ಸರಸಂಘಚಾಲಕರ ವಿಜಯದಶಮಿ ಭಾಷಣ- ಸ್ತ್ರೀ ಸಬಲೀಕರಣ, ಮಾತೃಭಾಷಾ ಶಿಕ್ಷಣ, ಉದ್ಯೋಗ ಕೌಶಲ… ಇಲ್ಲಿದೆ ಸಾರಾಂಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ನವರಾತ್ರಿಯ ಕೊನೆಯ ದಿನವಾದ ಇಂದು ನಾಗಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ವಿಜಯ ದಶಮಿ ಉತ್ಸವವನ್ನು ಆಚರಿಸಲಾಯಿತು. ನೂರಾರು ಸ್ವಯಂಸೇವಕರಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಈ ವೇಳೆ ದೇಶದ ಜನತೆಯನ್ನು ಉದ್ದೇಶಿಸಿ ಸಂಘದ ಸರಸಂಘಚಾಲಕರಾದ ಮೋಹನ್‌ ಭಾಗ್ವತ್‌ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ಸಂತೋಷ್ ಯಾದವ್‌ ಭಾಗವಹಿಸಿದ್ದರು. ವಿದರ್ಭ ಪ್ರಾಂತ, ನಾಗಪುರ ಮಹಾನಗರದ ಸಂಘಚಾಲಕರುಗಳೂ ಹಾಜರಿದ್ದರು. ಈ ವೇಳೆ ದೇಶವನ್ನುದ್ದೇಶಿಸಿ ಮಾತನಾಡಿದ ಸರಸಂಘಚಾಲಕ ಮೋಹನ್‌ ಭಾಗ್ವತ್‌ ಅವರ ಭಾಷಣದ ಸಾರ ಸಂಗ್ರಹ ಇಲ್ಲಿದೆ.

  • ವ್ಯಕ್ತಿ ನಿರ್ಮಾಣದ ಶಾಖಾ ಪದ್ಧತಿಯು ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಸಂಘ ಮತ್ತು ಸಮಿತಿಯಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿದೆ. ಉಳಿದೆಲ್ಲ ಕಾರ್ಯಗಳಲ್ಲಿ ಮಹಿಳೆಯರು ಪುರುಷರು ಎಂಬ ಭೇದವಿಲ್ಲದೆ, ಎಲ್ಲರೂ ಒಟ್ಟಿಗೆ ಕಾರ್ಯ ಸಂಪನ್ನಗೊಳಿಸುತ್ತಾರೆ. ಭಾರತೀಯ ಪರಂಪರೆಯಲ್ಲಿ ಇದೇ ರೀತಿಯ ಪೂರಕ ದೃಷ್ಟಿಯ ವಿಚಾರವನ್ನೇ ಮುಂದಿಡಲಾಗಿದೆ. ನಾವು ಆ ದೃಷ್ಟಿಯನ್ನು ಮರೆತಿದ್ದೇವೆ, ಮಾತೃಶಕ್ತಿಯನ್ನು ಸೀಮಿತಗೊಳಿಸಿದ್ದೇವೆ.
  • ಭಾರತದ ನವೋತ್ಥಾನದ ಈ ಉಷಃಕಾಲದಲ್ಲಿ ನಮ್ಮ ಮಹಾಪುರುಷರುಗಳ ಆದರ್ಶದಂತೆ ಸ್ತ್ರೀ ಸಬಲೀಕರಣವೂ ಆಗಬೇಕಿದೆ. ಮಹಿಳೆಯರಿಗೆ ಅಗತ್ಯವಾದ ಪ್ರಬೋಧನ, ಸಶಕ್ತೀಕರಣ ಮತ್ತು ಸಮಾನ ಸಹಭಾಗಿತ್ವದ ಅವಶ್ಯಕತೆಯಿದೆ. ಆಗ ಮಾತ್ರ ಸಮಾಜವು ರಾಷ್ಟ್ರದ ನವೋತ್ಥಾನದಲ್ಲಿ ತನ್ನ ಭೂಮಿಕೆಯನ್ನು ಸಫಲವಾಗಿ ನಿರ್ವಹಿಸಲು ಸಾಧ್ಯ.
  • ಭಾರತವು ಜಾಗತಿಕವಾಗಿ ಶಕ್ತಿಶಾಲಿಯಾಗುತ್ತಿದೆ. ಆತ್ಮನಿರ್ಭರತೆಯ ಪಯಣವೂ ವೃದ್ಧಿಯಾಗುತ್ತ ಸಾಗುತ್ತಿದೆ. ವಿಶ್ವದ ರಾಷ್ಟ್ರಗಳಲ್ಲಿ ಈಗ ಭಾರತದ ಮಹತ್ವ ಮತ್ತು ಅದರ ಕುರಿತಾದ ವಿಶ್ವಸನೀಯತೆ ಹೆಚ್ಚಾಗಿದೆ. ಸುರಕ್ಷಾ ಕ್ಷೇತ್ರದಲ್ಲಿ ನಾವು ಹೆಚ್ಚಾಗಿ ಸ್ವಾವಲಂಬಿಗಳಾಗುತ್ತ ನಡೆಯುತ್ತಿದ್ದೇವೆ. ಕೊರೋನಾದ ವಿಪತ್ತಿನ ಸಂದರ್ಭದಿಂದ ಹೊರಬಂದು ನಮ್ಮ ಅರ್ಥವ್ಯವಸ್ಥೆಯು ಅತ್ಯಂತ ವೇಗವಾಗಿ ತನ್ನ ಹಿಂದಿನ ಸ್ಥಿತಿಗೆ ಮರಳಿದೆ. ಈ ದಿಶೆಯಲ್ಲಿ ನಾವೆಲ್ಲ ಮನ, ವಚನ, ಕರ್ಮಬದ್ಧರಾಗಿ ಒಟ್ಟಿಗೆ ನಡೆಯಬೇಕಾದ ಅವಶ್ಯಕತೆಯಿದೆ.
  • ಈ ನವೋತ್ಥಾನ ಪ್ರಕ್ರಿಯೆಯಲ್ಲಿ ಹಲವು ಅಡೆತಡೆಗಳು ಎದುರಾಗಲಿದ್ದು ಮೊದಲನೇಯದು ʼಗತಾನುಗತಿಕತೆʼ. ಅಂದರೆ ಸಮಯದ ಜೊತೆಗೆ ಮನುಷ್ಯರ ಜ್ಞಾನನಿಧಿ ಹೆಚ್ಚಾಗುತ್ತಲೇ ಹೋಗುತ್ತದೆ. ಕಾಲ ಮುಂದೆ ಸಾಗುತ್ತಾ ಕೆಲವು ವಿಚಾರಗಳು ಬದಲಾಗುತ್ತದೆ, ಕೆಲವು ವಿಚಾರಗಳು ನಶಿಸಿಹೋಗುತ್ತದೆ. ಕೆಲವು ಹೊಸ ವಿಚಾರಗಳು ಪರಿಸ್ಥಿತಿಗಳ ನಡುವೆ ಆರಂಭವೂ ಆಗುತ್ತದೆ. ಹಾಗಾಗಿಯೇ ಹೊಸ ಸಂರಚನೆ ಮಾಡುವ ಸಂದರ್ಭದಲ್ಲಿ ಪರಂಪರೆ ಮತ್ತು ಸಾಮಯಿಕತೆಗಳ ಸಮನ್ವಯ ಸಾಧಿಸಬೇಕಾಗುತ್ತದೆ.
  • ಇನ್ನೊಂದು ರೀತಿಯ ತಡೆಯೆಂದರೆ ಏಕತೆ ಮತ್ತು ಉನ್ನತಿಯನ್ನು ಬಯಸದ ಶಕ್ತಿಗಳ ನಿರ್ಮಾಣ. ತಪ್ಪು ಅಥವಾ ಅಸತ್ಯವಾದ ವಿಚಾರವನ್ನು ಪ್ರಸಾರ ಮಾಡುವ, ಭ್ರಮೆಯನ್ನು ಹರಡುವ, ಅಹಿತದ ಕೆಲಸ ಮಾಡುವ ಅದನ್ನು ಪ್ರೋತ್ಸಾಹಿಸುವ ಮತ್ತು ಸಮಾಜದಲ್ಲಿ ಆತಂಕ, ಕಲಹವನ್ನು ಹೆಚ್ಚು ಮಾಡುವ ಆ ರೀತಿಯ ಶಕ್ತಿಗಳ ಕಾರ್ಯಪದ್ಧತಿಯ ಅನುಭವ ನಮಗೆ ಆಗುತ್ತಿದೆ. ಅವರ ಕೆಲಸಗಳಿಗೆ ವಶರಾಗದೆ ಅವರ ಭಾಷೆ, ಪಂಥ, ಪ್ರಾಂತ, ನೀತಿ ಯಾವುದೇ ಇರಲಿ ಅವರೆಡೆಗೆ ನಿರ್ಮೋಹವಾಗಿ ನಿರ್ಭಯತೆಯಿಂದ ಅವರನ್ನು ಖಂಡಿಸಬೇಕಿದೆ.
  • ಭಾರತದಲ್ಲಿ ಇಂದು ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ ಒತ್ತು ನೀಡುವ ನೀತಿ ರೂಪಿತವಾಗಬೇಕು. ಕರಿಯರ್ ರೂಪಿಸಿಕೊಳ್ಳಲು ಶಿಕ್ಷಣದ ಜೊತೆಗೆ ಉದ್ಯಮಶೀಲತೆ, ಸಾಹಸ, ಜಾಣ್ಮೆ ಎಲ್ಲದರ ಅವಶ್ಯಕತೆಯಿದೆ.
  • ಹೊಸ ಶಿಕ್ಷಣ ನೀತಿಯ ಕಾರಣದಿಂದ ವಿದ್ಯಾರ್ಥಿಯೊಬ್ಬ ಒಳ್ಳೆಯ ಮನುಷ್ಯನಾಗಲಿ,ಅವನೊಳಗೆ ದೇಶಭಕ್ತಿಯ ಭಾವನೆಗಳು ಜಾಗೃತವಾಗಲಿ,ಅವನೊಬ್ಬ ಸುಸಂಸ್ಕೃತ ನಾಗರೀಕನಾಗಿ ರೂಪುಗೊಳ್ಳಲಿ ಎಂದು ಎಲ್ಲರೂ ಅಪೇಕ್ಷಿಸುತ್ತೇವೆ. ಆದರೆ ಸುಶಿಕ್ಷತ, ಸಂಪನ್ನ ಮತ್ತು ಪ್ರಬುದ್ಧ ಪಾಲಕರು, ಶಿಕ್ಷಣದ ಸಮಗ್ರ ಉದ್ದೇಶವನ್ನು ಗಮನದಲ್ಲಿರಿಸಿಕೊಂಡವರು ಮಕ್ಕಳನ್ನು ಕೇವಲ ದೊಡ್ಡ ಶಾಲೆಗಳಿಗೆ ಮತ್ತು ಮಹಾವಿದ್ಯಾಲಯಗಳಿಗೆ ಕಳುಹಿಸಿದರೆ ಸಾಕೆ? ಶಿಕ್ಷಣ ಕೇವಲ ಶಾಲೆಗಳ ತರಗತಿಯಲ್ಲಿ ದೊರೆಯುವುದಿಲ್ಲ. ಮನೆಯಲ್ಲಿ ಸಂಸ್ಕಾರದ ವಾತಾವರಣವನ್ನು ನೆಲೆಗೊಳಿಸುವಲ್ಲಿ ಪೋಷಕರದ್ದು; ಸಮಾಜದಲ್ಲಿ ಭದ್ರತೆ, ಸಾಮಾಜಿಕ ಅನುಶಾಸನ ಇತ್ಯಾದಿ ವಾತಾವರಣವನ್ನು ಸರಿಯಾಗಿಟ್ಟುಕೊಳ್ಳುವ ಮಾಧ್ಯಮಗಳದ್ದು; ಜನನಾಯಕರದ್ದು; ಮತ್ತು ಹಬ್ಬ ಹರಿದಿನಗಳು,ಉತ್ಸವ,ಮೇಳ ಇತ್ಯಾದಿ ಸಾಮಾಜಿಕ ಆಯೋಜನೆಗಳದ್ದೂ ಸೇರಿದಂತೆ ಇದರಲ್ಲಿ ಎಲ್ಲರಿಗೂ ಸಮಾನವಾದ, ಮಹತ್ವದ ಭೂಮಿಕೆಯಿದೆ.
  • ಉದ್ಯೋಗ ಅಂದರೆ ಕೇವಲ ನೌಕರಿಯಲ್ಲ. ಈ ಕುರಿತಾದ ತಿಳುವಳಿಕೆಯನ್ನು ಸಮಾಜವು ಅರಿಯಬೇಕಿದೆ. ಯಾವುದೇ ಕೆಲಸ ಪ್ರತಿಷ್ಠೆಯಲ್ಲೂ ಸಣ್ಣದು ಅಥವಾ ದೊಡ್ಡದು ಎಂಬುದಿಲ್ಲ. ಪರಿಶ್ರಮ,ಆರ್ಥಿಕ ಕುಶಲತೆ ಮತ್ತು ಬೌದ್ಧಿಕ ಶ್ರಮ ಇದೆಲ್ಲದರ ಮಹತ್ವವೂ ಸಮಾನವಾಗಿರುವಂಥದ್ದು. ಉದ್ಯಮಶೀಲತೆಯ ಕಡೆಗೆ ಕೆಲಸಮಾಡುವ ಪ್ರವೃತ್ತಿಯುಳ್ಳವರನ್ನು ಪ್ರೋತ್ಸಾಹಿಸಬೇಕಿದೆ.
  • ರಾಷ್ಟ್ರೀಯ ಸ್ವಯಂಸೇವಕ ಸಂಘವು ಸಮಾಜವನ್ನು ಆವಾಹಿಸಿಕೊಳ್ಳಬೇಕು ಎಂಬ ಆಶಯ ಇತ್ತು. ಇಂದು ಅದು ಅನುಭವಕ್ಕೆ ಬರುತ್ತಿದೆ. ಸಮಾಜ ಈಗ ಸಂಘದ ವಿಚಾರವನ್ನು ಕೇಳಿಸಿಕೊಳ್ಳಲು, ಅರ್ಥ ಮಾಡಿಕೊಳ್ಳಲು ತಯಾರಾಗಿದೆ. ಅಜ್ಞಾನ, ಅಸತ್ಯ, ದ್ವೇಷ, ಭಯ ಮತ್ತು ಸ್ವಾರ್ಥದ ಕಾರಣಕ್ಕೆ ಸಂಘದ ವಿರುದ್ಧ ಅಪಪ್ರಚಾರ ನಡೆಯುತ್ತದೆ. ಅದರ ಪ್ರಭಾವವೂ ಕಡಿಮೆಯಾಗುತ್ತಿದೆ.
  • ಮಾತೃಭೂಮಿಗೆ ಅದೆಂತಹ ಸಮಯ ಈಗ ಬಂದಿದೆಯೆಂದರೆ ಇದರ ಸೇವೆಯನ್ನು ಹೊರತುಪಡಿಸಿ ಉಳಿದ ಯಾವುದೂ ಪ್ರಿಯವೆನಿಸ ಕೂಡದು, ಉಳಿದ ಎಲ್ಲವನ್ನೂ ಇದಕ್ಕಾಗಿಯೇ ಮೀಸಲಾಗಿಸಬೇಕಾಗುತ್ತದೆ‌. ನೀವೇನು ಮಾಡಬೇಕೆಂದಿದ್ದೀರೋ ಇದಕ್ಕಾಗಿಯೇ ಮಾಡಿ, ಶರೀರ-ಮನ- ಆತ್ಮ ಎಲ್ಲವನ್ನು ಇದರ ಸೇವೆಗಾಗಿಯೇ ಪ್ರಶಿಕ್ಷಿತಗೊಳಿಸಬೇಕು. ನಿಮ್ಮ ಜೀವಿತವಷ್ಟೂ ಇದಕ್ಕಾಗಿಯೇ ಜೀವಿಸುವುದಕ್ಕಾಗಿ ಪ್ರಾಪ್ತವಾಗಿದೆಯೆಂಬಂತೆ ಜೀವಿಸಬೇಕು. ಸಾಗರದಾಚೆಗಿನ ವಿದೇಶಕ್ಕೆ ಹೋಗುವುದಾದರೂ ಅಲ್ಲಿನ ಜ್ಞಾನದ ಬುತ್ತಿಯನ್ನು ತಂದು ರಾಷ್ಟ್ರದ ಸೇವೆಯನ್ನೆ ಮಾಡುವಂತೆ, ಇದರ ವೈಭವಕ್ಕಾಗಿ ಕೆಲಸ ಮಾಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!