ಹತ್ತೇ ದಿನದಲ್ಲಿ 12 ಅಪರಾಧಿಗಳ ಶಿರಚ್ಛೇದಿಸಿದ ಸೌದಿ ಅರೇಬಿಯಾ: ಬೆಚ್ಚಿಬೀಳಿಸುವಂತಿದೆ ಅರಬರ ನಾಡಿನ ರಕ್ತಸಿಕ್ತ ಅಧ್ಯಾಯ

ಹೊಸದಿಗಂತ  ಡಿಜಿಟಲ್‌ ಡೆಸ್ಕ್‌
ಸೌದಿ ಅರೇಬಿಯಾ 10 ದಿನಗಳ ಅವಧಿಯಲ್ಲಿ 12 ಅವರಾಧಿಗಳ ತಲೆ ಕತ್ತರಿಸಿದೆ ಎಂದು ಮಾನವ ಹಕ್ಕುಗಳ ಸಂಘಟನೆಯೊಂದು ತಿಳಿಸಿದೆ. ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಈ ಹಿಂದೆ ಇಂತಹ ಶಿಕ್ಷೆಗಳನ್ನು ಕಡಿಮೆ ಮಾಡುವುದಾಗಿ ಪ್ರತಿಜ್ಞೆ ಮಾಡಿದ ಹೊರತಾಗಿಯೂ ದೇಶವು ಈ ವರ್ಷ ದಾಖಲೆಯ ಮರಣದಂಡನೆಗಳನ್ನು ವಿಧಿಸಿದೆ. ಅವುಗಳಲ್ಲಿ ಹೆಚ್ಚಿನವು ಕತ್ತಿಯಿಂದ ಶಿರಚ್ಛೇದಗಳಾಗಿವೆ ಎಂದು ವರದಿ ಸೂಚಿಸುತ್ತದೆ.
ಮಾದಕವಸ್ತು ಸೇವನೆ ಆರೋಪದ ಮೇಲೆ ಜೈಲಿನಲ್ಲಿದ್ದ ಆರೋಪಿಗಳಿಗೆ ಈ ಎರಡು ವಾರಗಳಲ್ಲಿ ಮರಣದಂಡನೆ ವಿಧಿಸಲಾಯಿತು. ಅದರಲ್ಲಿ ಮೂವರು ಪಾಕಿಸ್ತಾನಿಗಳು, ನಾಲ್ಕು ಸಿರಿಯನ್ನರು, ಇಬ್ಬರು ಜೋರ್ಡಾನಿಯನ್ನರು ಮತ್ತು ಮೂವರು ಸೌದಿ ಪ್ರಜೆಗಳು ಸೇರಿದ್ದಾರೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ. ಇದರೊಂದಿಗೆ ಈ ವರ್ಷ ಮರಣದಂಡನೆಗೆ ಒಳಗಾದವರ ಸಂಖ್ಯೆ ಕನಿಷ್ಠ 132 ಕ್ಕೆ ತಲುಪಿದೆ. ಇದು 2020 ಮತ್ತು 2021 ರ ಒಟ್ಟು ಸಂಖ್ಯೆಯನ್ನು ಮೀರಿದೆ ಎಂದು ವರದಿ ಹೇಳಿದೆ.
2018 ರಲ್ಲಿ, ಮೊಹಮ್ಮದ್ ಬಿನ್ ಸಲ್ಮಾನ್ ತಮ್ಮ ಆಡಳಿತವು ಮರಣದಂಡನೆ ಶಿಕ್ಷೆಯ ಪ್ರಮಾಣವನ್ನು ಕಡಿಮೆಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದರು. ಕೊಲೆ ಅಥವಾ ನರಹತ್ಯೆ ತಪ್ಪಿತಸ್ಥರು ಮಾತ್ರ ಮರಣದಂಡನೆಗೆ ಒಳಪಡುತ್ತಾರೆ ಎಂದು ಹೇಳಿದ್ದರು.
2020 ರಲ್ಲಿ, ಜಮಾಲ್ ಖಶೋಗಿ ಹತ್ಯೆಯ ಬಳಿಕ ಸೌದಿಯ ಮರಣದಂಡನೆ ನೀತಿಯ ಬಗ್ಗೆ ತೀವ್ರ ಟೀಕೆಗಳು ಕೇಳಿಬಂದಿದವು. ಈ ರಕ್ತಸಿಕ್ತ ಅಧ್ಯಾಯವನ್ನು ಕೊನೆಗೊಳಿಸಲು ಸೌದಿ ಅರೇಬಿಯಾ ಕಾನೂನನ್ನು ಬದಲಾಯಿಸಿಕೊಳ್ಳುವುದಾಗಿ ಪ್ರಸ್ತಾಪಿಸಿತ್ತು. ಆ ಬಳಿಕ ಗಂಭೀರವಲ್ಲದ ಅಪರಾಧಗಳನ್ನು ಮಾಡಿದವರ ಮೇಲೆ ಮೃದುತ್ವ ತೋರುತ್ತಿರುವ ಸುಳಿವುಗಳು ಕಂಡುಬಂದವು.
ಆದರೆ ಸೌದಿ ಇದೆಲ್ಲವನ್ನು ಹೊರಗಷ್ಟೇ ತೋರಿಸಿಕೊಳ್ಳುತ್ತಿದೆ. ಆಂತರಿಕವಾಗಿ ಯಾವುದೇ ಮುಲಾಜಿಲ್ಲದೆ ಅಪರಾಧಿಗಳ ತಲೆ ಕತ್ತರಿಸುತ್ತಿದೆ. ಆದರೆ ಈಗ ಅವೆಲ್ಲವೂ ರಹಸ್ಯವಾಗಿ ನಡೆಯುತ್ತಿದೆ. ಈ ಮರಣದಂಡನೆಗಳ ರಕ್ತಸಿಕ್ತ ವರ್ಷದಲ್ಲಿ ಸೌದಿ ಅಧಿಕಾರಿಗಳು ಮಾದಕವಸ್ತು ಅಪರಾಧಿಗಳನ್ನು ದೊಡ್ಡ ಸಂಖ್ಯೆಯಲ್ಲಿ ಮತ್ತು ರಹಸ್ಯವಾಗಿ ಗಲ್ಲಿಗೇರಿಸಲು ಪ್ರಾರಂಭಿಸಿದ್ದಾರೆ ಎಂದು ವರದಿ ಹೇಳುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!