ಹೊಸದಿಗಂತ ಡಿಜಿಟಲ್ ಡೆಸ್ಕ್:
ವೀರ ಸಾವರ್ಕರ್ ಗೋಮಾಂಸ ತಿನ್ನುತ್ತಿದ್ದರು ಎಂಬ ಸಚಿವ ದಿನೇಶ್ ಗುಂಡೂರಾವ್ ಅವರ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು, ಸ್ವತಃ ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದ ಸಚಿವ ದಿನೇಶ್ ಗುಂಡೂರಾವ್, ವೀರ್ ಸಾವರ್ಕರ್ ಅವರ ಸಿದ್ಧಾಂತದ ಕುರಿತು ಹೇಳಿಕೆ ನೀಡಿದ್ದರು. ಸಾವರ್ಕರ್ ಚಿತ್ಪಾವನ ಬ್ರಾಹ್ಮಣರಾಗಿದ್ದರೂ ಅವರು ಗೋಮಾಂಸ ಸೇವಿಸುತ್ತಿದ್ದರು ಎಂದು ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆ ವ್ಯಾಪಕ ಟೀಕೆ ಮತ್ತು ಚರ್ಚೆಗೆ ಗ್ರಾಸವಾಗಿದೆ.
ದಿನೇಶ್ ಗುಂಡೂರಾವ್ ಅವರ ಹೇಳಿಕೆ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಸಾವರ್ಕರ್ ಅವರ ಮೊಮ್ಮಗ ರಂಜಿತ್ ಸಾವರ್ಕರ್ ಅವರು, ‘ಸಾವರ್ಕರ್ ಅವರ ಮಾನಹಾನಿ ಮಾಡುವುದು ಕಾಂಗ್ರೆಸ್ ತಂತ್ರವಾಗಿದೆ. ಅದರಲ್ಲೂ ವಿಶೇಷವಾಗಿ ಚುನಾವಣೆಗಳ ಹೊಸ್ತಿಲಲ್ಲಿ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಹಿಂದು ಸಮಾಜವನ್ನು ವಿವಿಧ ಜಾತಿಗಳಾಗಿ ವಿಭಜಿಸಲು ಬಯಸುತ್ತದೆ. ಕಾಂಗ್ರೆಸ್ ಈಗ ತನ್ನ ನಿಜವಾದ ಮುಖವನ್ನು ತೋರಿಸುತ್ತಿದ್ದು, ಇದು ಬ್ರಿಟಿಷರ ಒಡೆದು ಆಳುವ ನೀತಿಯಾಗಿದೆ. ರಾಹುಲ್ ಗಾಂಧಿ ಇದನ್ನು ಮಾಡುತ್ತಿದ್ದರು ಮತ್ತು ಈಗ ಅವರ ನಾಯಕರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಎಂದು ಅವರು ಹೇಳಿದರು.
ಸಾವರ್ಕರ್ ಅವರು ಗೋಮಾಂಸ ಸೇವಿಸುತ್ತಿದ್ದರು ಎಂಬ ಹೇಳಿಕೆಗಳು ಸುಳ್ಳು ಎಂದು ರಂಜಿತ್ ಸಾವರ್ಕರ್ ಹೇಳಿದ್ದು, ಮಾತ್ರವಲ್ಲದೇ ಅವರ ಹೇಳಿಕೆಗಾಗಿ ಗುಂಡೂರಾವ್ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡುವುದಾಗಿ ಹೇಳಿದ್ದಾರೆ.
ಸಾವರ್ಕರ್ ಅವರು ಗೋಮಾಂಸ ತಿನ್ನುತ್ತಾರೆ ಮತ್ತು ಗೋಹತ್ಯೆಯನ್ನು ಬೆಂಬಲಿಸುತ್ತಿದ್ದರು ಎಂಬ ಹೇಳಿಕೆ ಸುಳ್ಳು, ಮರಾಠಿಯಲ್ಲಿ ಅವರ ಮೂಲ ಲೇಖನದಲ್ಲಿ ಗೋವು ತುಂಬಾ ಉಪಯುಕ್ತವಾಗಿದ್ದು, ಆದ್ದರಿಂದ ಅವುಗಳನ್ನು ದೇವತೆಗಳೆಂದು ಪರಿಗಣಿಸಲಾಗಿದೆ ಎಂದು ಹೇಳಿದ್ದರು ಎಂಬ ಉಲ್ಲೇಖವಿದೆ. ಸಾವರ್ಕರ್ ಅವರು ಗೋರಕ್ಷಾ ಸಮ್ಮೇಳನದ ಅಧ್ಯಕ್ಷರೂ ಕೂಡ ಆಗಿದ್ದರು. ಹೀಗಾಗಿ ಕಾಂಗ್ರೆಸ್ ನಾಯಕರ ಹೇಳಿಕೆ ಶುದ್ಧ ಸುಳ್ಳು. ನಾನು ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿಯೇ ಹೋಗುತ್ತೇನೆ ಎಂದು ರಂಜಿತ್ ಸಾವರ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.