Wednesday, September 28, 2022

Latest Posts

ಓಟ್ ಬ್ಯಾಂಕ್ ಗಾಗಿ ಸಾವರ್ಕರ್ ವಿರೋಧಿಸಿದ ಸಿದ್ದು: ಆರೋಪ

ಹೊಸದಿಗಂತ ವರದಿ, ಮಂಡ್ಯ :

ರಾಷ್ಟ್ರಪಿತ ಮಹಾತ್ಮಗಾಂಧಿ, ಇಂದಿರಾಗಾಂಧಿ ಇತರೆ ಕಾಂಗ್ರೆಸ್ ಮುಖಂಡರು ಸಾವರ್ಕರ್‌ನ್ನು ಒಪ್ಪಿಕೊಂಡಿದ್ದಾರೆ. ಆದರೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೇವಲ ಓಟ್‌ಬ್ಯಾಂಕ್ ರಾಜಕಾರಣಕ್ಕಾಗಿ ವೀರ ಸಾವರ್ಕರನ್ನು ವಿರೋಧಿಸುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್ ಆರೋಪಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲ ನಾಯಕರಂತೆ ವೀರ ಸಾವರ್ಕರ್ ಸಹ ಭಾಗಿಯಾಗಿದ್ದರು. ನಿರಂತರವಾಗಿ 14 ವರ್ಷಗಳ ಕಾಲ ಜೈಲಿನಲ್ಲಿದ್ದರು. ಅಂದು ಅವರೊಂದಿಗೆ ಯಾವ ಕಾಂಗ್ರೆಸ್ ಮುಖಂಡರು ಜೈಲಿನೊಳಗೆ ಇದ್ದರೆಂಬ ಬಗ್ಗೆ ಮಾಹಿತಿ ಪಡೆದು ಮಾತನಾಡುವುದು ಒಳಿತು. ಅದು ಬಿಟ್ಟು ಕೇವಲ ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವ ದೃಷ್ಠಿಯಿಂದ ಒಬ್ಬ ಅಪ್ಪಟ ದೇಶ ಭಕ್ತನನ್ನು ಜರಿಯುವುದು ಸಿದ್ದರಾಮಯ್ಯ ಮತ್ತು ಅವರ ಮಗ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಶೋಭೆ ತರುವುದಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸ್ವಾತಂತ್ರ್ಯ ಸಂಗ್ರಾಮದ ಆರಂಭದ ದಿನಗಳಲ್ಲಿ ಯಾರೆಲ್ಲಾ ಇದ್ದರು, ನಂತರ ರಾಷ್ಟ್ರೀಯ ಕಾಂಗ್ರೆಸ್ ಹೆಸರಿನಲ್ಲಿ ಸ್ಥಾಪಿತವಾದ ಸಂಘಟನೆಯೊಂದರ ಅಡಿಯಲ್ಲಿ ಎಲ್ಲ ಜಾತಿ, ಮತ, ಪಂಥ, ವಿವಿಧ ಸಂಘ ಸಂಸ್ಥೆಗಳ ಕಾರ‌್ಯಕರ್ತರು, ರಾಷ್ಟ್ರಪ್ರೇಮಿಗಳು, ಬ್ರಿಟೀಷ್ ವಿರೋಧಿಗಳೂ ಎಲ್ಲರೂ ಒಗ್ಗೂಡಿ ಕಾಂಗ್ರೆಸ್ ಎನ್ನುವ ಸಂಘಟನೆಯನ್ನು ಮುಂದುವರಿಸಿದ್ದರು. ಅದು ಕೇವಲ ಸಾತಂತ್ರ್ಯ ಹೋರಾಟಕ್ಕಾಗಿ ಮಾತ್ರವೇ ಆಗಿತ್ತು. ಆದರೆ ಇಂದು ಅದನ್ನು ತಮ್ಮ ರಾಜಕೀಯ ತೆವಲು ತೀರಿಸಿಕೊಳ್ಳಲು ಉಪಯೋಗಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಜರಿದಿದ್ದಾರೆ.
ಪ್ರಸ್ತುತ ಕುಟುಂಬದ ಪಕ್ಷವೇ ಆಗಿರುವ ಕಾಂಗ್ರೆಸ್‌ನಲ್ಲಿ ನೆಹರು ಹೆಸರು ಮುಂದುವರಿಯದೆ, ಅವರ ಮುಂದಿನ ಪೀಳಿಗೆಗೆ ಗಾಂಧಿ ಎಂಬ ಹೆಸರನ್ನಿಟ್ಟುಕೊಂಡು ರಾಜಕೀಯ ಮಾಡಲು ಹೊರಟಿದ್ದನ್ನು ಈ ದೇಶದ ಯಾವ ಪ್ರಜೆಯೂ ಮರೆತಿಲ್ಲ. ಬ್ರಿಟೀಷರೊಂದಿಗೆ ಏಜೆಂಟರಾಗಿದ್ದುಕೊಂಡು, ಬ್ರಿಟೀಷ್ ಮಹಿಳೆಯರಿಗೆ ಸಿಗರೇಟು ಹಚ್ಚಿಸಿಕೊಟ್ಟಿದ್ದ ಯಾವ ನಾಯಕ ಯಾವ ಪಕ್ಷಕ್ಕೆ ಸೇರಿದ್ದರೆಂಬುದನ್ನು ಇತಿಹಾಸ ಓದಿ ಮನನ ಮಾಡಿಕೊಳ್ಳಬೇಕು. ಅದು ಬಿಟ್ಟು ಅಪ್ಪಟ ದೇಶಭಕ್ತನಾಗಿದ್ದ ಸಾವರ್ಕರ್ ಬಗ್ಗೆ ಮಾತನಾಡುತ್ತಲೇ ರಾಜಕೀಯ ಮಾಡುವುದನ್ನು ಇನ್ನಾದರೂ ಬಿಡಬೇಕು ಎಂದು ಕಾಂಗ್ರೆಸ್ಸಿಗರಿಗೆ ಸಲಹೆ ನೀಡಿದ್ದಾರೆ.
ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಭಾರತೀಯರೆಲ್ಲರನ್ನೂ ಒಗ್ಗೂಡಿಸಲು ಗಣೇಶೋತ್ಸವವನ್ನು ಬಾಲಗಂಗಾಧರ ತಿಲಕರು ಅಸ್ತಿತ್ವಕ್ಕೆ ತಂದರು. ಇಂತಹ ಗಣೇಶ ಹಬ್ಬವನ್ನು ರಾಷ್ಟ್ರೀಯ ಹಬ್ಬವನ್ನಾಗಿ ಘೋಷಿಸಬೇಕು. ಅದು ಬಿಟ್ಟು ಗಣೇಶೋತ್ಸವದಲ್ಲೂ ರಾಜಕೀಯದ ಹುಳು ಹುಡುಕುವ ಕಾಂಗ್ರೆಸ್ಸಿಗರು ಇನ್ನಾದರೂ ಪಾಠ ಕಲಿಯಬೇಕು. ಇಲ್ಲದಿದ್ದಲ್ಲಿ ಈ ರಾಷ್ಟ್ರದ ಹಿಂದೂಗಳೇ ತಕ್ಕ ಪಾಠ ಕಲಿಸಲಿದ್ದಾರೆ ಎಂಬುದನ್ನು ಮರೆಯಬಾರದು ಎಂದು ತಿಳಿಸಿದ್ದಾರೆ.
ಟಿಪ್ಪುವಿನ ಮರಣಾನಂತರ ಆತನ ಮಕ್ಕಳು ಬ್ರಿಟೀಷರಿಂದ ಮಾಸಾಶನ ಪಡೆಯುತ್ತಿದ್ದರೆಂದು ದಾಖಲಾಗಿರುವ ಇತಿಹಾಸ ಪುಟಗಳನ್ನೊಮ್ಮೆ ತಿರುವಿ ಹಾಕಬೇಕು. ಇಂತಹ ಮತಾಂಧರ ಪರವಾಗಿ ನಿಂತು ಮತ ಬ್ಯಾಂಕ್ ರಾಜಕೀಯ ಮಾಡಬಾರದು. ಇಂತಹ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿರುವ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ಗೆ ಯಾವ ಸ್ಥಿತಿ ಆಗಿದೆ ಎಂಬುದನ್ನು ಮೊದಲು ಅರಿತುಕೊಳ್ಳಲಿ, ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕೆಂಬ ಹಠಕ್ಕೆ ಬಿದ್ದಿರುವ ಸಿದ್ದರಾಮಯ್ಯ ಅವರು ಇಂತಹ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!