ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮತ್ತು ರಕ್ಷಣಾ ಸಚಿವರು ನಿರಂತರವಾಗಿ ದೇಶದಿಂದ ಏನನ್ನಾದರೂ ಮರೆಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ತವಾಂಗ್‌ನಲ್ಲಿ ನಡೆದ ಘಟನೆ ತೋರಿಸುತ್ತದೆ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಟೀಕಿಸಿದ್ದಾರೆ. ಶುಕ್ರವಾರ ತವಾಂಗ್‌ನಲ್ಲಿ ನಡೆದ ಘರ್ಷಣೆಯ ಬಗ್ಗೆ ಸರ್ಕಾರ ಏಕೆ ಅಧಿಕೃತ ಹೇಳಿಕೆ ನೀಡಲಿಲ್ಲ ಎಂದು ಪ್ರಶ್ನೆ ಮಾಡಿದರು.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲಡಾಖ್ ಮತ್ತು ಡೋಕ್ಲಾಮ್ ನಂತರ ಚೀನಾ ಸೈನಿಕರು ಪ್ರಸ್ತುತ ತವಾಂಗ್‌ಗೆ ಪ್ರವೇಶಿಸುತ್ತಿದ್ದಾರೆ. ಇತ್ತ ನಾಯಕರು ರಾಜಕೀಯ, ತನಿಖಾ ವ್ಯವಸ್ಥೆ, ವಿಧಾನಸಭೆ ಚುನಾವಣೆ ಮತ್ತು ವಿರೋಧ ಪಕ್ಷಗಳ ಮೇಲೆ ಕೇಂದ್ರೀಕರಿಸುವ ತಮ್ಮ ಗಮನವನ್ನು ಗಡಿಗಳ ಮೇಲೆ ತೋರಿಸಲಿ ಎಂದು ಹರಿಹಾಯ್ದರು. ಚೀನಾದಂತಹ ಶತ್ರು ದೇಶ ಮೂರು ಕಡೆಯಿಂದ ಪ್ರವೇಶಿಸುತ್ತಿದೆ, ನಾವು ಆ ಕಡೆ ಗಮನಹರಿಸಿದ್ದೇ ಆದರೆ ಅದು ನಿಜವಾಗಿಯೂ ದೇಶಕ್ಕೆ ಪ್ರಯೋಜನವನ್ನು ನೀಡುತ್ತದೆ.
ಅರುಣಾಚಲ ಪ್ರದೇಶಕ್ಕೆ ಚೀನಾ ಪ್ರವೇಶಿಸುತ್ತಿರುವುದು ಇದೇ ಮೊದಲಲ್ಲ. ಚೀನಾ ಯಾವಾಗಲೂ ಭೂಪಟದಲ್ಲಿ ಅರುಣಾಚಲ ಪ್ರದೇಶವನ್ನು ತನ್ನ ಭೂಪ್ರದೇಶದ ಭಾಗವಾಗಿ ತೋರಿಸಿದೆ. ಸರ್ಕಾರವು ಹೆಚ್ಚು ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕಾಗಿದೆ ಎಂದು ಸಂಜಯ್ ರಾವತ್ ಸಲಹೆ ನೀಡಿದರು.