುಂಪುಗಳ ನಡುವಿನ ತೀವ್ರ ಪೈಪೋಟಿಯ ಸುತ್ತ ಇಡೀ ಸರಣಿ ಹೆಣೆಯಲ್ಪಟ್ಟಿದೆ.

ಯಶ್ ರಾಜ್ ಫಿಲ್ಮ್ಸ್ ನಿರ್ಮಾಣ

ಖ್ಯಾತ ನಿರ್ಮಾಣ ಸಂಸ್ಥೆ ವೈಆರ್‌ಎಫ್ (YRF) ಎಂಟರ್‌ಟೈನ್‌ಮೆಂಟ್ ಈ ಸರಣಿಯನ್ನು ನಿರ್ಮಿಸಿದ್ದು, ಧರ್ಮರಾಜ್ ಶೆಟ್ಟಿ ಅವರು ಈ ಸರಣಿಗೆ ಕಥೆ ಬರೆದು ನಿರ್ದೇಶನ ಮಾಡುವ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಕೀರ್ತಿ ಸುರೇಶ್ ಮತ್ತು ರಾಧಿಕಾ ಆಪ್ಟೆ ಅವರೊಂದಿಗೆ ಹಿರಿಯ ನಟಿ ತನ್ವಿ ಅಜ್ಮಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದಿತ್ಯ ಚೋಪ್ರಾ, ಯೋಗೇಂದ್ರ ಮೊಗ್ರೆ ಮತ್ತು ಅಕ್ಷಯ್ ವಿಧಾನಿ ಈ ಸರಣಿಯ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ನಾಯಕಿಯರು ಹೇಳಿದ್ದೇನು?

ತಮ್ಮ ಹುಟ್ಟಹಬ್ಬದ ದಿನವೇ ಟೀಸರ್ ರಿಲೀಸ್ ಆಗಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಕೀರ್ತಿ ಸುರೇಶ್, “ಪ್ರತಿ ವರ್ಷ ಪ್ರೇಕ್ಷಕರಿಂದ ಸಿಗುವ ಪ್ರೀತಿ ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿಸುತ್ತದೆ. ನನ್ನ ಹೃದಯಕ್ಕೆ ಹತ್ತಿರವಾದ ‘ಅಕ್ಕ’ ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿರುವುದು ಮತ್ತಷ್ಟು ಖುಷಿ ಕೊಟ್ಟಿದೆ. ನಾನು ಇದುವರೆಗೆ ನಟಿಸಿದ ಪಾತ್ರಗಳಲ್ಲೇ ‘ಭವಾನಿ’ ಅತ್ಯಂತ ವಿಶಿಷ್ಟ ಮತ್ತು ನೆನಪಿನಲ್ಲಿ ಉಳಿಯುವ ಪಾತ್ರ” ಎಂದಿದ್ದಾರೆ.

ಇದನ್ನೂ ಓದಿ:

ನಟಿ ರಾಧಿಕಾ ಆಪ್ಟೆ ಮಾತನಾಡಿ, “ಕೀರ್ತಿ ಹುಟ್ಟುಹಬ್ಬದಂದೇ ಟೀಸರ್ ಮತ್ತು ರಿಲೀಸ್ ದಿನಾಂಕ ಪ್ರಕಟವಾಗಿರುವುದು ಬಹಳ ಸಂತೋಷ ನೀಡಿದೆ. ನಾನು ನಿರ್ವಹಿಸಿರುವ ‘ರುದ್ರಾ’ ಪಾತ್ರವು ತನ್ನದೇ ಆದ ಸಿದ್ಧಾಂತಗಳನ್ನು ಹೊಂದಿರುವ, ಜಗತ್ತಿಗೆ ಸವಾಲು ಹಾಕುವ ರಗಡ್ ಪಾತ್ರವಾಗಿದೆ. ಈ ಸರಣಿಯ ಕಥೆ ಮತ್ತು ಪಾತ್ರಗಳ ನಡುವಿನ ವೈವಿಧ್ಯತೆ ನನ್ನನ್ನು ತುಂಬಾ ಆಕರ್ಷಿಸಿತು” ಎಂದು ಹೇಳಿದ್ದಾರೆ.

ಅಕ್ಟೋಬರ್ ಕೊನೆಯ ವಾರದಲ್ಲಿ ಬಿಡುಗಡೆಯಾಗಲಿರುವ ಈ ಮಹಿಳಾ ಪ್ರಧಾನ ಗ್ಯಾಂಗ್‌ಸ್ಟರ್ ಸರಣಿ ಈಗಾಗಲೇ ಭಾರೀ ಕುತೂಹಲ ಮೂಡಿಸಿದೆ.

Must Read