ಹೊಸದಿಗಂತ ಡಿಜಿಟಲ್ ಡೆಸ್ಕ್:
ರಕ್ಷಾ ಬಂಧನದಂದು ತಮ್ಮ ಕುಟುಂಬ, ಒಡಹುಟ್ಟಿದವರಿಂದ ದೂರದ ಗಡಿಯಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಭದ್ರತಾ ಸಿಬ್ಬಂದಿಗೆ ಅಲ್ಲಿನ ಸ್ಥಳೀಯ ಶಾಲಾ ಮಕ್ಕಳು ಸಹೋದರತ್ವ ಪ್ರೀತಿಯನ್ನು ಹಂಚಿದ್ದಾರೆ. ತಮ್ಮ ಪ್ರಾಣ ರಕ್ಷಣೆಗಾಗಿ ಹಗಲು-ರಾತ್ರಿಯೆನ್ನದೆ ಗಡಿ ಕಾಯುತ್ತಿರುವ ಯೋಧರಿಗೆ ರಾಖಿ ಕಟ್ಟಿ ಶಾಲಾ ವಿದ್ಯಾರ್ಥಿನಿಯರು ಕೃತಜ್ಞತೆ ಸಲ್ಲಿಸಿದರು.
ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ಸೆಕ್ಟರ್‌ನಲ್ಲಿ ಶಾಲಾ ಬಾಲಕಿಯರು ಭಾರತೀಯ ಸೇನಾ ಯೋಧರ ಕೈಗೆ ರಾಖಿಗಳನ್ನು ಕಟ್ಟುತ್ತಿರುವ ಚಿತ್ರಗಳು ವೈರಲ್ ಆಗಿವೆ. ಯೋಧರ ಹಣೆಗೆ ತಿಲಕವನ್ನಿಟ್ಟು, ಆರತಿ ಬೆಳಗಿ ಅವರಿಗಾಗಿ ಪ್ರಾರ್ಥನೆ ಸಲ್ಲಿಸಿದ ದೃಶ್ಯ ಕಂಡುಬಂತು.
“ನಮ್ಮ ಭೇಟಿಯ ಉದ್ದೇಶ ಗಡಿಯಲ್ಲಿರುವ ಯೋಧರು, ತಮ್ಮ ಮನೆ ಮತ್ತು ಪ್ರೀತಿಪಾತ್ರರಿಂದ ದೂರವಿರುವವರು ರಕ್ಷಾ ಬಂಧನ ಆಚರಣೆಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದಾಗಿದೆ. ಹಾಗಾಗಿಯೇ ಅವರ ಸಹೋದರಿಯರಂತೆ ಇಂದು ನಾವು ಇಲ್ಲಿದ್ದೇವೆ. ಅವರ ಸುರಕ್ಷತೆಗಾಗಿ ನಾವು ಸರ್ವಶಕ್ತನನ್ನು ಪ್ರಾರ್ಥಿಸಿದ್ದೇವೆ ಎಂದು ಪಡೆಗಳೊಂದಿಗೆ ರಕ್ಷಾ ಬಂಧನ ಆಚರಣೆಯನ್ನು ಆಯೋಜಿಸಿದ್ದ ಸ್ಥಳೀಯ ಸರಪಂಚ್ ಗೀತಾ ದೇವಿ” ಮಾಧ್ಯಮಗಳಿಗೆ ಉತ್ತರಿಸಿದರು.
ಜಮ್ಮು ಮತ್ತು ಕಾಶ್ಮೀರದ ಸಾಂಬಾ ಸೆಕ್ಟರ್‌ನಲ್ಲಿರುವ ಅಂತರಾಷ್ಟ್ರೀಯ ಗಡಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಶಾಲಾ ಮಕ್ಕಳ ಗುಂಪಿನೊಂದಿಗೆ ರಕ್ಷಾ ಬಂಧನವನ್ನು ಆಚರಿಸಿದರು.
ಅಲ್ಲದೆ, ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲೂ ಶಾಲಾ ಬಾಲಕಿಯರ ಗುಂಪೊಂದು ಮುಂದೆ ಬಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಯೋಧರೊಂದಿಗೆ ರಕ್ಷಾ ಬಂಧನವನ್ನು ಆಚರಿಸಿದರು.