ವಿಚಾರಣೆಗೆ ನಾನು ಸಿದ್ಧ: ಜಯಲಲಿತಾ ವೈದ್ಯಕೀಯ ವಿಚಾರದಲ್ಲಿ ನನ್ನ ಹಸ್ತಕ್ಷೇಪವಿಲ್ಲ- ಶಶಿಕಲಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಮುಖ್ಯಸ್ಥೆ ದಿವಂಗತ ಜಯಲಲಿತಾ ಅವರ ಸಾವಿನ ತನಿಖೆ ನಡೆಸಿದ ಆರುಮುಗಸ್ವಾಮಿ ವಿಚಾರಣಾ ಸಮಿತಿ ತನ್ನ ವರದಿಯಲ್ಲಿ ಸಂಚಲನ ಮಾಹಿತಿಯನ್ನು ನೀಡಿದೆ. ಎಐಎಡಿಎಂಕೆಯ ಬಹಿಷ್ಕೃತ ನಾಯಕಿ ಶಶಿಕಲಾ, ಜಯಲಲಿತಾ ಅವರ ಆಪ್ತ ವೈದ್ಯ ಕೆ.ಎಸ್.ಶಿವಕುಮಾರ್, ಅಂದಿನ ಆರೋಗ್ಯ ಕಾರ್ಯದರ್ಶಿ ರಾಧಾಕೃಷ್ಣನ್ ಮತ್ತು ಆರೋಗ್ಯ ಸಚಿವ ಸಿ.ವಿಜಯಭಾಸ್ಕರ್ ಅವರು ಜಯಲಲಿತಾ ಸಾವಿನ ಪ್ರಕರಣದಲ್ಲಿ ತಪ್ಪಿತಸ್ಥರಾಗಿದ್ದು, ಅವರ ವಿರುದ್ಧ ತನಿಖೆಗೆ ಆದೇಶಿಸಬೇಕು ಎಂದು ಆರುಮುಗಸ್ವಾಮಿ ತನಿಖಾ ಆಯೋಗ ಹೇಳಿದೆ. ಈ ವರದಿಗೆ ಶಶಿಕಲಾ ಪ್ರತಿಕ್ರಿಯಿಸಿದ್ದು, ಜಯಲಲಿತಾ ಸಾವಿನ ಪ್ರಕರಣದ ತನಿಖೆ ಎದುರಿಸಲು ಸಿದ್ಧ ಎಂದು ಹೇಳಿದ್ದಾರೆ.

ಆರುಮುಗಸ್ವಾಮಿ ವರದಿಯಲ್ಲಿ ನನ್ನ ವಿರುದ್ಧ ಬಂದಿರುವ ಎಲ್ಲಾ ಆರೋಪಗಳನ್ನು ನಾನು ನಿರಾಕರಿಸುತ್ತೇನೆ. ಜಯಲಲಿತಾ ಅವರ ವೈದ್ಯಕೀಯ ವಿಚಾರದಲ್ಲಿ ತಾನು ಎಂದಿಗೂ ಹಸ್ತಕ್ಷೇಪ ಮಾಡಿಲ್ಲ ಮತ್ತು ಯಾವುದೇ ರೀತಿಯ ವಿಚಾರಣೆ ಎದುರಿಸಲು ಸಿದ್ಧ ಎಂದು ಶಶಿಕಲಾ ತಿಳಿಸಿದರು. ತಮಿಳುನಾಡು ಮಾಜಿ ಸಿಎಂ ಪನ್ನೀರಸೆಲ್ವಂ ಅವರು ಜಯಲಲಿತಾ ಅವರ ಸಾವಿನ ತನಿಖೆಗೆ ಮನವಿ ಮಾಡಿದ ನಂತರ ಸೆಪ್ಟೆಂಬರ್ 22, 2016 ರಂದು ಅವರು ಆಸ್ಪತ್ರೆಗೆ ದಾಖಲಾದ ನಂತರ ಜಯಲಲಿತಾ ಅವರ ಆರೋಗ್ಯ ಸ್ಥಿತಿ ಮತ್ತು ನಂತರದ ಚಿಕಿತ್ಸೆಯ ಬಗ್ಗೆ ತನಿಖೆ ನಡೆಸಲು ಸರ್ಕಾರವು ಆರುಮುಗಸ್ವಾಮಿ ಆಯೋಗವನ್ನು ನೇಮಿಸಿತ್ತು.

ಆಯೋಗವು ನವೆಂಬರ್ 2017 ರಲ್ಲಿ ಜಯಲಲಿತಾ ಅವರ ಆಪ್ತರು, ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು, ತಮಿಳುನಾಡು ಆರೋಗ್ಯ ಸಚಿವ ವಿಜಯಭಾಸ್ಕರನ್, ಆಗಿನ ಆರೋಗ್ಯ ಕಾರ್ಯದರ್ಶಿ ರಾಧಾಕೃಷ್ಣನ್, ತಮಿಳುನಾಡು ಹಣಕಾಸು ಸಚಿವ ಮತ್ತು ಹಿರಿಯ ಎಐಎಡಿಎಂಕೆ ನಾಯಕ ಪನ್ನೀರಸೆಲ್ವಂರನ್ನು ವಿಚಾರಣೆಗೊಳಪಡಿಸಿತು. ಆರುಮುಗಸ್ವಾಮಿ ಸಮಿತಿಯು ತನ್ನ 608 ಪುಟಗಳ ಅಂತಿಮ ವರದಿಯನ್ನು ತಮಿಳಿನಲ್ಲಿ ಮತ್ತು 500 ಪುಟಗಳ ವರದಿಯನ್ನು ಇಂಗ್ಲಿಷ್‌ನಲ್ಲಿ ಸಲ್ಲಿಸಿದೆ.

159 ಕ್ಕೂ ಹೆಚ್ಚು ಸಾಕ್ಷಿಗಳು ಜಯಲಲಿತಾ ಅವರ ಬಗ್ಗೆ ಆರುಮುಗಸ್ವಾಮಿ ಆಯೋಗದ ಮುಂದೆ ಹಾಜರಾಗಿ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಂಡಿದ್ದಾರೆ. ವಿಧಾನಸಭೆಯಲ್ಲಿ ತನಿಖಾ ಆಯೋಗದ ವರದಿ ಮಂಡಿಸಿದ ತಮಿಳುನಾಡು ಸರ್ಕಾರ, ಕಾನೂನು ತಜ್ಞರ ಅಭಿಪ್ರಾಯ ಪಡೆದು ಕೆಲವು ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!