ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ವಿಚ್ಛೇದನ ಪಡೆಯಲಿದ್ದಾರೆ ಎಂದು ಕಳೆದ ಕೆಲವು ದಿನಗಳಿಂದ ಗುಸುಗುಸು ಪಿಸುಪಿಸು ಸುದ್ದಿ ಹರಿದಾಡುತ್ತಿದೆ. ಆದರೆ ಇಬ್ಬರಿಂದಲೂ ಈ ಬಗ್ಗೆ ಯಾವುದೇ ಸ್ಪಷ್ಟ ಹೇಳಿಕೆ ಬಂದಿಲ್ಲ. ಪಾಕಿಸ್ತಾನಿ ಮಾಧ್ಯಮಗಳ ಪ್ರಕಾರ, ಇಬ್ಬರೂ ವಿಚ್ಛೇದನಕ್ಕೆ ಸಿದ್ಧರಿದ್ದಾರೆ ಮತ್ತು ಕಾನೂನು ಸಮಸ್ಯೆಗಳನ್ನು ಪರಿಹರಿಸಿದ ನಂತರ ಅಧಿಕೃತವಾಗಿ ವಿಚ್ಛೇದನವನ್ನು ಘೋಷಿಸಬಹುದು ಎಂದು ಪಾಕಿಸ್ತಾನದ ಹಲವು ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಕಟವಾಗಿವೆ.
ಈ ವಾರದ ಆರಂಭದಲ್ಲಿ ಸಾನಿಯಾ ತಮ್ಮ Instagram ನಲ್ಲಿ ಕೆಲವು ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದರು. ಇದು ಅವರ ಪ್ರತ್ಯೇಕತೆಯ ಬಗ್ಗೆ ಊಹಾಪೋಹಗಳಿಗೆ ಉತ್ತೇಜನ ನೀಡಿತು. ಇದರೊಂದಿಗೆ ಸಾನಿಯಾ ತಮ್ಮ ಮಗ ಇಜಾನ್ ಜೊತೆಗಿನ ಚಿತ್ರವನ್ನೂ ಹಂಚಿಕೊಂಡಿದ್ದು, ಅದನ್ನು ‘ನನ್ನ ಕಷ್ಟದ ದಿನಗಳ ಕ್ಷಣಗಳು’ ಎಂದು ಶೀರ್ಷಿಕೆ ನೀಡಿದ್ದರು.
ಪಾಕಿಸ್ತಾನದ ಮಾಧ್ಯಮಗಳಲ್ಲಿ ಸಾನಿಯಾ ಮತ್ತು ಶೋಯೆಬ್ ಡಿವೋರ್ಸ್ ಪಡೆಯುವುದು ಖಚಿತ ಎಂಬ ವರದಿಗಳು ಬರುತ್ತಿವೆ. ಪಾಕಿಸ್ತಾನಿ ಮಾಧ್ಯಮಗಳ ಪ್ರಕಾರ, ಶೋಯೆಬ್ ಪಾಕಿಸ್ತಾನದ ಜನಪ್ರಿಯ ಮಾಡೆಲ್ ಮತ್ತು ಯೂಟ್ಯೂಬರ್ ಅಯೋಶಾ ಒಮರ್ ಅವರೊಂದಿಗೆ ಸಂಬಂಧ ಹೊಂದಿದ್ದೇ ಕ್ರೀಡಾ ದಂಪತಿ ನಡುವೆ ವಿಚ್ಛೇದನದ ಪ್ರಸ್ತಾಪಕ್ಕೆ ಕಾರಣವಾಯಿತು. ಕೆಲವು ತಿಂಗಳ ಹಿಂದೆ ಶೋಯೆಬ್ ಮಾಡೆಲ್ ಜೊತೆ ಫೋಟೋ ಶೂಟ್ ಮಾಡಿದ್ದರು. ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದರ ಜೊತೆಗೆ ಶೋಯೆಬ್ ಮಾಡೆಲ್ ಜೊತೆ ಓಡಾಡುತ್ತಿದ್ದು, ತನ್ನ ಪತ್ನಿ ಸಾನಿಯಾಳನ್ನು ದೂರವಿಟ್ಟಿದ್ದಾನೆ ಎಂದು ಪಾಕ್ ಮಾಧ್ಯಮಗಳಲ್ಲಿ ವರದಿಯಾಗಿದೆ. ವಿಚ್ಛೇದನದ ವಿಚಾರವಾಗಿ ಸಾನಿಯಾ ಅಥವಾ ಶೋಯೆಬ್ ಅವರಿಂದ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.