‘ನಂದಿನಿ ಉಳಿಸಿ-ಅಮುಲ್ ತಿರಸ್ಕರಿಸಿ’: ರಾಜ್ಯದಲ್ಲೀಗ ಶುರುವಾಗಿದೆ ಅಭಿಯಾನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯದಲ್ಲಿ ನಂದಿನಿ ಬದಲಿಗೆ ಗುಜರಾತ್ ಮೂಲದ ಅಮುಲ್ ಬ್ರ್ಯಾಂಡ್ ನ್ನು ಜನಪ್ರಿಯಗೊಳಿಸಲು ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಇದೀಗ ಈ ಆರೋಪ ರಾಜಕೀಯ ತಿರುವು ಪಡೆದುಕೊಂಡಿದೆ .

ಡೈರಿ ಬ್ರ್ಯಾಂಡ್ ನಂದಿನಿಯನ್ನು ಹೊರಹಾಕಲು ಆಡಳಿತಾರೂಢ ಬಿಜೆಪಿ ಸಂಚು ಹೂಡಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ, ಮಾಧ್ಯಮಗಳಲ್ಲಿ ನಂದಿನಿ ಉಳಿಸಿ ಅಭಿಯಾನ ಜೋರು ಸದ್ದು ಮಾಡುತ್ತಿದೆ.

ಹಾಲು ಮತ್ತು ಮೊಸರಿನ ರೂಪದಲ್ಲಿ ಹೊಸ ತಾಜಾತನವನ್ನು ಅಮುಲ್ ತರುತ್ತಿದೆ. ಆನ್ ಲೈನ್ ನಲ್ಲಿ ಆರ್ಡರ್ ಮಾಡಿದರೆ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ಅಮುಲ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಕನ್ನಡದಲ್ಲಿ ಟ್ವಿಟ್ಟರ್ ಮತ್ತು ಫೇಸ್ ಬುಕ್ ಖಾತೆಗಳನ್ನು ತೆರೆದಿರುವ ಅಮುಲ್ ಲೀಟರ್ ಗೆ ನಿಗದಿಪಡಿಸಿರುವ ದರವನ್ನು ಸ್ಪಷ್ಟಪಡಿಸಿಲ್ಲ.

ಇದರ ಬೆನ್ನಲ್ಲೇ ಸರಕಾರ ಚುನಾವಣೆಯಲ್ಲಿ ಬ್ಯುಸಿಯಾಗಿರುವುದರಿಂದ ಅದು ಕೆಎಂಎಫ್ ಉಳಿಸಲು ಏನೂ ಮಾಡುವುದಿಲ್ಲ, ನಮ್ಮ ಕೆಎಂಎಫ್, ನಮ್ಮ ನಂದಿನಿಯನ್ನು ನಾವೇ ಉಳಿಸಿಕೊಳ್ಳೋಣ, ಜನರೇ ಮನಸ್ಸು ಮಾಡಿ ಅಮುಲ್ ಉತ್ಪನ್ನಗಳನ್ನು ತಿರಸ್ಕರಿಸೋಣ,” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕರೆ ನೀಡಲಾಗುತ್ತಿದೆ.

ಅಲಿಖಿತ ಸಹಕಾರಿ ನಿಯಮವನ್ನು ಉಲ್ಲಂಘಿಸಿ ರಾಜ್ಯದಲ್ಲಿ ಹಾಲು ಹಾಗೂ ಮೊಸರು ಮಾರಾಟ ಮಾಡುವ ಅಮುಲ್ ಕ್ರಮಕ್ಕೆ ಸಹಕಾರಿ ವಲಯ ಮಾತ್ರವಲ್ಲದೆ, ಸಾರ್ವಜನಿಕರು, ಸಂಘ ಸಂಸ್ಥೆಗಳು ಹಾಗೂ ರಾಜಕೀಯ ನಾಯಕರೂ ತೀವ್ರ ವಿರೋಧ ವ್ಯಕ್ತಪಡಿಸಿ ಖಂಡಿಸಿದ್ದಾರೆ. ಒಂದು ವೇಳೆ ಅಮುಲ್ಗೆ ಸ್ಥಳೀಯ ಮಾರುಕಟ್ಟೆ ಪ್ರವೇಶಕ್ಕೆ ಅವಕಾಶ ನೀಡಿದರೆ ಕನ್ನಡಿಗರ ಅಸ್ಮಿತೆಗೂ ಧಕ್ಕೆಯಾಗಲಿದೆ. ರಾಜ್ಯದ ಸಹಕಾರಿ ವಲಯ ಇಷ್ಟು ವರ್ಷಗಳಿಂದ ಗಳಿಸಿರುವ ಕೀರ್ತಿ ಮಣ್ಣು ಪಾಲಾಗಲಿದೆ ಎಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!