ಸರ್ದಾರ್ ಪಟೇಲ್ ಜನ್ಮ ಜಯಂತಿ: ಬಿಜೆಪಿಯಿಂದ ಏಕತಾ ನಡಿಗೆ ಆಯೋಜನೆ

ಹೊಸದಿಗಂತ ಕಲಬುರಗಿ:

ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ದೇಶದ ಐಕ್ಯತೆಗಾಗಿ ನಗರದಲ್ಲಿ ಬಿಜೆಪಿ ವತಿಯಿಂದ ಏಕತೆ ನಡಿಗೆ (ರನ್ ಫಾರ್ ಯೂನಿಟಿ) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ನಗರದ ಜಗತ್ ವೃತ್ತದಿಂದ, ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದವರೆಗೆ ಕಾಲ್ನಡಿಗೆಯಲ್ಲಿ ಓಟ ನಡೆಸಿದ ಬಿಜೆಪಿ ನಾಯಕರು ಏಕತೆಯ ಓಟದಲ್ಲಿ ಪಾಲ್ಗೊಂಡಿದ್ದರು.

ಸರ್ದಾರ್ ಪಟೇಲರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸರ್ದಾರ್ ಪಟೇಲರ ೧೫೦ನೇ ಜನ್ಮಜಯಂತಿ ಅಂಗವಾಗಿ ಹಾಗೂ ದೇಶದ ಐಕ್ಯತೆಗಾಗಿ ಏಕತೆ ನಡಿಗೆ ಹಮ್ಮಿಕೊಳ್ಳಲಾಗಿದೆ. ಸ್ವತಂತ್ರ ಪೂರ್ವದಲ್ಲಿ ಹೋರಾಟ ಹಾಗೂ ಸ್ವತಂತ್ರದ ನಂತರದ ದಿನಗಳಲ್ಲಿ ಸರ್ದಾರ್ ಪಟೇಲರ ಹೋರಾಟ ಸ್ಮರಣೀಯವಾದದ್ದು ಎಂದು ಹೇಳಿದರು.

ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿ ಬಿಟ್ಟರೆ,ಈ ದೇಶದಲ್ಲಿ ಬೇರಾವ ನಾಯಕರು ಇಲ್ಲವೆಂದು ಕಾಂಗ್ರೆಸ್ ಪಕ್ಷ ಒಳ ಒಳಗೆ ಗುಣು ಗುಣು ಮಾಡುತ್ತೆ. ಸರ್ದಾರ್ ಪಟೇಲರು ಈ ರಾಷ್ಟ್ರದ ನಾಯಕ ಎಂಬುದನ್ನು ಕಾಂಗ್ರೆಸ್ ಮರೆತಿದ್ದು, ರಾಷ್ಟ್ರ ನಾಯಕರನ್ನು ಗುರುತಿಸುವ ಮನೋಭಾವ ಕಾಂಗ್ರೆಸ್ ನಾಯಕರಿಗೆ ಇಲ್ಲ ಎಂದರು.

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅನುಮಾನ ಮಾಡಿದ್ದು ಸಾಲದೆಂಬಂದೆ, ಮೊನ್ನೆಯಷ್ಟೇ ಪ್ರಿಯಾಂಕಾ ಗಾಂಧಿ ಅವರ ನಾಮಪತ್ರ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ದಲಿತ ಸಮುದಾಯದ ನಾಯಕ ಎಂಬ ಕಾರಣಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊರಗಡೆ ನಿಲ್ಲಿಸುವ ಮೂಲಕ, ಗಾಂಧಿ ಪರಿವಾರ ದಲಿತರಿಗೆ ಅಪಮಾನ ಮಾಡಿದೆ ಎಂದ ಅವರು, ಕಾಂಗ್ರೆಸ್ ಡಿಎನ್ಎ ಯಲ್ಲೆ ದಲಿತ ವಿರೋಧಿತನವಿದೆ ಎಂದು ಕಿಡಿಕಾರಿದರು.

370 ಆರ್ಟಿಕಲ್ ಮೂಲಕ ದೇಶವನ್ನು ತುಂಡು ಮಾಡುವ ಕೆಲಸ ಕಾಂಗ್ರೆಸ್ ಮಾಡಿದರೇ, ಪ್ರಧಾನಿ ನರೇಂದ್ರ ಮೋದಿ ಅವರು ಅದನ್ನು ತೆಗೆಯುವ ಮೂಲಕ ದೇಶವನ್ನು ಒಂದುಗೂಡಿಸುವ ಕೆಲಸ ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ಪ್ರಧಾನ ಕಾರ್ಯದರ್ಶಿ, ಉಮೇಶ್ ಪಾಟೀಲ್, ಅಂಬಾರಾಯ ಅಷ್ಟಗಿ, ಬಸವರಾಜ ಬೆಣ್ಣೂರ, ಗಿರಿರಾಜ್ ಯಳಮೇಲಿ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!