ಮಾಲ್ಡೀವ್ಸ್ ನಲ್ಲಿ ಭಾರತ ವಿರೋಧಿ ಪ್ರತಿಭಟನೆ: ಭಾರತದ ಸಾಗರ ಸುರಕ್ಷತೆಗೀಗ ಸವಾಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ನೆರೆಯ ಪುಟ್ಟ ದ್ವೀಪ ರಾಷ್ಟ್ರವಾಗಿರೋ ಮಾಲ್ಡೀವ್ಸ್‌ ಭಾರತದ ಸುರಕ್ಷೆಯಲ್ಲಿ ಮತ್ತು ಹಿಂದೂ ಮಹಾಸಾಗರದ ಮೇಲೆ ಭಾರತದ ಸಾರ್ವಭೌಮತೆಯನ್ನು ಕಾಯ್ದುಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಚೀನಾದ ʼಮುತ್ತಿನಹಾರʼದಂತಹ ಷಡ್ಯಂತ್ರಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಮಾಲ್ಡೀವ್ಸ್‌ ನ ಅಸ್ಮಿತೆ ಪ್ರಮುಖಪಾತ್ರ ವಹಿಸಿದೆ.

ಆದರೆ ಮಾಲ್ಡೀವ್ಸ್‌ ನಲ್ಲಿ ನಡೆಯುತ್ತಿರೋ ಇತ್ತೀಚಿನ ಬೆಳವಣಿಗೆಗಳು ಭಾರತದ ಪಾಲಿಗೆ ಧನಾತ್ಮಕವಾಗಿಲ್ಲ. ಮಾಲ್ಡಿವ್ಸ್‌ ನಲ್ಲಿ ಕಳೆದೊಂದು ತಿಂಗಳಿನಿಂದ ಭಾರತ ವಿರೋಧಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಯನ್ನುನಿಷೇಧಿಸಿ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಸುಗ್ರೀವಾಜ್ಞೆ ಹೊರಡಿಸಿದ್ದಾರೆ.

ಈ ಪ್ರತಿಭಟನೆಯು ಎರಡು ದೇಶಗಳ ನಡುವೆ ದ್ವೇಷ ಭಾವನೆಗೆ ಕಾರಣವಾಗುತ್ತದೆ ಮತ್ತು ಅಶಾಂತಿಗೆ ಕಾರಣವಾಗುತ್ತದೆ ಎಂದಿರುವ ಅವರು “ವಿವಿಧ ಘೋಷಣೆಗಳ ಅಡಿಯಲ್ಲಿ ಇತರ ದೇಶಗಳ ವಿರುದ್ಧ ದ್ವೇಷವನ್ನು ಪ್ರಚೋದಿಸುವ ಅಭಿಯಾನಗಳನ್ನು ನಿಲ್ಲಿಸುವುದು” ಎಂಬ ಹೆಸರಿನಡಿಯಲ್ಲಿ ಸುಗ್ರೀವಾಜ್ಞೆ ಹೊರಡಿಸಿದ್ದಾರೆ.

ಈ ಹಿಂದೆ ಮಾಲ್ಡಿವ್ಸ್‌ ನಲ್ಲಿರುವ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳಿಗೆ ಬೆದರಿಕೆ ಕರೆಗಳು ಬಂದಿರುವ ಕುರಿತು ಹೆಚ್ಚಿನ ಭದ್ರತೆ ಕೈಗೊಳ್ಳುವಂತೆ ಭಾರತೀಯ ನಿಯೋಗ ಸಾಮಾಜಿಕ ಮಾಧ್ಯಮಗಳ ಮೂಲಕ ಕೇಳಿಕೊಂಡಿತ್ತು. ರಾಜತಾಂತ್ರಿಕರು ಮತ್ತು ರಾಜತಾಂತ್ರಿಕ ನಿಯೋಗಗಳ ಭದ್ರತೆಯನ್ನು ಖಾತ್ರಿಪಡಿಸುವುದು ದೇಶದ ಕರ್ತವ್ಯವಾಗಿದೆ ಎನ್ನುವ ಮೂಲಕ ಅವರಿಗೆ ಹೆಚ್ಚಿನ ಭದ್ರತೆಯನ್ನು ಸೋಲೀಹ್‌ ಒದಗಿಸಿದ್ದರು.

ಭಾರತ ವಿರೋಧಿ ಅಲೆ ಶುರುವಾಗಿದ್ದೆಲ್ಲಿಂದ?

ಡಿಸೆಂಬರ್‌ ತಿಂಗಳಲ್ಲಿ ಜೈಲಿನಿಂದ ಹೊರ ಬಂದ ನಂತರ ಮಾಲ್ಢೀವ್ಸ್‌ ನ ಮಾಜಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ʼಭಾರತ ವಿರೋಧಿʼ ಕ್ಯಾಂಪೇನ್‌ ನ ನೇತೃತ್ವ ವಹಿಸಿಕೊಂಡಿದ್ದಾರೆ. ಈ ಹಿಂದೆ ಇದು ಸೋಷಿಯಲ್‌ ಮೀಡಿಯಾ ಆಕ್ಟಿವಿಸ್ಟ್‌ ಒಬ್ಬನ ಅಡಿಯಲ್ಲಿ ನಡೆಯುತ್ತಿತ್ತು. ಆ ಮೂಲಕ ಭಾರತದ ಕುರಿತು ದ್ವೇಷ ಭಾವನೆಯನ್ನು ಜನರಲ್ಲಿ ಮೂಡಿಸಲಾಗುತ್ತಿದೆ.

2013 ರಿಂದ 18 ರವರೆಗಿನ ತಮ್ಮ ಅಧಿಕಾರಾವಧಿಯಲ್ಲಿ ಯಮೀನ್‌ ತಮ್ಮ ವಿದೇಶಾಂಗ ನೀತಿಗಳಲ್ಲಿ ಚೀನಾ ಪರ ಹೆಚ್ಚಿನ ಒಲವು ತೋರಿದ್ದರು. ಇದು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ಬೆಲ್ಟ್‌ ಅಂಡ್‌ ರೋಡ್‌ ಇನಿಶಿಯೇಟಿವ್‌ ಗೆ ಹೆಚ್ಚಿನ ಕುಮ್ಮಕ್ಕು ನೀಡಿತ್ತು. ಭಾರತದ ಸುರಕ್ಷತೆಯ ಅವಿಭಾಜ್ಯ ಅಂಗವಾಗಿರುವ ಹಿಂದೂ ಮಹಾಸಾಗರದಲ್ಲಿ ʼಡ್ರ್ಯಾಗನ್‌ʼ ಬಂದು ಕೂರುವುದು ಭಾರತದ ಭದ್ರತೆಯ ದೃಷ್ಟಿಯಿಂದ ಅತಿ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಒಂದುವೇಳೆ ಚೀನಾವು ಈ ದ್ವೀಪ ರಾಷ್ಟ್ರದ ಮೇಲೆ ಕಬ್ಜಾ ಮಾಡಿಕೊಂಡರೆ ಭಾರತದ ಪಾಲಿಗೆ ಜಾಗತಿಕ ಹಿನ್ನಡೆಯಾಗುವುದರಲ್ಲಿ ಸಂಶಯವಿಲ್ಲ.

ಪ್ರಸ್ತುತ 2023ರ ಚುನಾವಣೆಯಲ್ಲಿ ಗೆಲುವು ಸಾಧಿಸಲು ಮಾಜಿ ಅಧ್ಯಕ್ಷ ಯಮೀನ್‌ ʼಭಾರತ ವಿರೋಧಿʼ ಅಭಿಯಾನವನ್ನು ಬಳಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರ ಮನೆಯೆದುರು ʼಭಾರತ ವಿರೋಧಿ ಅಭಿಯಾನʼದ ಬ್ಯಾನರ್‌ ಗಳು ತಲೆ ಎತ್ತಿದ್ದವು. ಆದರೆ ಪ್ರಸ್ತುತ ಸರ್ಕಾರವು ಅದನ್ನು ತೆಗೆದು ಹಾಕುವಲ್ಲಿ ಯಶಸ್ವಿಯಾಗಿದೆ. “ದೇಶದಲ್ಲಿ ಪ್ರತಿಭಟನೆಯ ಮೂಲಕ ಅಶಾಂತಿಯ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ. ಈ ಪ್ರತಿಭಟನೆಯನ್ನು ದೇಶ ವಿರೋಧಿ ಕೃತ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ” ಎಂದು ಆರೋಪಿಸಿ ಆಡಳಿತಾರೂಢ ಸೋಲಿಹ್‌ ಸರ್ಕಾರ ʼಭಾರತ ವಿರೋಧಿʼ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ.

ಭಾರತದೊಂದಿಗೆ ಸ್ನೇಹ ಬಯಸಿದ ಸೋಲಿಹ್:

ಯಮೀನ್‌ ಅವಧಿಯಲ್ಲಿ ಹದಗೆಟ್ಟಿದ್ದ ಭಾರತದೊಂದಿಗಿನ ಸಂಬಂಧವನ್ನು ಸರಿಪಡಿಸಿಕೊಳ್ಳುವ ಇಂಗಿತವನ್ನು ಇಬ್ರಾಹಿಂ ಸೋಲೀಹ್‌ ವ್ಯಕ್ತಪಡಿಸಿದ್ದರು. ಇದರೊಂದಿಗೆ ಆಡಳಿತಾರೂಢ ಮಾಲ್ಡಿವಿಯನ್‌ ಡೆಮಾಕ್ರೆಟಿಕ್‌ ಪಕ್ಷವು ಭಾರತದೊಂದಿಗೆ ಮೊದಲ ವಿದೇಶಾಂಗ ನೀತಿಯನ್ನೂ ರಚಿಸಿತ್ತು. ಅದರಿಂದೀಚೆಗೆ ಭಾರತವು ಮಾಲ್ಡೀವ್ಸ್‌ ನೊಂದಿಗಿನ ಸಂಬಂಧವನ್ನು ಪುನಃ ಗಟ್ಟಿಗೊಳಿಸಲು ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದೆ.

ಹಿಂದೂ ಮಹಾಸಾಗರದಲ್ಲಿಸಾರ್ವಭೌಮತೆಯನ್ನುಸಾಧಿಸಲು ಉಭಯ ದೇಶಗಳೂ ಭದ್ರತಾ ಒಪ್ಪಂದಕ್ಕೆ ಸಹಿ ಹಾಕಿವೆ. ಹಿಂದೂ ಮಹಾಸಾಗರದಲ್ಲಿ ಬಲವರ್ಧನೆಗೆ 50 ಮಿಲಿಯನ್‌ವರೆಗಿನ ಸಹಾಯ ನೀಡುವುದಾಗಿ ಭಾರತ ಹೇಳಿದೆ. ʼಉತುರು ತಿಲಫಲ್ಹುʼ ಹವಳದಿಬ್ಬದ ಬಳಿ ಕೋಸ್ಟ್ ಗಾರ್ಡ್ ಬೇಸ್ ಅನ್ನು ಅಭಿವೃದ್ಧಿಪಡಿಸಲು ಭಾರತವು ಸಹಾಯ ಮಾಡುತ್ತಿದೆ. ಇದರೊಟ್ಟಿಗೆ ಭಯೋತ್ಪಾದನೆ ಮತ್ತು ತೀವ್ರವಾದದ ವಿರುದ್ಧ ಹೋರಾಟದಲ್ಲಿ ಸಹಕಾರವನ್ನು ಕೂಡ ಒಪ್ಪಂದದಲ್ಲಿ ಸೇರಿಸಲಾಗಿದೆ.

ಭಾರತ ಮಾಲ್ಡೀವ್ಸ್ ಗೆ ಏನೆಲ್ಲಾ ಮಾಡಿದೆ

ಮಾರ್ಚ್‌ ನಲ್ಲಿ ಮಾಲ್ಡೀವ್ಸ್‌ ಗೆ ಭೇಟಿ ನೀಡಿದ್ದ ವಿದೇಶಾಂಗ ಸಚಿವ ಎಸ್.ಜೈ ಶಂಕರ್‌ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿ ಬಂದಿದ್ದಾರೆ. ಈ ಯೋಜನೆಗಳು ಆಸ್ಪತ್ರೆ, ಕ್ರೀಡಾ ಸೌಲಭ್ಯಗಳು ಮತ್ತು ವಸ್ತುಸಂಗ್ರಹಾಲಯಗಳನ್ನು ಸ್ಥಾಪಿಸುವುದನ್ನು ಒಳಗೊಂಡಿವೆ. ಇದರೊಂದಿಗೆ ಇನ್ನಿತರ 20 ಹೈ ಇಂಪ್ಯಾಕ್ಟ್ ಕಮ್ಯುನಿಟಿ ಡೆವಲಪ್‌ಮೆಂಟ್ ಪ್ರಾಜೆಕ್ಟ್ (ಎಚ್‌ಐಸಿಡಿಪಿ) ಗಳನ್ನು ಭಾರತ ಈಗಾಗಲೇ ನಿರ್ವಹಿಸುತ್ತಿದೆ. ಅಲ್ಲದೇ ಭಾರತವು ಮಾಲ್ಡೀವ್ಸ್‌ನಲ್ಲಿ ʼಗ್ರೇಟರ್ ಮಾಲೆ ಸಂಪರ್ಕ ಯೋಜನೆʼ ಎಂಬ ಹೆಸರಿನ ಅತಿ ದೊಡ್ಡ ಇನ್ಫ್ರಾ ಪ್ರಾಜೆಕ್ಟ್ ಅನ್ನು ಕಾರ್ಯಗತಗೊಳಿಸುತ್ತಿದೆ.

ಮಾಲ್ಡೀವ್ಸ್‌, ಶ್ರೀಲಂಕಾ ಮತ್ತು ಮಾರಿಷಸ್‌ ಗಳನ್ನು ಒಳಗೊಂಡಿರುವ ಕೋಲಂಬೋ ಸೆಕ್ಯುರಿಟಿ ಕಾನ್ಕ್ಲೇವ್‌ನ ಭಾಗವಾಗಿದೆ. ಇದು ಪರಸ್ಪರ ಹಂಚಿಕೊಂಡ ಭದ್ರತಾ ಉದ್ದೇಶಗಳಾಗಿದ್ದು, ಭಾರತವು ಮೊದಲ ಪ್ರತಿಸ್ಪಂದಕ ಮತ್ತು ಭದ್ರತಾ ಪೂರೈಕೆದಾರನೆಂದು ಪರಿಗಣಿಸಲ್ಪಟ್ಟಿದೆ. ಹಿಂದೂ ಮಹಾಸಾಗರದಲ್ಲಿ ಭದ್ರತಾ ಸಹಕಾರವನ್ನು ಇದು ಕಲ್ಪಿಸುತ್ತದೆ.

ಆದರೆ ಮಾಲ್ಡೀವ್ಸ್‌ ನಲ್ಲಿನಡೆಯುತ್ತಿರುವ ʼಭಾರತ ವಿರೋಧಿʼ ಪ್ರತಿಭಟನೆಯು ಇದನ್ನೇ ಪ್ರಚಾರದ ಅಸ್ತ್ರವಾಗಿ ಬಳಸಿಕೊಂಡಿದ್ದು ಭಾರತವು ಮಾಲ್ಡೀವ್ಸ್‌ ನಲ್ಲಿ ಸೇನಾ ಉಪಸ್ಥಿತಿ ನಿರ್ವಹಿಸುತ್ತಿದೆ ಎಂದು ತಗಾದೆ ತೆಗೆದಿದೆ. ಭಾರತದ ಪಾಲಿಗೆ ಇದು ಗಮನ ಹರಿಸಬೇಕಾದ ವಿಷಯವಾಗಿದೆ ಎಂದರೆ ಅತಿಷೆಯಲ್ಲ.

ಬೆಂಕಿಯುಗುಳುವ ʼಡ್ರ್ಯಾಗನ್‌ʼ

ಭಾರತದ ಸಾಂಗತ್ಯಕ್ಕೂ ಮತ್ತು ಚೀನಾದ ಸಾಂಗತ್ಯಕ್ಕೂ ಇರುವ ವ್ಯತ್ಯಾಸವನ್ನು ಮಾಲ್ಡೀವ್ಸ್‌ ನ ಪ್ರತಿಭಟನಾಕಾರರಿಗೆ ಮನವರಿಕೆ ಮಾಡಿಕೊಡುವುದು ತುರ್ತು ಅಗತ್ಯವಾಗಿದೆ. ವೆನಿಜುವೆಲಾ, ಪಾಕಿಸ್ಥಾನ, ಶ್ರೀಲಂಕಾ ಹೀಗೇ ತಾನು ಕೈಯಿಟ್ಟ ದೇಶಗಳನ್ನೆಲ್ಲಾ ದಿವಾಳಿಗೆ ತಂದು ನಿಲ್ಲಿಸಿರುವ ʼಭಸ್ಮಾಸುರʼ ಚೀನಾ, ಮಾಲ್ಡೀವ್ಸ್‌ ನಲ್ಲಿ ಮೇಲುಗೈ ಸಾಧಿಸಿದರೆ ಭಾರತ ಅಡಕತ್ತರಿಯಲ್ಲಿ ಸಿಕ್ಕಂತಾಗಿಬಿಡುತ್ತದೆ ಎಂಬುದು ಆತಂಕಾರಿಯಾದರೂ ಸತ್ಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!