ಮರಳಿನ ಬಿರುಗಾಳಿಗೆ ಇರಾಕ್‌ ತತ್ತರ; 4,000 ಜನರು ಆಸ್ಪತ್ರೆಗೆ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇರಾಕ್‌ನಲ್ಲಿ ಸೋಮವಾರ ಮರಳು ಚಂಡಮಾರುತ ಅಪ್ಪಳಿಸಿದ ಬಳಿಕ 4,000 ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದು ಏಪ್ರಿಲ್ ಮಧ್ಯಭಾಗದ ನಂತರ ಇರಾಕ್‌ಗೆ ಅಪ್ಪಳಿಸಿದ ಎಂಟನೇ ಧೂಳಿನ ಚಂಡಮಾರುತವಾಗಿದೆ. ಉಸಿರಾಟದ ತೊಂದರೆ ಅನುಭವಿಸುತ್ತಿರುವ ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಮಧ್ಯಪ್ರಾಚ್ಯ ದೇಶ ಇರಾಕ್‌ ನಲ್ಲಿ ಮಣ್ಣಿನ ಸವಕಳಿ, ತೀವ್ರ ಬರ ಮತ್ತು ಕಡಿಮೆ ಮಳೆಯಿಂದಾಗಿ ಹವಾಮಾನ ಪದೇ ಪದೆ ಬದಲಾಗುತ್ತಿದ್ದು, ಇದೀಗ ಮರಳಿನ ಬಿರುಗಾಳಿಗೆ ಸಿಲುಕಿ ಜನರು ಜರ್ಜರಿತರಾಗುತ್ತಿದ್ದಾರೆ.
ಮೇ ತಿಂಗಳ ಆರಂಭದಲ್ಲಿ, ಇರಾಕ್‌ನಲ್ಲಿ ಇದೇ ರೀತಿಯ ಮರಳಿನ ಚಂಡಮಾರುತವು ಸ್ಫೋಟಿಸಿತ್ತು. ಆ ವೇಳೆ 5000 ಜನರು ಆಸ್ಪತ್ರೆಗೆ ದಾಖಲಾಗಿದ್ದರು. ಚಂಡಮಾರುತದ ಪರಿಣಾಮದಿಂದಾಗಿ ಅಲ್ಲಿನ ಜನರಿಗೆ ಉಸಿರಾಡಲು ಸಹ ಕಷ್ಟಕರವಾಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಧೂಳಿನ ಚಂಡಮಾರುತದಿಂದಾಗಿ ಇಲ್ಲಿನ ವಿಮಾನ ನಿಲ್ದಾಣಗಳು, ಶಾಲೆಗಳು ಮತ್ತು ಕಚೇರಿಗಳನ್ನು ಮುಚ್ಚಲಾಗಿದೆ.
ವರದಿಗಳ ಪ್ರಕಾರ, ಚಂಡಮಾರುತವು ಎಷ್ಟು ವೇಗವಾಗಿ ಅಪ್ಪಳಿಸಿತು ಎಂದರೆ ರಾಜಧಾನಿ ಬಾಗ್ದಾದ್ ಧೂಳಿನ ಮೋಡಗಳಿಂದ ಆವೃತವಾಗಿತ್ತು. ಚಂಡಮಾರುತದ ಪರಿಣಾಮವು ದಕ್ಷಿಣ ಇರಾಕ್‌ನ ಶಿಯಾ ಪ್ರಾಬಲ್ಯದ ನಜಾಫ್ ಮತ್ತು ಉತ್ತರ ಕುರ್ದ್‌ಗಳು ಸೇರಿದಂತೆ ಇರಾಕ್‌ನ ಇತರ ನಗರಗಳಲ್ಲಿಯೂ ಕಂಡುಬರುತ್ತಿದೆ. ಮರಳು ಬಿರುಗಾಳಿಯಿಂದಾಗಿ ಕಟ್ಟಡಗಳು, ಮನೆಗಳ ಮೇಲ್ಛಾವಣಿ, ಕಾರುಗಳು ಮರಳಿನಿಂದ ಆವೃತವಾಗಿದ್ದವು.
ಮರಳು ಬಿರುಗಾಳಿಯಿಂದ ವಯೋವೃದ್ಧರು, ಅಸ್ತಮಾ, ಹೃದ್ರೋಗದಿಂದ ಬಳಲುತ್ತಿರುವವರಿಗೆ ತೊಂದರೆಯಾಗಿದೆ. ಹೀಗಾಗಿ ಅವರಿಗಾಗಿಯೇ ಆಸ್ಪತ್ರೆಗಳನ್ನು ತೆರೆದಿಡಲು ಸರ್ಕಾರ ನಿರ್ಧರಿಸಿದೆ. 4,000 ಜನರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಇರಾಕ್‌ನ ಆರೋಗ್ಯ ಸಚಿವಾಲಯದ ವಕ್ತಾರ ಸೈಫ್ ಅಲ್-ಬದ್ರ್ ಮಾಹಿತಿ ನೀಡಿದ್ದಾರೆ. ಹಲವರನ್ನು ಐಸಿಯುನಲ್ಲಿ ಇರಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!