ಕಾಂಗ್ರೆಸ್‌ ಸರ್ಕಾರ ಬೀಳುತ್ತದೆ ಎಂದು ಹೇಳುತ್ತಿರುವುದು ರಾಜಕೀಯ ಗಿಮಿಕ್: ಸಚಿವ ಸಂತೋಷ ಲಾಡ್

ಹೊಸದಿಗಂತ ವರದಿ ವಿಜಯಪುರ:

ರಾಜ್ಯ ಸರ್ಕಾರ ಬೀಳುತ್ತದೆ ಎಂದು ಹೇಳಿಕೊಂಡು ಇನ್ನು ಆರು ತಿಂಗಳ ಕಾಲ ಇದೇ ರಾಜಕೀಯ ಗಿಮಿಕ್ ನಡೆಸುತ್ತಾರೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಲೇವಡಿ ಮಾಡಿದರು.

ಆರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತದೆ ಎಂದು ಬಿಜೆಪಿ, ಜೆಡಿಎಸ್ ನಾಯಕರ ಹೇಳಿಕೆ ವಿಚಾರ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಎಲ್ಲೇ ಗಲಾಟೆ ಆದರೂ ಈ ದೇಶದಲ್ಲಿ ಕಾನೂನು ಇದೆ. ಹಿಂದೂಗಳಿಗೂ ಒಂದೇ ಕಾನೂನು, ಮುಸ್ಲಿಂಮರಿಗೂ ಒಂದೇ ಕಾನೂನು. ಗಲಭೆ ಆಗಿದ್ದರೆ ಸರ್ಕಾರ ಇದೆ, ಇಲಾಖೆ ಇದೆ, ಅದೆಲ್ಲವನ್ನು ನೋಡುತ್ತದೆ. ಆದರೆ ಗಲಾಟೆಗಳನ್ನೆ ಇವರು ಕಾಯುತ್ತಿರುತ್ತಾರೆ, 24 ಗಂಟೆಗಳು ಇವರು ಇದನ್ನೇ ಮಾತನಾಡುತ್ತಾರೆ ಎಂದು ಬಿಜೆಪಿ, ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿಯವರು ಕಳೆದ 10 ವರ್ಷದಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾರೆ, ಬರೀ ಹಿಂದೂ-ಮುಸ್ಲಿಂ ಎನ್ನುತ್ತಿದ್ದಾರೆ. ಯಾವ ಹಿಂದೂ, ಯಾವ ಮುಸ್ಲಿಂ ಬಡ ರೇಖೆಯಿಂದ ಮೇಲೆ ಬಂದಿದ್ದಾರೆ ಹೇಳಿ ಎಂದು ಪ್ರಶ್ನಿಸಿದರು.

ಜಿಡಿಪಿ ದರ ಎಲ್ಲಾ ಪ್ರಚಾರಕ್ಕೆ ಆಗಿದೆ. ಹಿಂದೆಯೂ ನಮ್ಮ ಜಿಡಿಪಿ ಚೆನ್ನಾಗಿತ್ತು. ಐದನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಹೋಗಿದ್ದೇವೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಅಮೆರಿಕಾ, ಚೀನಾದ ಜಿಡಿಪಿ ದರ ಎಷ್ಟಿದೆ. ಚೀನಾದಷ್ಟು ಜನಸಂಖ್ಯೆಯನ್ನು ಹೊಂದಿರೋ ನಾವು ಅವರಿಗಿಂತ ಎಷ್ಟು ಕೆಳಗಿದ್ದೇವೆ ಎಂದು ಹೇಳಲಿ ಎಂದು ಸವಾಲ್ ಹಾಕಿದರು.

ಲೋಸಕಸಭಾ ಚುನಾವಣೆಗಾಗಿ ಇವರು ಹಲವು ಗಿಮಿಕ್ ಗಳನ್ನು ಮಾಡುತ್ತಿದ್ದಾರೆ. ಕಳೆದ ಬಾರಿ ಪುಲ್ವಾಮಾದಲ್ಲಿ ನಡೆದ ಸೈನಿಕರ ಮೇಲಿನ ದಾಳಿಯನ್ನು ಪ್ರಚಾರವನ್ನಾಗಿ ಮಾಡಿಕೊಂಡರು. 350 ಕೆಜಿಗೂ ಅಧಿಕ ಆರ್ ಡಿ ಎಕ್ಸ್ ಎಲ್ಲಿಂದ ಬಂತು ಎಂದು ಮಾಹಿತಿ ನೀಡಲು ಕೇಂದ್ರ ಗುಪ್ತಚರ ಇಲಾಖೆ ವಿಫಲವಾಗಿದೆ. ಪುಲ್ವಾಮಾ ದಾಳಿಯನ್ನು ಪ್ರಚಾರಕ್ಕೆ ಮಾತ್ರ ಬಳಿಸಿಕೊಂಡರು, ಆರ್ ಡಿ ಎಕ್ಸ್ ಮೂಲವನ್ನು ಎಲ್ಲಿಯೂ ಹೇಳಿಲ್ಲ. ಭಯೋತ್ಪಾದಕರು ಎಲ್ಲಿಂದ ಬರುತ್ತಾರೆ, ಕೇಂದ್ರ ಸರ್ಕಾರ ಏನು ಮಾಡುತ್ತಿದೆ. ಎಲ್ಲಾ ಮಾಧ್ಯಮಗಳಲ್ಲಿ ಮೋದಿ ಬಿಟ್ಟು ಯಾರೂ ಕಾಣಿಸಲ್ಲಾ. ಸಚಿವರು, ರಾಷ್ಟ್ರಪತಿಗಳು ಹಿರಿಯ ಆಧಿಕಾರಿಗಳು, ಯಾರೂ ಬರಲ್ಲಾ, ಕೇವಲ ಮೋದಿ ಮೋದಿ ಎಂದು ಪ್ರಚಾರ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ಬಗ್ಗೆ ವಾಗ್ದಾಳಿ ನಡೆಸಿದರು.

ಕಳೆದ ವರ್ಷ ಹುಬ್ಬಳ್ಳಿಯಲ್ಲಿ ನಡೆದಿದ್ದ ಗಲಭೆ ಪ್ರಕರಣದ ಆರೋಪಿತರ ಹೆಸರು ಕೈ ಬಿಡುವಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಪತ್ರ ಬರೆದಿರೋ ವಿಚಾರ ಕುರಿತು ಪ್ರತಿಕ್ರಿಯಿಸಿ, ಡಿ.ಕೆ. ಶಿವಕುಮಾರ ಯಾವ ಹಿನ್ನೆಲೆಯಲ್ಲಿ ಪತ್ರ ಬರೆದಿದ್ದಾರೆ ನನಗೆ ಗೊತ್ತಿಲ್ಲ. ರೈತರ ಗಲಾಟೆ ವೇಳೆ ಮಾಡಿದ ಕೇಸ್, ಹೋರಾಟದ ವೇಳೆ ಆದ ಕೇಸ್‌ಗಳನ್ನ ಕೈ ಬಿಡಿ ಅಂತಾ ಪತ್ರ ಬರೆಯೋದು ಕಾಮನ್. ಆದರೆ ಡಿಕೆಶಿಯವರು ಯಾವ ಹಿನ್ನೆಲೆಯಲ್ಲಿ ಪ್ರಕರಣ ಕೈ ಬಿಡಲು ಪತ್ರ ಬರೆದಿದ್ದಾರೋ ಗೊತ್ತಿಲ್ಲ. ಹೆಚ್ಚಿನ ಮಾಹಿತಿಗೆ ಡಿಕೆಶಿ ಅವರನ್ನೇ ಕೇಳಿ ಎಂದರು.

ರಾಜ್ಯದಲ್ಲಿ ಗಲಭೆಗಳಿಗೆ ಕಾಂಗ್ರೆಸ್ ಸರ್ಕಾರ ಕಾರಣವೆಂದು ವಿರೋಧ ಪಕ್ಷಗಳ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿ, 10 ವರ್ಷದಿಂದ ಕೇಂದ್ರದಲ್ಲಿ ಆಡಳಿತದಲ್ಲಿರೋ ಬಿಜೆಪಿ ಮಣಿಪುರ ಘಟನೆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ?, ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿದ ಹೋರಾಟದಲ್ಲಿ ರೈತರು ಸಾವನ್ನಪ್ಪಿದ್ದರು. ಜನರ ಮೇಲೆ ಲಾಠಿ ಚಾರ್ಜ್ ಆಗಿದೆ ಅದರ ಕುರಿತು ಕೇಂದ್ರದವರು ಏಕೆ ಮಾತನಾಡಲ್ಲ ?, ಆಗ ಕೋಮು ಸೌಹಾರ್ದತೆಗೆ ಧಕ್ಕೆ ಬರಲಿಲ್ವಾ? ಎಂದರು.

ಏನೇ ಆದರೂ ಬರಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಾರೆ. ಕಾಂಗ್ರೆಸ್ ಸರ್ಕಾರ ಮೇಲಿನ ಆರೋಪ ರಾಜಕೀಯ ಗಿಮಿಕ್ ಆಗಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!