ಮೇವು ಹಗರಣ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ಗೆ ಜಾಮೀನು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇವು ಹಗರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿದ್ದ ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ಗೆ ಜಾರ್ಖಂಡ್ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. 73 ವರ್ಷದ ಲಾಲೂ ಪ್ರಸಾದ್‌ ಯಾದವ್‌ ಅವರ ಬಿಗಡಾಯಿಸುತ್ತಿರುವ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ಜಾಮೀನು ಮಂಜೂರು ಮಾಡಲಾಗಿದೆ. ಮೇವು ಹಗರಣ ಪ್ರಕರಣದಲ್ಲಿ ಡೊರಾಂಡಾ ಖಜಾನೆಯಿಂದ 139 ಕೋಟಿ ರೂ.ಗೂ ಹೆಚ್ಚು ಹಣವನ್ನು ದುರುಪಯೋಗಪಡಿಸಿಕೊಂಡ ಅಪರಾಧದ ಮೇಲೆ ಕಳೆದ ಫೆಬ್ರವರಿಯಲ್ಲಿ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯವು ಲಾಲೂಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 60 ಲಕ್ಷ ರೂಪಾಯಿ ದಂಡ ವಿಧಿಸಿತ್ತು.
ಜಾರ್ಖಂಡ್ ಹೈಕೋರ್ಟ್ ಶಿಕ್ಷೆಯನ್ನು ಕಡಿಮೆ ಮಾಡುವಂತೆ ನಮ್ಮ ಅರ್ಜಿಯನ್ನು ಪರಿಗಣಿಸಿ ಜಾಮೀನು ನೀಡಿದೆ. ಈ ಪ್ರಕರಣದಲ್ಲಿ ಅವರಿಗೆ ವಿಧಿಸಲಾಗಿರುವ ಐದು ವರ್ಷಗಳ ಶಿಕ್ಷೆಯಲ್ಲಿ ಅರ್ಧದಷ್ಟು ಶಿಕ್ಷೆಯನ್ನು ಅನುಭವಿಸಿದ್ದಾರೆ ಎಂದು ನಾವು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದೇವೆ. ಪ್ರಸಾದ್ ಈಗಾಗಲೇ 41 ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ. ನ್ಯಾಯಾಲಯವು ಜಾಮೀನು ನೀಡಿದೆ ಎಂದು ಲಾಲು ಪ್ರಸಾದ್ ಪರ ವಕೀಲ ಪ್ರಭಾತ್ ಕುಮಾರ್ ಹೇಳಿದರು.
ಆರೋಗ್ಯ ಸಮಸ್ಯೆಗಳ ಮಾನದಂಡದ ಆಧಾರದ ಮೇಲೆ ಅವರಿಗೆ ಜಾಮೀನು ನೀಡಲಾಗಿದೆ. ಅವರು ಶೀಘ್ರದಲ್ಲೇ ಬಿಡುಗಡೆಯಾಗುತ್ತಾರೆ. ನ್ಯಾಯಾಲಯವು ಲಾಲೂ ಪ್ರಸಾದ್‌ಗೆ 1 ಲಕ್ಷ ಶ್ಯೂರಿಟಿ ಮೊತ್ತ ಮತ್ತು ರೂ 10 ಲಕ್ಷ ದಂಡವನ್ನು ಪಾವತಿಸುವಂತೆ ಸೂಚಿಸಿದೆ ಅವರ ವಕೀಲರು ಮಾಹಿತಿ ನೀಡಿದ್ದಾರೆ.
ಹಗರಣದ ಅವಧಿಯಲ್ಲಿ ಪ್ರಸಾದ್ ಅವರು ಮುಖ್ಯಮಂತ್ರಿಯಾಗಿದ್ದರು. ಜೊತೆಗೆ ಅವಿಭಜಿತ ಬಿಹಾರದ ಹಣಕಾಸು ಖಾತೆಯನ್ನು ಹೊಂದಿದ್ದರು. ಪಶು ಸಂಗೋಪನಾ ಇಲಾಖೆ ಮೂಲಕ ಭಾರೀ ಕಿಕ್ ಬ್ಯಾಕ್ ಪಡೆದಿದ್ದರು ಎನ್ನಲಾಗಿದೆ.
ನಕಲಿ ಚಲನ್‌ಗಳು ಮತ್ತು ಬಿಲ್‌ಗಳನ್ನು ಬಳಸಿ ಮತ್ತು ಖಜಾನೆ ಮೂಲಕ ಅಕ್ರಮವಾಗಿ ಹಣ ಬಿಡುಗಡೆ ಮಾಡಲಾಗಿತ್ತು. 1995-96ರ ಅವಧಿಯಲ್ಲಿ ಡೊರಾಂಡಾ ಖಜಾನೆಯಯಿಂದ ಅಕ್ರಮ ಮಾರ್ಗವಾಗಿ 139.35 ಕೋಟಿ ರೂ. ಲೂಟಿ ಮಾಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!