ಹೊಸದಿಗಂತ ವರದಿ ಕಾಸರಗೋಡು:
ಇತಿಹಾಸ ಪ್ರಸಿದ್ಧ ಸರೋವರ ಕ್ಷೇತ್ರ ಎಂದೇ ಜನಜನಿತವಾಗಿರುವ ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಲಯದ ಪ್ರತ್ಯಕ್ಷ ದೇವರೆಂದೇ ಭಕ್ತಿಗೆ ಕಾರಣೀಭೂತವಾಗಿದ್ದ ಬಬಿಯಾ ಮೊಸಳೆಯ ಅಂತಿಮ ವಿಧಿ ವಿಧಾನಗಳು ಸೋಮವಾರ ಶಾಸ್ತ್ರೋಕ್ತವಾಗಿ ಜರಗಿತು. ಶ್ರೀ ಕ್ಷೇತ್ರ ಮುಂಭಾಗದ ಬಲ ಪಾರ್ಶ್ವದಲ್ಲಿ ಬಬಿಯಾದ ಅಂತ್ಯ ಸಂಸ್ಕಾರ ನಡೆಸಲಾಯಿತು.
ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿ ಅವರ ನೇತೃತ್ವದಲ್ಲಿ ಅಂತಿಮ ವಿಧಿ ವಿಧಾನ ನೇರವೇರಿಸಲಾಯಿತು. ಸೋಮವಾರ ಬೆಳಗ್ಗಿನಿಂದಲೇ ನಾಡಿನ ವಿವಿಧ ಭಾಗಗಳ ಆಸ್ತಿಕ ಶ್ರದ್ಧಾಳುಗಳು ಬಬಿಯಾದ ಅಂತಿಮ ದರ್ಶನಕ್ಕೆ ಆಗಮಿಸಿದ್ದರು. ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಹಾಗೂ ವಿವಿಧ ಜನಪ್ರತಿನಿಧಿಗಳು, ಅನೇಕ ವಲಯಗಳ ಪ್ರಮುಖರು, ಕಾರ್ಯಕರ್ತರು ಅಂತಿಮ ದರ್ಶನಗೈದರು.
ಅನಂತಪುರ ಕ್ಷೇತ್ರ ಮುಂಭಾಗದಲ್ಲಿ ವಿಶೇಷವಾಗಿ ಭಕ್ತ ಜನರಿಗೆ ಮೊಸಳೆಯ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪರಿಸರದಲ್ಲಿ ಶೋಕ ನಿರತ ಅಸಂಖ್ಯಾತ ಮಂದಿ ಭಕ್ತರು ಬಬಿಯಾ ಮೊಸಳೆಯ ಗುಣಗಾನಗೈದರು. ಪ್ರತ್ಯಕ್ಷ ದೇವರು ಎಂದೇ ಜನಜನಿತವಾಗಿ ವಿಶ್ವ ಪ್ರವಾಸೋದ್ಯಮದ ನಕ್ಷೆಯಲ್ಲಿ ಗುರುತಿಸಿಕೊಂಡಿದ್ದ ಬಬಿಯಾ ಇನ್ನಿಲ್ಲ ಎಂಬ ಜನರ ಕೊರಗು ಎಲ್ಲೆಡೆಯೂ ಎದ್ದು ಕಾಣುತ್ತಿತ್ತು. ನೂರಾರು ಜನರ ಸಮಕ್ಷಮದಲ್ಲಿ ಮಧ್ಯಾಹ್ನ ವೇಳೆಗೆ ಅಂತ್ಯ ಸಂಸ್ಕಾರ ಪೂರ್ಣಗೊಂಡಿತು. ಈ ದೇವರ ಮೊಸಳೆಯು ವಯೋಸಹಜ ಅಲ್ಪಕಾಲದ ಅನಾರೋಗ್ಯದ ಬಳಿಕ ಭಾನುವಾರ ಮಧ್ಯರಾತ್ರಿ ಹರಿಪಾದ ಸೇರಿತ್ತು.