ಸಾವರ್ಕರ್‌ ದೇಶದ ಸ್ವಾತಂತ್ರ್ಯಕ್ಕಾಗಿ ಜೀವನ ಮುಡಿಪಿಟ್ಟ ಮಹೋನ್ನತ ನಾಯಕ: ಕೇಶವ್ ಪ್ರಸಾದ್

ಹೊಸದಿಗಂತ ಡಿಜಿಟಲ್‌ ಡೆಸ್ಕ್ 
ಬೆಂಗಳೂರು: ವೀರ ಸಾವರ್ಕರ್ ಇಡೀ ಭಾರತಕ್ಕೆ ಸ್ವಾತಂತ್ರ್ಯದ ಪ್ರೇರೇಪಣೆ ನೀಡಿದ ಮಹಾನ್ ವ್ಯಕ್ತಿ. ಬುದ್ಧಿವಂತ, ವಿದ್ಯಾವಂತ ವರ್ಗವನ್ನು ಸಾವರ್ಕರ್ ಅವರು ಸ್ವಾತಂತ್ರ್ಯದತ್ತ ಪ್ರೇರೇಪಿಸಿದರು. ಹಿಂದೂ ಮಹಾಸಭಾದ ಸಂಸ್ಥಾಪಕರಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅವರು ಅಖಂಡ ಭಾರತವನ್ನು ಉಳಿಸಿಕೊಳ್ಳಲು ಶತ ಪ್ರಯತ್ನ ಮಾಡಿದ್ದರು. ದೇಶ ವಿಭಜನೆಯಾಗುವುದು ಖಚಿತಗೊಂಡಾಗ ಪಾಕಿಸ್ತಾನ ಮತ್ತು ಇವತ್ತಿನ ಬಾಂಗ್ಲಾ ದೇಶದಲ್ಲಿದ್ದ ಹಿಂದೂಗಳು ಸುರಕ್ಷಿತರಾಗಿ ಭಾರತಕ್ಕೆ ಮರಳುವಲ್ಲಿ ದೊಡ್ಡ ಪಾತ್ರ ವಹಿಸಿದ್ದರು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಕೇಶವ್ ಪ್ರಸಾದ್ ಅವರು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಏರ್ಪಡಿಸಿದ್ದ ವೀರ ಸಾವರ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಶವ್ ಪ್ರಸಾದ್, ದಾಸ್ಯ ಶೃಂಖಲೆಯನ್ನು ಹೇಗೆ ಮುರಿಯಬೇಕು? ಸ್ವಾತಂತ್ರ್ಯಕ್ಕಾಗಿ ಯಾವ ಮಾರ್ಗದಲ್ಲಿ ಹೋರಾಡಬೇಕು ಎಂಬ ವಿಚಾರಗಳ ಕುರಿತಾಗಿ ಸಾವರ್ಕರ್ ಅವರಿಗೆ ಸ್ಪಷ್ಟತೆಯಿತ್ತು. ಸ್ವಾತಂತ್ರ್ಯಕ್ಕಾಗಿ ಅವರು ಜೀವನವನ್ನೇ ಮುಡಿಪಿಟ್ಟಿದ್ದರು. ದೇಶ ಸ್ವಾತಂತ್ರ್ಯಗಳಿಸುವ ನಿಟ್ಟಿನಲ್ಲಿ ಯುವಜನರಿಗೆ ಪ್ರೇರೇಪಣೆ ನೀಡಿ ದೇಶಕ್ಕಂಟಿದ್ದ ದಾಸ್ಯದ ಸಂಕೋಲೆಯನ್ನು ಕಿತ್ತೊಗೆಯುವ ದಿಕ್ಕಿನತ್ತ ಮುನ್ನಡೆಸಿದರು ಎಂದು ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾಗಿದ್ದ ಡಾ. ಗುರೂಜಿ ಅವರ ಜೊತೆ ಸಂಪರ್ಕ ಇರಿಸಿಕೊಂಡು ಪಾಕ್‌ ನಲ್ಲಿದ್ದ ಹಿಂದೂಗಳು ಭಾರತಕ್ಕೆ ಕ್ಷೇಮವಾಗಿ ಹಿಂದಿರುಗುವ ವಿಚಾರದಲ್ಲಿ ಗರಿಷ್ಠ ಪ್ರಯತ್ನ ಮಾಡಿದ್ದರು. ಹಿಂದೂಗಳಿಗೆ ಅನ್ಯಾಯ, ಅವರ ಮೇಲೆ ದೌರ್ಜನ್ಯ ನಡೆದಾಗ ಆಕ್ರೋಶಭರಿತರಾಗಿ ಪಾಕಿಸ್ತಾನದ ವಿಭಜನೆಯನ್ನೇ ರದ್ದುಪಡಿಸಲು ಒತ್ತಾಯಿಸಿದ್ದರು ಎಂದು ವಿವರಿಸಿದರು.
ಪ್ರತಿಯೊಬ್ಬರು ರಾಷ್ಟ್ರದ ಹಿತಕ್ಕಾಗಿ ಶ್ರಮಿಸಬೇಕು ಎಂಬ ಮಹೋನ್ನತ ಚಿಂತನೆ ಅವರದಾಗಿತ್ತು. ತಾವು ಕರಿನೀರಿನ ಶಿಕ್ಷೆ ಅನುಭವಿಸುತ್ತಿದ್ದಾಗ ಸೆಲ್ಯುಲರ್ ಜೈಲಿನ ಗೋಡೆಯ ಮೇಲೆ ಬರೆದ ಬರಹಗಳನ್ನು ಬಿಡುಗಡೆ ಬಳಿಕ ಅಚ್ಚುಹಾಕಿಸಿ ಸ್ವಾತಂತ್ರ್ಯ ಸೇನಾನಿಗಳಾಗಿ ಪ್ರೇರಣೆ ತುಂಬಿದ್ದರು ಎಂದು ತಿಳಿಸಿದರು.
ಮತಾಂತರಗೊಂಡವರನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತರಲು ವಿಶೇಷ ಕೆಲಸ ಮಾಡಿದವರು. ಅಸ್ಪಶ್ಯತೆ ನಿವಾರಣೆಗೂ ಶ್ರಮಿಸಿದ್ದರು. ಸಾವರ್ಕರ್ ಕೇವಲ ಹಿಂದುಳಿದ ವರ್ಗಗಳ ನಾಯಕ ಎಂಬಂತೆ ಕಾಂಗ್ರೆಸ್ಸಿಗರು ಬಿಂಬಿಸುತ್ತಿದ್ದಾರೆ. ಅದರೆ ಅವರೊಬ್ಬ ರಾಷ್ಟ್ರದ ಅಪ್ರತಿಮ ನಾಯಕ. ಇಂದಿನ ದಿನ ಪ್ರೇರಣಾದಾಯಕ ದಿನ. ಸಾವರ್ಕರ್ ಅವರ ವಿಚಾರಧಾರೆಯನ್ನು ನಮ್ಮದಾಗಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಪಕ್ಷದ ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು, ಪಕ್ಷದ ಕಾರ್ಯಕರ್ತರು ಹಾಗೂ ಕಾರ್ಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!