ಸಂತೋಷ್‌ ಆತ್ಮಹತ್ಯೆ ಪ್ರಕರಣ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ಸಚಿವ ಮುರುಗೇಶ್ ನಿರಾಣಿ ವಾಗ್ದಾಳಿ

ಹೊಸದಿಗಂತ ವರದಿ, ಬಾಗಲಕೋಟೆ (ಇಳಕಲ್)
ತಮ್ಮ ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ತಂದಿದ್ದೇನೆ. ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದೇನೆ  ಎಂದು ಹೇಳಿಕೊಳ್ಳುವ ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಮ್‌ ಕ್ಷೇತ್ರದಲ್ಲಿ ನಾಲ್ಕು ಕೋಟಿ ಮೊತ್ತದಷ್ಟು ಕೆಲಸ ನಿರ್ವಹಿಸಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಗೆ ಏಕೆ ಬೆಂಬಲ ನೀಡಲಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಾಗ್ದಾಳಿ ನಡೆಸಿದರು.ಬಾಗಲಕೋಟೆ ಜಿಲ್ಲೆಯ ಇಳಕಲ್ ‌ನಲ್ಲಿ ಮಾತನಾಡಿದ ಅವರು, ನಿಮ್ಮದೆ ಕ್ಷೇತ್ರದಲ್ಲಿ ಕಾಮಗಾರಿ ನಡೆಸಿದ್ದ ಸಂತೋಷ್ ಪಾಟೀಲ್ ಗೆ ಸಹಕಾರ ಕೊಟ್ಟಿದ್ದರೆ ಇಂದು ಆತ ಆತ್ಮಹತ್ಯೆ ಮಾಡಿಕೊಳ್ಳುವಂತಹ  ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.
ಕ್ಷೇತ್ರದಲ್ಲಿ ಕೆಲಸ ಮಾಡಿರುವುದು ನಿಮ್ಮ ಗಮನಕ್ಕೆ ‌ಬಂದ ಕೂಡಲೇ ಬಿಲ್ ಹಣ ಬಿಡುಗಡೆ ಮಾಡಿಸಿಕೊಡಬೇಕಿತ್ತು. ಸಂತೋಷ್ ಪಾಟೀಲ್ ಕಷ್ಟದಲ್ಲಿ ಇರುವುದು  ಗೊತ್ತಿದ್ದರೂ ಏಕೆ ಸಹಾಯ ಮಾಡಿಲ್ಲ ಎಂದು ಪ್ರಶ್ನಿಸಿದರು.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರೇ ನೀವೊಬ್ಬ ರಾಷ್ಟ್ರೀಯ ನಾಯಕರು ಎಂದು ಹೇಳಿಕೊಂಡು‌ ತಿರುಗಾಡುತ್ತೀರಿ. ಸಾವಿರಾರು ಕೋಟಿ ತರುವ ನಿಮಗೆ ನಾಲ್ಕು ಕೋಟಿ ರೂಪಾಯಿ ಹೊರೆಯಾಗುತ್ತಿರಲಿಲ್ಲ. ನಾಲ್ಕು ಕೋಟಿ ರೂಪಾಯಿ ಕೊಡಿಸಲು ಆಗದಿರುವ ನೀವು ಅದರ ನೈತಿಕ ಹೊಣೆಗಾರಿಕೆಯನ್ನೂ  ಹೊರಬೇಕು ಎಂದು ಆಕ್ರೋಶ ಹೊರಹಾಕಿದರು.
ಘಟನೆ ನಡೆದ ಬಳಿಕ ‌ಶಾಸಕಿ ಶವ ಇಟ್ಟುಕೊಂಡು ರಾಜಕೀಯ ಮಾಡುವ ಪ್ರಯತ್ನ ಮಾಡಿದರು. ಆದರೆ ಇದಕ್ಕೆ ಸಂತೋಷ ಪಾಟೀಲ್ ಮನೆಯವರು ಹಾಗೂ ಅವರ ಗ್ರಾಮದವರು ಆಸ್ಪದ ಕೊಟ್ಟಿಲ್ಲ. ಅಲ್ಲದೇ ಶವ ಸಂಸ್ಕಾರ ಮಾಡುವ ಸಂಧರ್ಭದಲ್ಲೂ ಶವವನ್ನು ವಸ್ತುಪ್ರದರ್ಶನ ಮಾಡಲು ಹೊರಟಿದ್ದು ಎಷ್ಟರಮಟ್ಟಿಗೆ ಸರಿ ಎಂದು ಕಿಡಿಕಾರಿದರು.
₹ 5 ಲಕ್ಷಕ್ಕಿಂತ ಹೆಚ್ಚಿನ ಕಾಮಗಾರಿ ಮಾಡಬೇಕಾದರೆ ಟೆಂಡರ್ ಪ್ರಕ್ರಿಯೆ ಮಾಡಲೇಬೇಕು ಅದೊಂದು ಪ್ರಕ್ರಿಯೆ ಇದೆ. ಇಲ್ಲಿ ಅಂತಹ ಯಾವುದೇ ಘಟನೆಗಳು ನಡೆದಿಲ್ಲ. ಈಶ್ವರಪ್ಪನವರು ನಿರ್ದೋಷಿ ಎನ್ನುವುದು
ಸಾಬೀತು ಆಗಲಿದೆ ಎಂಬ ವಿಶ್ವಾಸವನ್ನು ‌ಸಚಿವ ಮುರುಗೇಶ್ ನಿರಾಣಿ ವ್ಯಕ್ತಪಡಿಸಿದರಲ್ಲದೇ, ಪ್ರಕರಣದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!